Job Alert: ಕರ್ನಾಟಕದಲ್ಲಿ15000 ಶಿಕ್ಷಕರ ನೇಮಕಾತಿ: ಅರ್ಹತೆಗಳು ಏನಿರಬೇಕು ಗೊತ್ತಾ?
ಬೆಂಗಳೂರು, ಡಿ. 11: ರಾಜ್ಯದಲ್ಲಿ BED - DED ಪದವೀಧರರಿಗೆ ಸಂತಸದ ಸುದ್ದಿ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 15 ಸಾವಿರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಅತಿ ಶೀಘ್ರದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಧಿಸೂಚನೆ ಹೊರ ಬೀಳಲಿದ್ದು, ಶಿಕ್ಷಕರ ನೇಮಕಾತಿಗಾಗಿ ನಿಗದಿ ಪಡಿಸಿರುವ ಅರ್ಹತೆಗಳ ವಿವರ ಇಲ್ಲಿದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕ, ಹಾಗೂ ಕರ್ನಾಟಕ ಭಾಗಕ್ಕೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿದೆ. ಇನ್ನೊಂದು ವಾರದಲ್ಲಿ ಹದಿನೈದು ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂಬಂಧ ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಕಾರ್ಯಾಲಯದ ಅಧಿಕಾರಿಗಳು 'ಒನ್ ಇಂಡಿಯಾ ಕನ್ನಡ'ಕ್ಕೆ ಸ್ಪಷ್ಟ ಪಡಿಸಿದ್ದಾರೆ.
ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿತ್ತು. ಇದರ ನಡುವೆ ಕರೊನಾ ಸೋಂಕು ಬಳಿಕ ಲಕ್ಷಾಂತರ ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರ ಶಾಲೆಗಳಿಗೆ ದಾಖಲಾಗಿದ್ದಾರೆ. ಇದರ ನಡುವೆ ಸರ್ಕಾರಿ ಶಾಲಾ ಶಿಕ್ಷಕರು ನಿವೃತ್ತಿ ಬಳಿಕವೂ ಕೆಲ ವರ್ಷಗಳಿಂದ ನೇಮಕಾತಿ ನನೆಗುದಿಗೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ತುರ್ತಾಗಿ ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಶುಕ್ರವಾರ ಒಪ್ಪಿಗೆ ನೀಡಿದೆ. ಇದೀಗ ಹದಿನೈದು ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಇನ್ನು ಹತ್ತು ದಿನದ ಒಳಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಧಿಸೂಚನೆ ಹೊರ ಬೀಳಲಿದೆ ಎಂದು ತಿಳಿದು ಬಂದಿದೆ.

ಶಿಕ್ಷಕರ ನೇಮಕಾತಿಗೆ ಅರ್ಹತೆ:
ರಾಜ್ಯದ ಸರ್ಕಾರಿ ಶಾಲೆಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗುತ್ತಿದೆ. ಪದವಿ ಜತೆಗೆ DED ಮತ್ತು BED ಪದವಿ ಆಗಿರಬೇಕು. ಜತೆಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ(TET) ಉತ್ತೀರ್ಣರಾಗಿರುವರು ಅರ್ಜಿ ಸಲ್ಲಿಸಬಹುದು. ಶಿಕ್ಷಣ ಇಲಾಖೆಯಿಂದಲೇ ಅರ್ಜಿ ಆಹ್ವಾನಿಸಲಾಗುತ್ತಿದೆ. ಅದರಲ್ಲಿ 5 ಸಾವಿರ ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಉಳಿದ ಹತ್ತು ಸಾವಿರ ಶಿಕ್ಷಕರ ಹುದ್ದೆಗಳನ್ನು ಕರ್ನಾಟಕ ವ್ಯಾಪ್ತಿಯಲ್ಲಿ ಬರಲಿದೆ. ವೀಶೇಷವೆಂದರೆ ಪಿಯುಸಿ ಆಧಾರದ ಮೇಲೆ ಡಿಇಡಿ ಮಾಡಿದವರು ಪದವಿ ಹೊಂದಿರಬೇಕು. ಜತೆಗೆ ಟಿಇಟಿ ಪಾಸಾಗಿರಬೇಕು. ಅಂತವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಲಿದ್ದಾರೆ.
ಸ್ಪಧಾತ್ಮಕ ಪರಿಕ್ಷೆ ಮೂಲಕವೇ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಯಲ್ಲಿ ಗಳಿಸುವ ರ್ಯಾಂಕ್ ಆಧಾರದ ಮೇಲೆ ಅರ್ಹರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಯಾವುದೇ ಸಂದರ್ಶನಕ್ಕೆ ಅಂಕ ನಿಗದಿ ಮಾಡುವುದಿಲ್ಲ. ಪಾರದರ್ಶಕ ನೇಮಕಾತಿ ನಡೆಯಲಿದೆ. ಈ ಕುರಿತ ಸಮಗ್ರ ವಿವರ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಶಿಕ್ಷಣ ಸಚಿವರ ಸ್ಪಷ್ಟನೆ:
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಒಟ್ಟು ಹದಿನೈದು ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಮೂಲ ವೃಂದದ ಹತ್ತು ಸಾವಿರ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಐದು ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರ ಕೊರತೆ ನೀಗಿಸಿ ಗುಣಮಟ್ಟದ ಶಿಕ್ಷಣ ನೀಡುವುದು ಇಲಾಖೆಯ ಜವಾಬ್ಧಾರಿ. ಹೀಗಾಗಿ 23 ಸಾವಿರ ಅತಿಥಿ ಉಪನ್ಯಾಸಕರ ಸೇವೆ ಪಡೆಯುತ್ತಿದ್ದು, ಹೆಚ್ಚುವರಿಯಾಗಿ 4 ಸಾವಿರ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಗುರಿ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಇದೀಗ ಕಲ್ಯಾಣ ಕರ್ನಾಟಕ ಮತ್ತು ಕರ್ನಾಟಕದ 15 ಸಾವಿರ ಹುದ್ದೆಗಳ ಮೀಸಲಾಗಿ ವಿಂಗಡಣೆ ಕಾರ್ಯ ಮಾಡಲಾಗುತ್ತಿದೆ. ಖಾಲಿ ಹುದ್ದೆಗಳ ಮೀಸಲಾತಿ ವಿಂಗಡಣೆ ಬಳಿಕ ಅಧಿಸೂಚನೆ ಹೊರಡಿಸಲಾಗುತ್ತದೆ. ಶಿಕ್ಷಣ ಇಲಾಖೆಯಿಂದಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications