ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಚೈತ್ರಾಗೆ ಸರ್ಕಾರದಿಂದ ಅವಮಾನ ಆರೋಪ
ದಸರಾ ಉದ್ಘಾಟನೆಯಾದ ಮೇಲೂ ವಿವಾದಗಳು ಕಡಿಮೆ ಆಗುತ್ತಿಲ್ಲ. ಇದೀಗ ದಸರಾ ಉದ್ಘಾಟನೆ ಸಂದರ್ಭದಲ್ಲಿ ರಾಜ್ಯದ ಕ್ರೀಡಾಪಟುವಿಗೆ ಅವಮಾನ ಮಾಡಲಾಗಿದೆ ಎಂದು ಜಿಡಿಎಸ್ ಆರೋಪ ಮಾಡಿದೆ. ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮಕ್ಕೆ ಖೋ ಖೋ ವಿಶ್ವಕಪ್ ಗೆದ್ದ ನಮ್ಮ ರಾಜ್ಯದ ಹೆಮ್ಮೆಯ ಕ್ರೀಡಾಪಟು ಚೈತ್ರಾ ನೆನಪಾಗಲಿಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನೆ ಮಾಡಲಾಗಿದೆ.
ದಸರಾ ಕ್ರೀಡಾಕೂಟ ಉದ್ಘಾಟನೆಯನ್ನು ಹರಿಯಾಣ ರಾಜ್ಯದ ಕಾಂಗ್ರೆಸ್ ಶಾಸಕಿ ವಿನೇಶ್ ಪೋಗಟ್ ಅವರೊಂದಿಗೆ ನೆರವೇರಿಸಿದ್ದೀರಿ... ಸಂತೋಷ... ಆಕೆ ನಮ್ಮ ದೇಶದ ಹೆಮ್ಮೆಯ ಕುಸ್ತಿಪಟು, ಅವರ ಬಗ್ಗೆ ಅಪಾರವಾದ ಗೌರವವಿದೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟುವಾಗಿದ್ದು ಚೈತ್ರಾ ಮೈಸೂರಿನ ಟಿ. ನರಸೀಪುರ ತಾಲೂಕಿನ ಕುರುಬೂರಿನ ಗ್ರಾಮೀಣ ಪ್ರತಿಭೆ. ಖೋ ಖೋ ವಿಶ್ವಕಪ್‌ನಲ್ಲಿ "ಬೆಸ್ಟ್ ಪ್ಲಯರ್" ಪ್ರಶಸ್ತಿ ಪಡೆದವರು.

ಮೈಸೂರು ಉಸ್ತುವಾರಿ ಸಚಿವ ಹಾಗೂ ಟಿ. ನರಸೀಪುರ ಕ್ಷೇತ್ರದ ಶಾಸಕರಾದ ಎಚ್.ಸಿ ಮಹದೇವಪ್ಪ ಅವರೇ ರಾಜ್ಯದ ಸ್ಥಳೀಯ ಕ್ರೀಡಾಪಟುಗಳನ್ನು ಗುರುತಿಸದೆ, ಹೊರ ರಾಜ್ಯದ ಕ್ರೀಡಾಪಟು, ಕಾಂಗ್ರೆಸ್ ಶಾಸಕಿಯನ್ನು ಕರೆದು ಸನ್ಮಾನಿಸುವ ಅವಶ್ಯಕತೆ ಏನಿತ್ತು. ನಿಮ್ಮ ಕ್ಷೇತ್ರದ ಹೆಮ್ಮೆಯ ಸಾಧಕಿ ಕಣ್ಣಿಗೆ ಕಾಣಿಸದಿರುವುದು ದುರಂತ. ಸಿದ್ದರಾಮಯ್ಯನವರೇ ತೋರಿಕೆಗಷ್ಟೇ ಕನ್ನಡ, ಕನ್ನಡಿಗರು ಎನ್ನುವದಲ್ಲ. ನಾಡ ಹಬ್ಬದ ಸಂದರ್ಭದಲ್ಲಿ ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದು ನಿಮ್ಮ ಢೋಂಗಿ ತನಕ್ಕೆ ಸಾಕ್ಷಿ ಎಂದು ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಟ್ವೀಟ್ ಮಾಡಲಾಗಿದೆ.
ಖೇಲೋ ಇಂಡಿಯಾಗೆ ಪ್ರೋತ್ಸಾಹ ನೀಡಿ: ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು, ಕ್ರೀಡಾ ಇಲಾಖೆಯ ಅಧಿಕಾರಿಗಳು 'ಖೇಲೋ ಇಂಡಿಯಾ'ಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕು. ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅದಕ್ಕೆ ತಕ್ಕಂತೆ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಈ ಮೂಲಕ ಮುಂದಿನ ದಿನಗಳಲ್ಲಿ 'ಖೇಲೋ ಇಂಡಿಯಾ' ಕ್ರೀಡಾಕೂಟಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೆಲವೆಡೆ ಕಾಮಗಾರಿ ನಡೆಸದೆ ಗುತ್ತಿಗೆದಾರರು ಬಿಲ್ ಪಡೆದಿರುವ ಬಗ್ಗೆ ದೂರುಗಳು ಬಂದಿವೆ. ಸಾಕಷ್ಟು ಮನೆಗಳಿಗೆ ನಲ್ಲಿ ಸಂಪರ್ಕವನ್ನೇ ಕಲ್ಪಿಸದಿರುವುದು ಕಂಡುಬಂದಿದ್ದು, ಅಂತಹ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಅವರು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದ್ದಾರೆ.












Click it and Unblock the Notifications