ಚಿನ್ನ ಅಡವಿಟ್ಟು ಶಾಮಿಯಾನ, ವಿದ್ಯುತ್ ಬಿಲ್ ಕಟ್ಟಿದ್ದ ಜೆಡಿಎಸ್‌ಗೆ ಹಣದ ಸಮಸ್ಯೆ: ಹೌದು ಎಂದ ಎಚ್‌ಡಿಕೆ
ಬೆಂಗಳೂರು, ಏಪ್ರಿಲ್ 27: ಜೆಡಿಎಸ್ ಪಕ್ಷಕ್ಕೆ ತುಸು ಆರ್ಥಿಕ ಸಮಸ್ಯೆ ಇರುವುದು ನಿಜ. ಆದರೆ ಅದರಿಂದ ನಮ್ಮ 'ಮಿಷನ್ 123' ಗುರಿ ಮುಟ್ಟಲು ಯಾವುದೇ ತೊಂದರೆ ಆಗುವುದಿಲ್ಲ. ಕಾರಣ ನಮಗೆ ಜನರ ಬೆಂಬಲ ಎಂದು ಜೆಡಿಎಸ್ ಹಿರಿಯ ನಾಯಕ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ಪಕ್ಷಕ್ಕೆ ಆಗಾಗ ಆರ್ಥಿಕ ತೊಂದರೆ ಕಾಡುತ್ತಲೇ ಇರುತ್ತದೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಎಚ್‌ಡಿ ಕುಮಾರಸ್ವಾಮಿಯವರು ಹಣಬಲದ ಸಮಸ್ಯೆಯನ್ನು ಒಪ್ಪಿಕೊಂಡರು. ಹಣದ ಸಮಸ್ಯೆ ಇದೇ ಮೊದಲೇನಲ್ಲ. ಹೀಗಾಗಿಯೇ ಶಾಮಿಯಾನ, ಕುರ್ಚಿ, ಧ್ವನಿ ವರ್ಧಕಗಳ ಬಾಡಿಗೆಗೆ ಮತ್ತು ವಿದ್ಯುತ್ ಬಿಲ್ ಪಾವತಿಗೆ ಚಿನ್ನ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಅಡವಿಟ್ಟು ಹಣ ಹೊಂದಿಸಿದ್ದಾಗಿ ಹಿರಿಯ ನಾಯಕರು ತಿಳಿಸಿದ್ದಾರೆಂದು ಅವರು ಹೇಳಿದರು.

ಜೆಡಿಎಸ್‌ಗೆ ಹಣಕಾಸಿನ ಸಮಸ್ಯೆ ಇದೆ ಬಿಟ್ಟರೆ, ಜನ ಬೆಂಬಲದ ಸಮಸ್ಯೆ ಇಲ್ಲ. ಅದರಿಂದಲೇ ನಾವು ಈ ಬಾರಿ ಚುನಾವಣೆಯಲ್ಲಿ 123 ಸೀಟು ಗಳಿಸುವಲ್ಲಿ ಯಶಸ್ವಿಯಾಗುತ್ತೇವೆ. ನಾವು ಯಾರಿಗೂ ಹಣ ಕೊಟ್ಟು ಚುನಾವಣಾ ಪೂರ್ವ ಸರ್ವೆ ಮಾಡಿಸಿಲ್ಲ. ಜನರ ಬೆಂಬಲದ ಆಧಾರದಿಂದಲೇ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದ್ದೇವೆ.
ಜೆಡಿಎಸ್ 123 ಸ್ಥಾನ ಖಚಿತ
ಮಾಧ್ಯಮಗಳಲ್ಲಿ ನೋಡಿದ್ದೇನೆ, ಕೆಲವು ಖಾಸಗಿ ವಾಹಿನಿಗಳು ಜೆಡಿಎಸ್‌ಗೆ 23 ರಿಂದ 24 ಸೀಟು ಬರಲಿವೆ ಎಂದು ಹೇಳಿದ್ದಾರೆ. ಪಾಪ ಅವರು ಮುಂದೆ 1 ಅಂಕಿ ಹಾಕುವುದನ್ನು ಮರೆತಿದ್ದಾರೆ. ನಮ್ಮ ಪಕ್ಷಕ್ಕೆ 123 ಸ್ಥಾನ ಖಚಿತ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪುನರುಚ್ಚರಿಸಿದರು.
ಸಿ ವೋಟರ್ ಸಮೀಕ್ಷೆ ನಿಜವಾಗುವುದಿಲ್ಲ. ಕಾಂಗ್ರೆಸ್‌ಗೆ 150 ಸ್ಥಾನ ಕಾಂಗ್ರೆಸ್ ಬರುತ್ತದೆ ಎಂದು ಡಿಕೆ ಶಿವಕುಮಾರ್ ಅವರು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ಇತ್ತ ಬಿಎಸ್ ಯಡಿಯೂರಪ್ಪನವರು ಸಹ ಜಗದೀಶ್ ಶೆಟ್ಟರ್ ಸೋಲುತ್ತಾರೆ. ಆ ಬಗ್ಗೆ ತಾವು ರಕ್ತದಲ್ಲಿ ಬರೆದು ಕೊಡುತ್ತೇನೆ ಅಂದಿದ್ದನ್ನು ನಾನು ಗಮನಿಸಿದ್ದೇನೆ.

ಯಾರೂ ರಕ್ತದ ಕೊರತೆ ಮಾಡಿಕೊಳ್ಳಬೇಡಿ: ಎಚ್‌ಡಿಕೆ ಟಾಂಗ್
ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳುವುದು ಬೇಡ. ಡಿಕೆ ಶಿವಕುಮಾರ್ ಅವರಿಗೆ ರಕ್ತದ ಕೊರತೆ ಆಗುತ್ತದೆ. ಯಡಿಯೂರಪ್ಪನವರು ಸಹ ರಕ್ತದ ಕೊರತೆ ಮಾಡಿಕೊಳ್ಳುವ ಅಗತ್ಯವಿಲ್ಲ. ಇಲ್ಲಿ ರಕ್ತದಿಂದ ಬರೆದುಕೊಡುವುದು ಮುಖ್ಯವಲ್ಲ. ಜನರು ನಮಗೆ ಮತ ಹಾಕುವುದು ಮುಖ್ಯ ಎಂದು ಉಭಯ ನಾಯಕರಿಗೆ ಅವರು ಟಾಂಗ್ ನೀಡಿದರು. ಯಾವ ಆಧಾರದಲ್ಲಿ ನಿಮಗೆ 150 ಸೀಟುಗಳು ಬರುತ್ತವೇ ಎಂದು ಹೇಳುತ್ತಿದ್ದೀರಿ ತಿಳಿಸಿ ಎಂದು ಕುಮಾರಸ್ವಾಮಿ ಕಾಂಗ್ರೆಸ್-ಬಿಜೆಪಿಗೆ ಪ್ರಶ್ನಿಸಿದರು.
ಜೆಡಿಎಸ್ ಪಂಚರತ್ನ ಯಾತ್ರೆ ವೇಳೆ 106 ಕ್ಷೇತ್ರಗಳಲ್ಲಿ ನೇರವಾಗಿ ಜನರ ಭೇಟಿ ಮಾಡಿದ್ದೇನೆ. ಪ್ರತಿ ದಿನ ಒಂದೊಂದು ಕ್ಷೇತ್ರದಲ್ಲಿ ಸುಮಾರು 50 ಹಳ್ಳಿಗೆ ಹೋಗಿ ಅಲ್ಲಿನ ಜನರ ಅಭಿಪ್ರಾಯ ಆಲಿಸಿದ್ದೇನೆ. ನಮ್ಮ ಪಂಚರತ್ನ, ಜನತಾ ಜಲಧಾರೆ ಯಾತ್ರೆಗಳು ಯಶಸ್ವಿಯಾಗಿವೆ. ಈ ಕಾರಣದಿಂದಲೇ ಜೆಡಿಎಸ್‌ಗೆ 123 ಸ್ಥಾನ ಲಭಿಸಲಿದೆ ಎಂದು ಹೇಳುತ್ತಿದ್ದೇನೆ ಎಂದರು.
ಜೆಡಿಎಸ್ ರೋಡ್ ಶೋಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ. ಆದರೆ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಅಮೀತ್ ಶಾ ಅವರು ದೇವನಹಳ್ಳಿಯಲ್ಲಿ ಜನರಿಲ್ಲ ಎಂದು ರೋಡ್ ರೋವನ್ನೇ ರದ್ದು ಮಾಡಿದ್ದರು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.












Click it and Unblock the Notifications