JDS Election Manifesto 2023: ಕರ್ನಾಟಕದಲ್ಲಿ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಯೋಜನೆ ಏನು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ನಿರತವಾಗಿವೆ. ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ಮತದಾರರನ್ನು ಓಲೈಸಿಕೊಳ್ಳಲು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಈ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಜನತಾ ದಳ (ಜಾತ್ಯಾತೀತ) ಪಕ್ಷ ತನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಜನತಾ ಪ್ರಣಾಳಿಕೆಯ ಹೆಸರಿನ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಅಭಿವೃದ್ಧಿಗೆ ರೂಪಿಸಿರುವ ಅಭಿವೃದ್ಧಿ ಯೋಜನೆಗಳನ್ನು ತಿಳಿಸಲಾಗಿದೆ. ಜನತಾ ಮಿತ್ರ ಎನ್ನುವ ಕಾರ್ಯಕ್ರಮದ ಮೂಲಕ ಈಗಾಗಲೇ ರಾಜ್ಯದಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ್ದು, 80 ಸಾವಿರ ಜನ ಮುಂದಿನ ಸರ್ಕಾರ ಯಾವ ವಿಚಾರಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, "ಕರುನಾಡ ಜನಾಭಿಪ್ರಾಯ ಆಧಾರಿತ ಜನತಾ ಸರ್ಕಾರ' ಮಾಡುವುದೇ ನಮ್ಮ ಗುರಿ ಎಂದು ಜೆಡಿಎಸ್ ಹೇಳಿಕೊಂಡಿದೆ.
ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಜೆಡಿಎಸ್ ಯೋಜನೆ ಏನು?
* ರಾಜ್ಯದಾದ್ಯಂತ ಇರುವ ಮತ್ತು ಗತವೈಭವ ಸಾರುವ ದೇವಾಲಯ, ಮಸೀದಿ ಮತ್ತಯ ಚರ್ಚ್‌ಗಳು, ಪಶ್ಚಿಮ ಘಟ್ಟ ಮನಮೋಹಕ ಪ್ರವಾಸಿ ತಾಣಗಳು, ಜಲಪಾತಗಳು, ವೈವಿಧ್ಯಮಯ ಅರಣ್ಯ ಸಂಪತ್ತು, ಕಡಲತೀರ, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಸುಂದರ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ ಹೆಚ್ಚಿಸುವುದು.
* ಪ್ರವಾಸಿ ತಾಣಗಳಲ್ಲಿ ಹೋಟೆಲ್‌ಗಳು, ಮಾಲ್‌ಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಮೂಲಕ ಪರಿಸರಕ್ಕೆ ಧಕ್ಕೆಯಾಗದಂತೆ ಒದಗಿಸಲು ಒಂದು ನೀಲಿ ನಕ್ಷೆ ತಯಾರಿಸುವುದು. ಪ್ರವಾಸಿ ತಾಣಗಳಲ್ಲಿ ಹೋಟೆಲ್, ಮಾಲ್‌ಗಳ ನಿರ್ಮಾಣ ಮತ್ತು ಇತರೆ ಸೇವೆಗಳ ನಿರ್ವಹಣೆಯನ್ನು ಸ್ಥಳೀಯರಿಗೆ ನೀಡಿ ಉದ್ಯೋಗ ಅವಕಾಶ ಮಾಡಿಕೊಡಲಾಗುವುದು.
* ಅರಮನೆ ನಗರಿ ಮೈಸೂರು ನಗರದ ಸರಹದ್ದಿನಲ್ಲಿ ಮನರಂಜನೆ ಪಾರ್ಕ್ (Ammusement Park) ಅನ್ನು ಡಿಸ್ನಿ ವರ್ಲ್ಡ್ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು.
* ದಕ್ಷಿಣ ಭಾರತದಲ್ಲಿ ಸಂಚರಿಸುವ ಪ್ರವಾಸಿ ವಾಹನಗಳಿಗೆ ಇತರ ದಕ್ಷಿಣದ ರಾಜ್ಯಗಳಂತೆ ನಮ್ಮ ರಾಜ್ಯವನ್ನು ದ್ವಿಪಕ್ಷೀಯ ಅಂತಾರಾಜ್ಯ ರಹದಾರಿ ಸಾರಿಗೆ ಒಪ್ಪಂದದಲ್ಲಿ ಸೇರಿಸಲಾಗುವುದು.
* ಅಂತರ್‌ರಾಜ್ಯ ಚೆಕ್ ಪೋಸ್ಟ್‌ಗಳನ್ನು ಡಿಜಿಟಲ್ ಚೆಕ್ ಪೋಸ್ಟ್‌ಗಳಾಗಿ ಪರಿವರ್ತಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರತಿ 100 ಕಿಮೀ ದೂರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪೆಟ್ರೋಲ್ ಪಂಪ್, ಹೋಟೆಲ್, ಎಲೆಕ್ಟ್ರಿಕ್ ರೀಚಾರ್ಜ್, ವೈದ್ಯಕೀಯ ಸೇವೆ, ಆಂಬ್ಯುಲೆನ್ಸ್, ಎಟಿಎಂ, ಗ್ರಾಹಕ ಅಗತ್ಯ ವಸ್ತುಗಳ ಸೌಲಭ್ಯ, ಅಂತಾರಾಷ್ಟ್ರೀಯ ಗುಣಮಟ್ಟದ ಶೌಚಾಲಯ, ವಸತಿ ನಿಲಯ, ಕರಕುಶಲ ಅಂಗಡಿಗಳನ್ನು ಸ್ಥಾಪಿಸಲಾಗುವುದು.
* ಹೊಸದಾಗಿ ಪ್ರವಾಸಿ ವಾಹನಗಳನ್ನು ಕರ್ನಾಟಕ ರಾಜ್ಯದಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿ ಹೊರ ರಾಜ್ಯಗಳಂತೆ ಜೀವಿತಾವಧಿಯ ತೆರಿಗೆಯಿಂದ ವಾರ್ಷಿಕ ತೆರಿಗೆಗೆ ಬದಲಾವಣೆ ಮಾಡಲಾಗುವುದು.












Click it and Unblock the Notifications