ಕಾಂಗ್ರೆಸ್ ಆಕಾಶದಲ್ಲಿ ಇದೆ, ನಾವು ನೆಲದಲ್ಲಿ ಇದ್ದೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ಯಾಕೆ?
ಬೆಂಗಳೂರು, ಜೂನ್. 07: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಜಾತ್ಯಾತೀತ ಜನತಾದಳ, ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡುವುದನ್ನು ಮುಂದುವರೆಸಿದೆ. ಕಾಂಗ್ರೆಸ್ ಪಕ್ಷ ಗೆಲುವಿನ ಅಮಲಿನಲ್ಲಿ ಆಕಾಶದಲ್ಲಿ ಇದೆ. ನಾವು ನೆಲದಲ್ಲಿ ಇದ್ದೇವೆ. ನಾವು ಆಕಾಶಕ್ಕೆ ಏರಲು ಆಗುತ್ತಾ..? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಲು ಬಂದಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ. ಫಾರೂಖ್ ಅಬ್ದುಲ್ಲಾ ಅವರನ್ನು ಬೀಳ್ಕೊಟ್ಟ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. "ಎಲ್ಲರೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ಎಲ್ಲಿಗೆ ಬರುತ್ತೆ ಎಂದು ನೋಡೋಣ" ಎಂದಿದ್ದಾರೆ.

"ನಾವು ಕಾಂಗ್ರೆಸ್ ಜೊತೆ ರಾಜಕೀಯದಲ್ಲಿ ಭಾಗಿಯಾಗಲು ಆಗುತ್ತಾ..? ಕಾಂಗ್ರೆಸ್ ನವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ. ಕಾಂಗ್ರೆಸ್ ಪಕ್ಷದವರು ಆಕಾಶದ ಮೇಲೆ ಇದ್ದಾರೆ, ನಾವು ಭೂಮಿ ಮೇಲೆ ಇದ್ದೇವೆ. ಅಂತಹವರ ಜೊತೆ ನಾವು ಚರ್ಚೆ ಮಾಡಲು ಆಗುತ್ತಾ..?" ಎಂದು ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮುಂದುವರಿದು, " ರಾಜ್ಯದ ಜನತೆ ಅವರಿಗೆ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಅವರನ್ನು ಮತ್ತೆ ಜನ ಆಕಾಶದಿಂದ ಕೆಳಗೆ ಇಳಿಸಬೇಕು ಅಲ್ವಾ..? ಅವರು ಭೂಮಿಗೆ ಬರುವ ತನಕ ನಾವು ಕಾಯಬೇಕು ತಾನೇ. ನಾವು ಆಕಾಶಕ್ಕೆ ಏರಲು ಆಗುತ್ತಾ..? ಭೂಮಿಯಲ್ಲಿ ಇದ್ದೇವೆ. ನೋಡೋಣ, ಅವರು ಭೂಮಿಗೆ ಬರುವ ತನಕ ನಾವು ಕಾಯೋಣ" ಎಂದು ಹೇಳಿದ್ದಾರೆ.

ಇನ್ನು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರ ವಿಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, "ಚುನಾವಣೆಗಾಗಿ ಜನರ ಮತ ಪಡೆಯಲು ಅಂತಹ ಸಂದರ್ಭದಲ್ಲಿ ಚೀಪ್ ಗಿಮಿಕ್ ಸರ್ವೆ ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ನಾನು ನೋಡಿದ್ದೇನೆ, ಕೇಳಿಸಿಕೊಂಡಿದ್ದೇನೆ. ಸತ್ಯಾಂಶಗಳು ಒಂದೊಂದೇ ಹೊರಗೆ ಬರುತ್ತಿವೆ" ಎಂದಿದ್ದಾರೆ.
"ಚುನಾವಣೆಯಲ್ಲಿ ಮತ ಪಡೆಯಲು ನಾಡಿನ ಜನತೆಯನ್ನು ಯಾವ ರೀತಿ ದಾರಿ ತಪ್ಪಿಸಿದ್ದೇವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಕೊನೆಪಕ್ಷ ಹೀಗೆ ಸತ್ಯ ಒಪ್ಪಿಕೊಳ್ಳುವ ಮೂಲಕ ತಮ್ಮ ಅಸಲಿ ಸಾಚಾತನ ತೋರಿಸುತ್ತಿದ್ದಾರೆ" ಎಂದು ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.
"ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ಜಲಮಂಡಳಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಸರ್ಕಾರ ವಿದ್ಯುತ್ ದರ ಹೆಚ್ಚಿಸಿದೆ. ಈಗ ನೀರಿನ ದರವನ್ನು ಹೆಚ್ಚಳ ಮಾಡುವುದಕ್ಕೆ ಅವರು ಪರೋಕ್ಷ ಸುಳಿವು ನೀಡಿದ್ದಾರೆ" ಎಂದು ಆರೋಪಿಸಿದ್ದಾರೆ.
"ಇವೆಲ್ಲಾ ಮಾಡುತ್ತಿರುವಾಗ ರಾಜ್ಯದ ಜನರಿಗೆ ಈ ಸರಕಾರದ ನಿಜ ಬಣ್ಣ ಏನು ಎನ್ನುವುದು ಅರ್ಥವಾಗುತ್ತಿದೆ. ಒಂದು ಕೈಯ್ಯಲ್ಲಿ ಕೊಡೋದು, ಎರಡು ಕೈಯ್ಯಲ್ಲಿ ಕಿತ್ತುಕೊಳ್ಳೋದು. ಇದು ಈ ಸರಕಾರದ ಸಾಮಾಜಿಕ ನ್ಯಾಯ. ಕಾಂಗ್ರೆಸ್ ಒಂದು ಕಡೆ ಗ್ಯಾರಂಟಿ ಎನ್ನುವುದು ಎಲ್ಲರಿಗೂ ಉಚಿತ ಖಚಿತ ಎಂದು ಹೇಳುತ್ತಿದ್ದರು. ಈಗ ಅದರ ಜತೆಗೆ ದರ ಏರಿಕೆಯೂ ಖಚಿತ ಆಗಿದೆ. ಈಗ ಬೆಲೆ ಏರಿಕೆಯೂ ನಿಶ್ಚಿತ ಎಂದು ಹೇಳುತ್ತಿದ್ದಾರೆ. ಬೆಲೆ ಏರಿಕೆ ಗ್ಯಾರಂಟಿಯೇ ಜನರಿಗೆ ಗಟ್ಟಿ. ಜನರಿಗೆ ಇನ್ನು ಯಾವ ಯಾವ ಕೊಡುಗೆ ಕೊಡುತ್ತಾರೆ ಎಂದು ಸ್ವಲ್ಪ ದಿನ ಕಾದು ನೋಡೋಣ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿ ಕಾಡಿದ್ದಾರೆ.












Click it and Unblock the Notifications