ರೇವಣ್ಣ ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ: ಹೊಸ ರಾಜಕೀಯ ಚರ್ಚೆಗೆ ನಾಂದಿ
ನವದೆಹಲಿ, ಸೆಪ್ಟೆಂಬರ್ 22: ಜೆಡಿಎಸ್ ಪಕ್ಷವು ಔಪಚಾರಿಕವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. ಈ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜೆಡಿ ನಡ್ಡಾ ಜೊತೆಗಿನ ಸಭೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಜರಿದ್ದರು. ಮಾಜಿ ಪ್ರಧಾನಿ ದೇವೇಗೌಡ, ಸಂಸದ ಪ್ರಜ್ವಲ್, ಶಾಸಕ ಎಚ್‌ಡಿ ರೇವಣ್ಣ ಅವರ ಅನುಪಸ್ಥಿತಿ ಇಲ್ಲಿ ಎದ್ದು ಕಾಣುತ್ತಿತ್ತು. ಇದು ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.
ಮೈತ್ರಿ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಜೆಪಿ ನಡ್ಡಾ, 'ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಭಾಗವಾಗಲು ನಿರ್ಧರಿಸಿರುವುದು ನನಗೆ ಖುಷಿ ತಂದಿದೆ. ನಾವು ಅವರನ್ನು ಎನ್‌ಡಿಎಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಜೆಡಿಎಸ್ ಸೇರ್ಪಡೆಯು ಎನ್‌ಡಿಎಯನ್ನು ಮತ್ತಷ್ಟು ಬಲಪಡಿಸಲಿದೆ' ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 'ನವ ಭಾರತ ಮತ್ತು ಬಲಿಷ್ಠ ಭಾರತ'ದ ಆಶಯವನ್ನು ಇದು ಸಾಕಾರಗೊಳಿಸಲಿದೆ ಎಂದು ನಡ್ಡಾ ಹೇಳಿದ್ದಾರೆ.
ಮೈತ್ರಿ ಕುರಿತು ಮಾಧ್ಯಮ ಜೊತೆ ಮಾತನಾಡಿರುವ ಎಚ್‌ಡಿ ಕುಮಾರಸ್ವಾಮಿ ಅವರು, ಇಂದು ನಾವು ಔಪಚಾರಿಕವಾಗಿ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ಚರ್ಚಿಸಿದ್ದೇವೆ. ನಮ್ಮ ಕಡೆಯಿಂದ ಯಾವುದೇ ಬೇಡಿಕೆ ಇಲ್ಲ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಹಾಗೂ ಜೆಪಿ ನಡ್ಡಾ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 'ಸೀಟು ಹಂಚಿಕೆ ಮತ್ತಿತರ ವಿಷಯಗಳ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆ ವಿಷಯಗಳು ಇನ್ನೂ ಚರ್ಚೆಯಾಗಿಲ್ಲ. ಕರ್ನಾಟಕದ ಜನರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾವತ್ತಿಗೂ ಜಾತ್ಯತೀತತೆಯ ಜೊತೆ ಗುರುತಿಸಿಕೊಂಡಿರುವ ದೇವೇಗೌಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ದೊಡ್ಡ ನಿರ್ಧಾರ' ಎಂದು ಹೇಳಿದ್ದಾರೆ.
ಪ್ರಜ್ವಲ್ ಹಾಗೂ ಎಚ್‌ಡಿ ರೇವಣ್ಣ ಅನುಪಸ್ಥಿತಿ
ಬಿಜೆಪಿ ನಾಯಕರ ಜೊತೆಗಿನ ಭೇಟಿಗಾಗಿ ಕುಮಾರಸ್ವಾಮಿ ಅವರ ಜತೆ ಪ್ರಜ್ವಲ್ ರೇವಣ್ಣ ಹಾಗೂ ಎಚ್‌ಡಿ ರೇವಣ್ಣ ಗುರುವಾರ ದೆಹಲಿಗೆ ತೆರಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಶುಕ್ರವಾರ ನಡೆದ ಮೈತ್ರಿ ಮಾತುಕತೆಯ ಭೇಟಿಯಲ್ಲಿ ಸಂಸದ ಪ್ರಜ್ವಲ್ ಹಾಗೂ ಶಾಸಕ ರೇವಣ್ಣ ಕಾಣಿಸಿಕೊಂಡಿಲ್ಲ. ಇದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.
ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಟಿಕೆಟ್ ಸಂಬಂಧ ರೇವಣ್ಣ ಹಾಗೂ ಕುಮಾರಸ್ವಾಮಿ ಕುಟುಂಬದ ಜೊತೆ ಮುಸುಕಿನ ಗುದ್ದಾಟ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಭವಾನಿ ರೇವಣ್ಣ ಬೇಡಿಕೆ ಇಟ್ಟಿದ್ದರು. ಆದರೆ, ಕುಮಾರಸ್ವಾಮಿ ಅವರು ಸ್ವರೂಪ್ ಅವರಿಗೆ ಟಿಕೆಟ್ ನೀಡಿದ್ದರು. ಇದು ಎರಡೂ ಕುಟುಂಬಗಳ ನಡುವೆ ಅಸಮಾಧಾನವನ್ನು ಹುಟ್ಟುಹಾಕಿತ್ತು. ಇದು ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರಿಯಲಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.












Click it and Unblock the Notifications