ಮಂಡ್ಯ ಲೋಕಸಭಾ ಅಖಾಡಕ್ಕೆ ನಿಖಿಲ್ ಸಜ್ಜು; ಹಲವು ಬಿಜೆಪಿ ನಾಯಕರ ಭೇಟಿ ಹಿಂದಿದೆ ಅದೊಂದೆ ಲೆಕ್ಕಾಚಾರ?
ಮಂಡ್ಯ,ಅಕ್ಟೋಬರ್ 14: 2024 ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. ಇತ್ತ ಬಿಜೆಪಿಗೆ 24 ಹಾಗೂ ಜೆಡಿಎಸ್ ಗೆ 4 ಕ್ಷೇತ್ರಗಳ ಕುರಿತು ಚರ್ಚೆಯಾಗಿದ್ದು, ದಸರಾ ಹಬ್ಬದ ಬಳಿಕ ಇನ್ನೊಂದು ಸುತ್ತಿನ ಮಾತುಕತೆ ನಂತರ ಕ್ಷೇತ್ರ ಹಂಚಿಕೆ ಅಂತಿಮವಾಗಲಿದೆ.
ಹೌದು, ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಪ್ಲಾನ್ ನಡೆಸಿದ್ದು, ಇತ್ತ 28 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಮಾತುಕತೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನ ಈ ಹಿಂದೆ ಭೇಟಿ ಮಾಡಿದ್ರು. ಆದರೆ, ಈ ಭೇಟಿಯ ವೇಳೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನ ಕರೆದುಕೊಂಡು ಹೋಗಿದ್ದು, ಸಾಕಷ್ಟು ಪ್ರಶ್ನಗೆಗಳನ್ನ ಹುಟ್ಟುಹಾಕುವಂತೆ ಮಾಡಿದೆ.

2019 ರ ಮಂಡ್ಯ ಲೋಕಸಭಾ ಚುನಾವಣೆಗೆ ಹಾಗೂ 2023 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ನಡೆಸಿ, ಹೀನಾಯವಾಗಿ ಸೋಲು ಅನುಭವಿಸಿದ್ರು. ಇನ್ನೂ ಎರಡು ಚುನಾವಣೆಯಲ್ಲೂ ಸೋಲು ಕಂಡ ಬಳಿಕ, ಮುಂದಿನ ಐದು ವರ್ಷಗಳ ಕಾಲ ನಿಖಿಲ್ ಕುಮಾರಸ್ವಾಮಿ ಯಾವುದೇ ಚುನಾವಣೆಯಲ್ಲೂ ಸ್ಪರ್ಧೆ ಮಾಡಲ್ಲ, ಸಿನಿಮಾ ಕ್ಷೇತ್ರದಲ್ಲೇ ಸದ್ಯಕ್ಕೆ ಮುಂದುವರೆಯುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.
ಆದರೆ, ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾತುಕತೆಯ ವೇಳೆ ಕುಮಾರಸ್ವಾಮಿ ಅವರು ಪುತ್ರನನ್ನ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ಕರೆದುಕೊಂಡು ಹೋಗಿದ್ದು, ಹಲವು ಅನುಮಾನಗನ್ನ ಮೂಡಿಸಿದೆ. ಇನ್ನೂ ಅಮಿತ್ ಶಾ ಭೇಟಿಯ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಮಂಡ್ಯ ಕ್ಷೇತ್ರ ದಳಪತಿಗಳ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನ ಮರಳಿ ಪಡೆಯುವ ನಿಟ್ಟಿನಲ್ಲಿ ಹೆಚ್ ಡಿ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಪ್ಲಾನ್ ನಡೆಸಿದ್ದು, ಅದರಂತೆ ಅಮಿತ್ ಶಾ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗೂ ಎಚ್ ಡಿ ಕುಮಾರಸ್ವಾಮಿ ಅವರಿಗೆ ನಿಖಿಲ್ ಕುಮಾರಸ್ವಾಮಿಯ ರಾಜಕೀಯ ನೆಲೆಯನ್ನ ರೂಪಿಸಬೇಕು ಎಂಬ ಚಿಂತನೆಯನ್ನ ನಡೆಸಿದ್ದಾರೆ. ಅದರಂತೆ 5 ವರ್ಷಗಳ ಕಾಲ ನಿಖಿಲ್ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಜೆಡಿಎಸ್ ನ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ 2024 ರ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸುವ ಕುರಿತು ಮಾತುಕತೆ ನಡೆದಿದ್ದು, ಅದರಂತೆ ಮಂಡ್ಯ ಅಖಾಡಕ್ಕಿಳಿಯಲು ಜೆಡಿಎಸ್ ನಾಯಕರು ಭರ್ಜರಿ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಕುರಿತು ಈಗಾಗಲೇ ದೆಹಲಿ ಬಿಜೆಪಿ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಮಾಡಿದ ಬಳಿಕ ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ಹಿರಿಯ ನಾಯಕರಾದ ಬಿ ಎಸ್ ಯಡಿಯೂರಪ್ಪ, ಮತ್ತು ಮಾಜಿ ಸಚಿವ ಹಾಗೂ ಒಕ್ಕಲಿಗ ನಾಯಕರಾದ ಡಾ. ಸಿ ಎನ್ ಅಶ್ವಥ್ ನಾರಾಯಣ್ ಅವರನ್ನ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು?
2019 ರಲ್ಲಿ ಕಳೆದುಕೊಂಡ ಮಂಡ್ಯ ಕ್ಷೇತ್ರವನ್ನ ಮರಳಿ ಪಡೆಯಬೇಕು ಎಂದು ದಳಪತಿಗಳು ಸಿದ್ದತೆಯನ್ನ ನಡೆಸಿದ್ದಾರೆ. ಅದರಂತೆ ಈ ಬಾರೀ ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಎನ್ನಲಾಗಿದ್ದು, ಹಾಲಿ ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎನ್ನುವ ಚರ್ಚೆ ಹುಟ್ಟಿಕೊಂಡಿದೆ.












Click it and Unblock the Notifications