ಜೆಡಿಎಸ್ ಮೊದಲ ಪಟ್ಟಿ : ರೆಬಲ್ ಶಾಸಕರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ!
Recommended Video

ಬೆಂಗಳೂರು, ಫೆಬ್ರವರಿ 19 : ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಜೆಡಿಎಸ್ 126 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ರಾಷ್ಟ್ರೀಯ ಪಕ್ಷಕ್ಕಿಂತ ಮೊದಲೇ ಚುನಾವಣೆಗೆ ಸಿದ್ಧವಾಗಿದ್ದೇವೆ ಎಂಬ ಸಂದೇಶ ರವಾನಿಸಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ 7 ಶಾಸಕರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಿದೆ. ಈ ಪೈಕಿ ಮಾಗಡಿ, ಶ್ರೀರಂಗಪಟ್ಟಣ ಮತ್ತು ನಾಗಮಂಗಲ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಲಾಗಿದೆ.
ಅಲ್ಲದೇ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಲಿಂಗಸಗೂರು ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಪಕ್ಷ ಘೋಷಣೆ ಮಾಡಿದೆ. ಜೆಡಿಎಸ್‌ನಿಂದ ಆಯ್ಕೆಯಾಗಿ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ್ದರು.
ಚಾಮರಾಜಪೇಟೆ, ಗಂಗಾವತಿ, ಪುಲಿಕೇಶಿ ನಗರ, ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಜೆಡಿಎಸ್ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. 2ನೇ ಪಟ್ಟಿಯಲ್ಲಿ ಬಂಡಾಯ ಶಾಸಕರು ಇರುವ ಈ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಜೆಡಿಎಸ್‌ನಿಂದ ಅಮಾನತುಗೊಂಡ ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಅದೇ ಕ್ಷೇತ್ರದಿಂದ ಅವರು 2018ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ತಂತ್ರ ರೂಪಿಸಿದೆ..

ಬಂಡಾಯ ಶಾಸಕರು ಯಾರು?
ಜೆಡಿಎಸ್ ರಮೇಶ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಚೆಲುವರಾಯಸ್ವಾಮಿ (ನಾಗಮಂಗಲ), ಇಕ್ಬಾಲ್ ಅನ್ಸಾರಿ (ಗಂಗಾವತಿ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ, ಬೆಂಗಳೂರು) ಶಾಸಕ ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ) ಅವರನ್ನು ಪಕ್ಷದಿಂದ ಅಮಾನತು ಮಾಡಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?
ಫೆ.17ರಂದು ಜೆಡಿಎಸ್ 126 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೂರು ಬಂಡಾಯ ಶಾಸಕರು ಇರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಯಾರು?
ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಹಾಲಿ ಶಾಸಕರು ಚೆಲುವರಾಯಸ್ವಾಮಿ. ಜೆಡಿಎಸ್‌ನಿಂದ ಅವರು ಅಮಾನತುಗೊಂಡಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಸುರೇಶ್ ಗೌಡ ಅವರು ಅಭ್ಯರ್ಥಿ ಎಂದು ಜೆಡಿಎಸ್ ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಶಾಸಕ ಸುರೇಶ್ ಗೌಡ ಕೆಲವು ದಿನಗಳ ಹಿಂದೆ ಜೆಡಿಎಸ್ ಸೇರಿದ್ದಾರೆ.

ರವೀಂದ್ರ ಶ್ರೀಕಂಠಯ್ಯ
ಶ್ರೀರಂಗಪಟ್ಟಣ ಕ್ಷೇತ್ರದ ಹಾಲಿ ಶಾಸಕರು ರಮೇಶ್ ಬಂಡಿಸಿದ್ದೇಗೌಡ. ಪಕ್ಷದಿಂದ ಅವರನ್ನು ಅಮಾನತು ಮಾಡಲಾಗಿದ್ದು, ರವೀಂದ್ರ ಶ್ರೀಕಂಠಯ್ಯ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ರವೀಂದ್ರ ಶ್ರೀಕಂಠಯ್ಯ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ.

ಮಾಗಡಿ ಕ್ಷೇತ್ರದ ಅಭ್ಯರ್ಥಿ ಯಾರು?
ಮಾಗಡಿ ಕ್ಷೇತ್ರದ ಹಾಲಿ ಶಾಸಕ ಎಚ್.ಸಿ.ಬಾಲಕೃಷ್ಣ. ಪಕ್ಷದಿಂದ ಅವರು ಅಮಾನತುಗೊಂಡಿದ್ದಾರೆ. 2018ರ ಚುನಾವಣೆಗೆ ಮಂಜು ಅವರು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಕೆಲ ತಿಂಗಳ ಹಿಂದೆ ಮಂಜು ಪಕ್ಷ ಸೇರಿದ್ದಾರೆ.












Click it and Unblock the Notifications