ರಾಜ್ಯದಲ್ಲಿ ಜೆಡಿಎಸ್ ಉಳಿಸಲು ಅಖಾಡಕ್ಕಿಳಿಯಲಿರುವ ದೊಡ್ಡಗೌಡ್ರು!
ಬೆಂಗಳೂರು, ಫೆಬ್ರವರಿ 18: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸರಿಸಮನಾಗಿ ಬೆಳೆದು ಬಂದಿದ್ದ ಜೆಡಿಎಸ್ ಪಕ್ಷವು ಇದೀಗ ರಾಜ್ಯದಲ್ಲಿ ಮಂಕಾದಂತೆ ಗೋಚರಿಸುತ್ತಿದೆ. ಹಳೇ ಮೈಸೂರು ಭಾಗದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದ್ದ ಪಕ್ಷ ಇವತ್ತು ಇದ್ದು ಇಲ್ಲದಂತೆ ಭಾಸವಾಗುತ್ತಿದೆ. ಇದಕ್ಕೆ ಪಕ್ಷವನ್ನು ಮುನ್ನಡೆಸುತ್ತಿದ್ದ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ರಾಜಕೀಯದತ್ತ ಒಲವು ತೋರಿದ್ದೇ ಕಾರಣ ಎಂದು ಹೇಳಿದರೂ ಇವತ್ತಿನ ಪರಿಸ್ಥಿತಿಯಲ್ಲಿ ಅಧಿಕಾರ ಅನಿವಾರ್ಯವಾದ ಕಾರಣದಿಂದ ಅವರ ನಿರ್ಧಾರಗಳು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಪಕ್ಷ ಸಂಘಟನೆ ಎಲ್ಲೊ ಒಂದು ಕಡೆ ನೇಪಥ್ಯಕ್ಕೆ ಸರಿಯಿತಾ ಎಂಬ ಬೇಸರ ಪಕ್ಷದ ಕಾರ್ಯಕರ್ತರಲ್ಲಿ ಮೂಡುವ ಹೊತ್ತಿಗೆ ದೇವೇಗೌಡರು ಅಖಾಡಕ್ಕಿಳಿಯುವ ಸೂಚನೆ ನೀಡಿದ್ದಾರೆ.
ರಾಜ್ಯಕ್ಕೊಂದು ಪ್ರಬಲ ರಾಜಕೀಯ ಪಕ್ಷವಾಗಿ ಜೆಡಿಎಸ್ ಇವತ್ತು ಉಳಿದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಇದಕ್ಕೆ ಕಾರಣಗಳು ಅನೇಕ ಇವೆ. ಆದರೆ ಕುಟುಂಬ ರಾಜಕಾರಣ ಮತ್ತು ಅಧಿಕಾರದ ಹಪಾಹಪಿ ಕೂಡ ಪಕ್ಷನ್ನು ಮಂಕು ಮಾಡಿತಾ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇವತ್ತಿಗೂ ದೇವೇಗೌಡರೇ ಇಳಿ ವಯಸ್ಸಿನಲ್ಲಿ ಪಕ್ಷ ಸಂಘಟನೆಗಾಗಿ ಬೀದಿಗಿಳಿಯುವಂತಹ ಪರಿಸ್ಥಿತಿ ಬಂದಿದೆ. ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಹೊರತು ಪಡಿಸಿದರೆ ಪಕ್ಷವನ್ನು ತೆಗೆದುಕೊಂಡು ಹೋಗುವ ನಾಯಕರೇ ಕಾಣದಂತಾಗಿದೆ. ಇಲ್ಲಿ ಪಕ್ಷವನ್ನು ಮುನ್ನೆಡೆಸುವ ಸಂಪೂರ್ಣ ಅಧಿಕಾರವನ್ನು ದೇವೇಗೌಡರ ಕುಟುಂಬದ ಹೊರತಾಗಿ ಇತರೆ ನಾಯಕರಿಗೆ ನೀಡದಿರುವುದು ಕೂಡ ಒಂದು ಕಾರಣ ಎನ್ನುವುದನ್ನು ತಳ್ಳಿಹಾಕಲಾಗುತ್ತಿಲ್ಲ.

ಅಂದು, ಇಂದು ಮತ್ತು ನಾಳೆಯೂ ದೇವೇಗೌಡರ ಕುಟುಂಬದ ಹೊರತಾಗಿ ಪಕ್ಷ ಉಳಿದು ಬೆಳೆಯುವುದು ಕಷ್ಟವೇ.. ಇವತ್ತು ಜೆಡಿಎಸ್ ಪಕ್ಷದ ನಾಯಕತ್ವವನ್ನು ಬೇರೆ ನಾಯಕರಿಗೆ ನೀಡಬಹುದಿತ್ತು. ಆ ಕೆಲಸ ಆದಂತೆ ಕಾಣುತ್ತಿಲ್ಲ. ಇವತ್ತಿನ ಹೋರಾಟಗಳು ಕೂಡ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದೆ. ಇದನ್ನು ಗಮನಿಸಿದಾಗ ಪಕ್ಷದಲ್ಲಿ ಸುಮಾರು 18 ಶಾಸಕರಿದ್ದರೂ ಪಕ್ಷವೇಕೆ ಹೀಗಾಗಿದೆ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಮೂಡದಿರದು. ಪಕ್ಷವನ್ನು ಕುಟುಂಬದ ಆಚೆಗೆ ತಂದು ಕಟ್ಟಿ ಬೆಳೆಸುವ ನಾಯಕರು ಕೂಡ ಪಕ್ಷದಲ್ಲಿ ಗೋಚರಿಸುತ್ತಿಲ್ಲ.
ಹೆಚ್ಡಿಡಿ, ಹೆಚ್ಡಿಕೆ ನೆರಳಲ್ಲಿರುವ ಜೆಡಿಎಸ್ ಪಕ್ಷ
ಪಕ್ಷದಲ್ಲಿ ಶಾಸಕರಾಗಿರುವ ಜಿ.ಟಿ.ದೇವೇಗೌಡರು ಸಚಿವರಾಗಿದ್ದವರು ಮತ್ತು ಒಕ್ಕಲಿಗ ನಾಯಕರೂ ಹೌದು ಆದರೆ ಅವರು ಹೆಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ಮುನಿಸಿಕೊಂಡು ಪಕ್ಷದಲ್ಲಿದ್ದರೂ ಪಕ್ಷದಲ್ಲಿ ಇಲ್ಲದವರಂತೆ ಮುನ್ನಡೆಯುತ್ತಿದ್ದಾರೆ. ಹಿಂದಿನ ಅವಧಿಯಲ್ಲಿಯೂ ಇದೇ ಆಗಿತ್ತು. ಈ ಬಾರಿಯೂ ಅದೇ ಆಗುತ್ತಿದೆ. ಉಳಿದಂತೆ ಮೈಸೂರು ಭಾಗದಲ್ಲಿ ಸಾ.ರಾ.ಮಹೇಶ್ ಒಕ್ಕಲಿಗ ನಾಯಕನಾಗಿದ್ದು, ಸತತ ಗೆಲುವನ್ನೇ ಕಂಡಿದ್ದ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರದಿಂದ ಸೋಲು ಕಾಣುವುದರ ಮೂಲಕ ಚುನಾವಣಾ ರಾಜಕೀಯದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ.
ಇಡೀ ಪಕ್ಷವನ್ನು ಕೊಂಡೊಯ್ಯುವ ನಾಯಕ ತಾನು ಎಲ್ಲಿ ಬೇಕಾದರೂ ಸ್ಪರ್ಧಿಸಿ ಗೆಲುವು ಸಾಧಿಸುವ ಮತ್ತು ಬೇರೆ ಕ್ಷೇತ್ರದಿಂದಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಹೊಂದಿರಬೇಕು ಆಗ ಮಾತ್ರ ನಾಯಕನಾಗಿ ಪಕ್ಷವನ್ನು ಕಟ್ಟಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ರಾಜಕೀಯ ಮುತ್ಸದ್ಧಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ನೆರಳಿನಲ್ಲಿ ಪಕ್ಷ ಉಸಿರಾಡುತ್ತಿದೆ. ಆದರೆ ಇದೀಗ ಪಕ್ಷ ಎನ್ ಡಿಎ ಜತೆಗೆ ನಂಟು ಹೊಂದಿರುವ ಕಾರಣ ರಾಜ್ಯದಲ್ಲಿ ಸದಾ ಎದುರಾಳಿಗಳನ್ನಾಗಿ ನೋಡಿಕೊಂಡು ಬಂದಿದ್ದ ಬಿಜೆಪಿಯನ್ನು ಮಿತ್ರನನ್ನಾಗಿ ಕಾರ್ಯಕರ್ತರು ನೋಡುವ ಅನಿವಾರ್ಯತೆ ಎದುರಾಗಿದೆ.

ಬಿಜೆಪಿ ಜೆಡಿಎಸ್ ಮೈತ್ರಿ ಇನ್ನಷ್ಟು ಗಟ್ಟಿಯಾಗುತ್ತಾ?
ಸದ್ಯದ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ಈ ಮೈತ್ರಿ ಯಾವುದೇ ತಳಮಟ್ಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಕಾರಣವಾಗದೆ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆಯಿದ್ದು ಈ ಸಂದರ್ಭದಲ್ಲಿ ಗ್ರಾಮಮಟ್ಟದ ನಾಯಕರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. 2013ರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ ತಳಮಟ್ಟದ ಕಾರ್ಯಕರ್ತರತ್ತ ಹೋಗುವ ಪ್ರಯತ್ನವನ್ನೇ ಮಾಡಿಲ್ಲ.
ಇದೀಗ ದೇವೇಗೌಡರು ಇಳಿವಯಸ್ಸಿನಲ್ಲಿ ಪಕ್ಷ ಸಂಘಟನೆಗೆ ಇಳಿಬೇಕಾದ ಅನಿವಾರ್ಯತೆ ಎದುರಾಗಿದೆ. ಶೀಘ್ರದಲ್ಲಿಯೇ ಕಾರ್ಯಕರ್ತರ ಸಮಾವೇಶಕ್ಕೆ ಚಿಂತನೆ ನಡೆಸಿದ್ದಾರೆ. ಇದರ ನಡುವೆ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆಯತ್ತ ಮುಖ ಮಾಡಿದ್ದಾರೆ. ಹೋರಾಟ ಮಾಡುವ ಮೂಲಕ ಗುರುತಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಸತತ ಮೂರು ಸೋಲುಗಳನ್ನು ಅನುಭವಿಸಿದ್ದಾರೆ. ಹೀಗಾಗಿ ರಾಜಕೀಯವಾಗಿ ಒಂದಷ್ಟು ಅನುಭವ ಆಗಿದೆ ಎನ್ನುವುದಂತು ನಿಜ. ಅವರ ನಾಯಕತ್ವಕ್ಕೆ ಕಾರ್ಯಕರ್ತರು ಮಣೆ ಹಾಕುತ್ತಾರಾ? ಎಂಬುದು ಕೂಡ ಇಲ್ಲಿ ಗಮನಾರ್ಹವಾಗಿದೆ.
ಜೆಡಿಎಸ್ ದುರ್ಬಲವಾದಷ್ಟು ಕಾಂಗ್ರೆಸ್‌ಗೆ ಲಾಭ
ರಾಜ್ಯದಲ್ಲಿ ಜೆಡಿಎಸ್ ದುರ್ಬಲಗೊಂಡಷ್ಟು ಅದರ ಲಾಭ ಕಾಂಗ್ರೆಸ್ ಗೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಅಸಮಾಧಾನಗೊಂಡ ಅಲ್ಪಸಂಖ್ಯಾತರು. ಹಿಂದುಳಿದವರಿಗೆ ಜೆಡಿಎಸ್ ಆಸರೆಯಾಗಿತ್ತು. ಆದರೆ ಕಳೆದ ಲೋಕಸಭಾ ಚುನಾವಣೆಯಿಂದ ಅದು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಅವರ ಮತಬ್ಯಾಂಕ್ ಆಗಿದ್ದ ಅಲ್ಪಸಂಖ್ಯಾತ ಮತ್ತು ಹಿಂದುಳಿದ, ದಲಿತ ಮತಗಳು ಕಾಂಗ್ರೆಸ್ ಗೆ ಹೋಗಿದೆ. ಆದ್ದರಿಂದ ಜೆಡಿಎಸ್ ನ ಪ್ರಾಬಲ್ಯ ಕುಗ್ಗಿಸಿದಷ್ಟು ಅದರಿಂದ ಕಾಂಗ್ರೆಸ್ ಗೆ ಲಾಭವಾಗುತ್ತದೆ. ಆದ್ದರಿಂದಲೇ ಆಪರೇಷನ್ ಹಸ್ತ ವಿಚಾರಗಳು ತೆರೆಮರೆಯಲ್ಲಿ ಹರಿದಾಡುತ್ತಿವೆ.

ಮುಂದಿನ ಚುನಾವಣೆ ಹೊತ್ತಿಗೆ ರಾಜ್ಯದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಮೈತ್ರಿ ಇನ್ನಷ್ಟು ಗಟ್ಟಿಯಾಗುತ್ತಾ? ಕಾಂಗ್ರೆಸ್ ನಾಯಕರು ಜೆಡಿಎಸ್ ಶಾಸಕರನ್ನು ತಮ್ಮತ್ತ ಸೆಳೆದು ಪಕ್ಷದ ಪ್ರಾಬಲ್ಯವನ್ನು ಇನ್ನಷ್ಟು ಕುಗ್ಗಿಸುವ ಪ್ರಯತ್ನಕ್ಕೆ ಕೈಹಾಕುತ್ತಾರಾ? ಗೊತ್ತಿಲ್ಲ. ಆದರೆ ಜೆಡಿಎಸ್ ಪಕ್ಷದ ಶಾಸಕರು ಸೇರಿದಂತೆ ನಾಯಕರ ಮೇಲೆ ಕೈ ನಾಯಕರು ಕಣ್ಣಿಟ್ಟಿದ್ದಂತು ನಿಜ. ಇದು ಗೊತ್ತಾಗುತ್ತಿದ್ದಂತೆಯೇ ದೇವೇಗೌಡರು ಅಖಾಡಕ್ಕಿಳಿದಿದ್ದಾರೆ. ಪಕ್ಷದ ನಾಯಕರನ್ನು ಒಂದೇ ವೇದಿಕೆಗೆ ತರುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ, ಪಕ್ಷದ ಸಾಮರ್ಥ್ಯ ಹೆಚ್ಚಿಸುವ ಚಿಂತನೆಯಲ್ಲಿದ್ದಾರೆ. ಮುಂದಿನ ಬೆಳವಣಿಗೆಯನ್ನು ಕಾದು ನೋಡೋಣ.












Click it and Unblock the Notifications