ಜಯಲಲಿತಾ ಚಿನ್ನಾಭರಣ; ಕರ್ನಾಟಕಕ್ಕೆ 5 ಕೋಟಿ ಕೊಟ್ಟ ತಮಿಳುನಾಡು!
ಬೆಂಗಳೂರು, ಫೆಬ್ರವರಿ 20: ತಮಿಳುನಾಡು ಮಾಜಿ ಸಿಎಂ, ದಿ. ಜೆ. ಜಯಲಲಿತಾಗೆ ಸೇರಿದ ಚಿನ್ನಾಭರಣಗಳನ್ನು ಪಡೆಯಲು 6 ಪೆಟ್ಟಿಗೆಗಳೊಂದಿಗೆ ಬರಲು ತಮಿಳುನಾಡು ಸರ್ಕಾರಕ್ಕೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸೂಚಿಸಿದೆ. ಚಿನ್ನಾಭರಣ ತೆಗೆದುಕೊಂಡು ಹೋಗಲು ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ 5 ಕೋಟಿ ರೂ. ನೀಡಿದೆ.
ಬೆಂಗಳೂರು ನಗರದ ವಿಶೇಷ ನ್ಯಾಯಾಲಯದ ಸುಪರ್ಧಿಯಲ್ಲಿರುವ ಜೆ.ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ್ದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ದಿನಾಂಕವನ್ನು ನಿಗದಿಪಡಿಸಿದೆ.

ಅಲ್ಲದೆ, ಚಿನ್ನಾಭರಣ ವರ್ಗಾವಣೆ ವೇಳೆ ಸಿವಿಲ್ ನ್ಯಾಯಾಲಯದಲ್ಲಿ ಎರಡು ದಿನಗಳ ಕಾಲ ಅಗತ್ಯವಿರುವ ಭದ್ರತೆಯನ್ನು ಸ್ಥಳೀಯ ಪೊಲೀಸರಿಂದ ಕಲ್ಪಿಸಲು ನ್ಯಾಯಾಲಯದ ರಿಜಿಸ್ಟ್ರಾರ್ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು 2024ರ ಮಾ. 6ಕ್ಕೆ ಮುಂದೂಡಲಾಗಿದೆ.
ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನಗರದ 36ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ 2024ರ ಮಾರ್ಚ್ 6 ಮತ್ತು 7ರಂದು ದಿನಾಂಕವನ್ನು ನಿಗದಿಪಡಿಸಿದ್ದು, ಆ ಎರಡು ದಿನಗಳಂದು ಇತರೆ ಪ್ರಕರಣಗಳ ವಿಚಾರಣೆ ನಡೆಸದಂತೆ ನಿರ್ಧರಿಸಿದೆ.
ಅಲ್ಲದೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಅಧಿಕೃತ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದ್ದು, ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಐಜಿಪಿ ಅವರೊಂದಿಗೆ ಬರಬೇಕು.
ಈ ವೇಳೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಮತ್ತು ಆರು ದೊಡ್ಡ ಪೆಟ್ಟಿಗೆ ಜತೆಗೆ ಅಗತ್ಯ ಭದ್ರತೆಯೊಂದಿಗೆ ಬಂದು ಚಿನ್ನಾಭರಣಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದೆ. ಜತೆಗೆ ಈ ಅಂಶವನ್ನು ತಮಿಳುನಾಡು ಡಿವೈಎಸ್ಪಿ ಅವರು ತಮಿಳುನಾಡು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಕರ್ನಾಟಕ ಸರ್ಕಾಕ್ಕೆ 5 ಕೋಟಿ ಡಿಡಿ: ಪ್ರಕರಣದ ವಿಚಾರಣೆಗಾಗಿ ಕರ್ನಾಟಕ ಸರ್ಕಾರ ವೆಚ್ಚ ಮಾಡಿದ್ದ 5 ಕೋಟಿ ರೂ.ಗಳ ಡಿಡಿಯನ್ನು ಈಗಾಗಲೇ ತಮಿಳುನಾಡು ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ನೀಡಿದೆ. ಆದರೆ, ಇನ್ನೂ ರಾಜ್ಯ ಸರ್ಕಾರದ ಖಾತೆಗೆ ಬರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಕೀಲರು ತಿಳಿಸಿದ್ದಾರೆ.
ಜಯಲಲಿತಾ ಅವರಿಂದ ಪೊಲೀಸರು 7040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ.ವಿ. ಸೆಟ್ , 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೇಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರು. ನಗದು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದರು.












Click it and Unblock the Notifications