ಕರ್ನಾಟಕದ ನಾಲ್ವರು ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ
ಬೆಂಗಳೂರು, ಆಗಸ್ಟ್ 08; ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಹೊಸದಾಗಿ ಸಂಪುಟಕ್ಕೆ ಸೇರಿರುವ ಸಚಿವರು ದೇಶಾದ್ಯಂತ 'ಜನಾಶೀರ್ವಾದ ಯಾತ್ರೆ' ನಡೆಸಲಿದ್ದಾರೆ. ಕರ್ನಾಟಕದಲ್ಲಿ ಆಗಸ್ಟ್ 16ರಿಂದ ನಾಲ್ಕು ದಿನಗಳ ಕಾಲ ನಾಲ್ವರು ಕೇಂದ್ರ ಸಚಿವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
43 ಸಚಿವರು ದೇಶವ್ಯಾಪಿ 'ಜನಾಶೀರ್ವಾದ ಯಾತ್ರೆ' ನಡೆಸಲಿದ್ದಾರೆ. ತಮ್ಮನ್ನು ಜನರಿಗೆ ಪರಿಚಯಿಸಿಕೊಳ್ಳುವ ಜೊತೆಗೆ ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ಈ ಯಾತ್ರೆಯ ಮೂಲಕ ತಿಳಿಸಲಿದ್ದಾರೆ. ಪ್ರತಿ ಸಚಿವರು ಸುಮಾರು 400 ಕಿ. ಮೀ. ಸಂಚಾರವನ್ನು ನಡೆಸಲಿದ್ದಾರೆ.
Recommended Video

ಕರ್ನಾಟಕದ ಸಚಿವರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ 'ಜನಾಶೀರ್ವಾದ ಯಾತ್ರೆ' ನಡೆಸಲಿದ್ದಾರೆ. ಆಗಸ್ಟ್ 16 ರಿಂದ 19ರ ತನಕ ರಾಜ್ಯದಲ್ಲಿ ಈ ಯಾತ್ರೆ ನಡೆಯಲಿದೆ.
ಹೊಸ ಕೇಂದ್ರ ಸಚಿವರನ್ನು ಸಂಸತ್‌ನಲ್ಲಿ ಪರಿಚಯಿಸಿಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದರು. ಆಗ ವಿಪಕ್ಷಗಳು ಅಡ್ಡಿಪಡಿಸಿದವು, ಆದ್ದರಿಂದ ಪಕ್ಷ 'ಜನಾಶೀರ್ವಾದ ಯಾತ್ರೆ' ನಡೆಸಲು ಮುಂದಾಗಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆ ಪ್ರಚಾರವನ್ನು ಸಹ ಆರಂಭಿಸಲಾಗುತ್ತಿದೆ.

ರಾಜೀವ್ ಚಂದ್ರಶೇಖರ್ ತಂಡದ ಯಾತ್ರೆ
ರಾಜ್ಯಸಭಾ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ ಮೋದಿ ಸರ್ಕಾರದಲ್ಲಿ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವರು. ಸಚಿವರ ನೇತೃತ್ವದ ತಂಡ ಆಗಸ್ಟ್ 16ರಂದು ಹುಬ್ಬಳ್ಳಿ, 17ರಂದು ಕೊಡಗು ಮತ್ತು ದಕ್ಷಿಣ ಕನ್ನಡ, 18ರಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ, 19ರಂದು ಬೆಂಗಳೂರು ನಗರದಲ್ಲಿ ಯಾತ್ರೆ ನಡೆಸಲಿದೆ.

ಭಗವಂತ ಖೂಬಾ ತಂಡ
ಬೀದರ್ ಸಂಸದ ಭಗವಂತ ಖೂಬಾ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವರು. ಭಗವಂತ ಖೂಬಾ ನೇತೃತ್ವದ ತಂಡ ಆಗಸ್ಟ್ 16ಕ್ಕೆ ಬಳ್ಳಾರಿ, 17ಕ್ಕೆ ರಾಯಚೂರು ಮತ್ತು ಯಾದಗಿರಿ, 18ಕ್ಕೆ ಕಲಬುರಗಿ ಮತ್ತು ಬೀದರ್‌ನಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಿದೆ.

ಎ. ನಾರಾಯಣಸ್ವಾಮಿ ತಂಡ
ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ನರೇಂದ್ರ ಮೋದಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವರು. ಸಚಿವರ ನೇತೃತ್ವದ ತಂಡ ಆಗಸ್ಟ್ 17ರಂದು ಬೆಂಗಳೂರು ಗ್ರಾಮೀಣ ಮತ್ತು ತುಮಕೂರು. 18ಕ್ಕೆ ಚಿತ್ರದುರ್ಗ ಮತ್ತು ದಾವಣಗೆರೆ. 19ರಂದು ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಸಂಚಾರ ನಡೆಸಲಿದೆ.

ಶೋಭಾ ಕರಂದ್ಲಾಜೆ ತಂಡ
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಧಾನಿ ಮೋದಿ ಸಂಪುಟದಲ್ಲಿ ಕೃಷಿ ಖಾತೆ ರಾಜ್ಯ ಸಚಿವೆ. ಸಚಿವರ ನೇತೃತ್ವದ ತಂಡ ಆಗಸ್ಟ್ 17ರಂದು ಮಂಡ್ಯ ಮತ್ತು ಚಾಮರಾಜನಗರ. 18ರಂದು ಮೈಸೂರು ಮತ್ತು ಹಾಸನ. ಆಗಸ್ಟ್ 20ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದೆ.

ನರೇಂದ್ರ ಮೋದಿ ಸೂಚನೆ
ಜನಾಶೀರ್ವಾದ ಯಾತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ನಡೆಸಲಾಗುತ್ತಿದೆ. ತೆರೆದ ವಾಹನದಲ್ಲಿ ಯಾತ್ರೆ ನಡೆಸುತ್ತಾ ಮಾರ್ಗದಲ್ಲಿ ಅಲ್ಲಲ್ಲಿ ಚಿಕ್ಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂತರು, ಕ್ರೀಡಾಪಟುಗಳು, ಉದ್ಯಮಿಗಳ ಜೊತೆ ಕೇಂದ್ರ ಸಚಿವರು ಸಂವಾದವನ್ನು ನಡೆಸಲಿದ್ದಾರೆ. ರಾತ್ರಿಯ ವೇಳೆ ಗ್ರಾಮ ವಾಸ್ತವ್ಯ ಸಹ ನಡೆಸಲಿದ್ದಾರೆ.

150 ಲೋಕಸಭಾ ಕ್ಷೇತ್ರ
4 ದಿನಗಳ ಜನಾಶೀರ್ವಾದ ಯಾತ್ರೆ 150 ಲೋಕಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಲಿದೆ. ಒಬ್ಬರು ಸಚಿವರು ಸುಮಾರು 400 ಕಿ. ಮೀ. ಸಂಚಾರ ನಡೆಸಲಿದ್ದಾರೆ. 15,000 ಕಿ. ಮೀ. ಯಾತ್ರೆ ಮಾಡಲು ಯೋಜನೆ ರೂಪಿಸಲಾಗಿದೆ. 19 ರಾಜ್ಯಗಳಲ್ಲಿ ಜನಾಶೀರ್ವಾದ ಯಾತ್ರೆ ನಡೆಯಲಿದೆ.
ನರೇಂದ್ರ ಮೋದಿ ಜುಲೈನಲ್ಲಿ ಸಂಪುಟ ವಿಸ್ತರಣೆ ಮಾಡಿದಾಗ ಹೊಸದಾಗಿ ಸಂಪುಟಕ್ಕೆ ಸೇರಿದ ಸಚಿವರು ಮಾತ್ರ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications