ಕೊಲ್ಲುವ ಸಂಚು; ಕೇಂದ್ರ ಸರ್ಕಾರದಿಂದ ಜನಾರ್ದನ ರೆಡ್ಡಿ Z+ ಸೆಕ್ಯೂರಿಟಿ ಪಡೆಯಲಿ: ಡಿ ಕೆ ಶಿವಕುಮಾರ್ ತಿರುಗೇಟು
ಬಳ್ಳಾರಿ: ಜನಾರ್ದನ ರೆಡ್ಡಿ ಅವರು ತಮ್ಮನ್ನು ಕೊಲ್ಲುವ ಸಂಚು ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಝಡ್ ಕೆಟಗೆರಿ ಭದ್ರತೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಭದ್ರತೆಯನ್ನು ಯಾರು ನೀಡಬೇಕು ಎಂದು ನನಗೆ ಗೊತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಈ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ತಿಳಿಯಿತು. ಝಡ್ ಕೆಟಗರಿ ಭದ್ರತೆ ಬೇಕಾಗಿರುವವರು ಕೇಂದ್ರ ಸರ್ಕಾರದಿಂದ ತೆಗೆದುಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ ಎಂದು ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಜನಾರ್ದನ ರೆಡ್ಡಿ ಅವರು ತಮ್ಮನ್ನು ಕೊಲ್ಲುವ ಸಂಚು ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಅವರು ದೂರು ನೀಡಿದ್ದಾರಾ ಎಂದು ಕೇಳಿದೆ. ಯಾವುದೇ ದೂರು ನೀಡಿಲ್ಲ ಎಂಬ ವಿಚಾರ ತಿಳಿಯಿತು. ಜನಾರ್ದನ ರೆಡ್ಡಿ ಅವರಿಗೆ ದೂರು ನೀಡಲು ಸಾಧ್ಯವಾಗದಿದ್ದರೆ, ಅವರ ಗನ್ ಮ್ಯಾನ್ ಗಳು ದೂರು ನೀಡಲು ಅವಕಾಶವಿದೆ. ಶಾಸಕರು ಹಾಗೂ ಸಂಸದರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಜನಾರ್ದನ ರೆಡ್ಡಿ ದಂಪತಿಗೆ ಐವರು ಭದ್ರತಾ ಸಿಬ್ಬಂದಿ ನೀಡಿದ್ದಾರೆ. ಬಳ್ಳಾರಿಯಲ್ಲಿ ಇಬ್ಬರು, ಕೊಪ್ಪಳದಲ್ಲಿ ಒಬ್ಬರು, ಅವರ ಧರ್ಮಪತ್ನಿಗೆ ಒಬ್ಬರು, ಸೋಮಶೇಖರ್ ಅವರಿಗೆ ಒಬ್ಬರು, ಶ್ರೀರಾಮುಲು ಅವರಿಗೆ ಇಬ್ಬರು ಗನ್ ಮ್ಯಾನ್ ಗಳನ್ನು ನಿಯೋಜಿಸಲಾಗಿದ್ದು, ಈ ಭದ್ರತಾ ಸಿಬ್ಬಂದಿ ಅವರ ಜತೆಯಲ್ಲೇ ಇದ್ದಾರೆ.

ಈ ಅಹಿತಕರ ಘಟನೆ ಆಗಬಾರದಿತ್ತು. ನಾನು ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಬಳ್ಳಾರಿ ಇತಿಹಾಸ ದೊಡ್ಡದಿದೆ. ದಯವಿಟ್ಟು ಇದರ ಗೌರವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬೇಡಿ. ನಾನು ನಮ್ಮವರಿಗೆ ಬುದ್ಧಿವಾದ ಹೇಳಿದ್ದು, ಮುಂದೆಯೂ ಹೇಳುತ್ತೇನೆ. ಬಿಜೆಪಿಯವರಿಗೆ ಅವರ ನಾಯಕರು ಬಹಳ ದೊಡ್ಡವರಿದ್ದಾರೆ, ಅವರಿಗೆ ಬಿಡುತ್ತೇನೆ ಎಂದು ತಿಳಿಸಿದರು.
ಈ ಹಿಂದೆ ನಡೆದ ಘಟನೆಗಳಿಂದ ಬಳ್ಳಾರಿ ಜಿಲ್ಲೆಗೆ ಆಗಿದ್ದ ಅಪಮಾನ, ತೊಂದರೆ, ಉದ್ಯೋಗ ನಷ್ಟ, ಆರ್ಥಿಕ ನಷ್ಟದಿಂದ ಹೊರಬಂದು ಕಳೆದ ಹತ್ತು ವರ್ಷಗಳಲ್ಲಿ ಚೇತರಿಸಿತ್ತು. ಈಗ ವಾಲ್ಮೀಕಿ ಅವರ ಪುತ್ಥಳಿ ಅನಾವರಣ ಮಾಡುವ ವಿಚಾರದಲ್ಲಿ ಇಂತಹ ಘಟನೆ ನಡೆದಿದೆ. ಧಾರ್ಮಿಕವಾಗಿ ಇದನ್ನು ಉದ್ಘಾಟನೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ನೀಡಲಾಗಿತ್ತು. ಆದರೆ ಇನ್ನು ಅನುಮತಿ ನೀಡುವುದು ಬಾಕಿ ಇತ್ತು. ಅರುಣ್ ಯೋಗಿರಾಜ್ ಅವರು ನಿರ್ಮಿಸಿರುವ ಪುತ್ಥಳಿ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಎಲ್ಲಾ ಪಕ್ಷದ ನಾಯಕರು ಭಾಗವಹಿಸಿದ್ದರು. ಮೂರು ದಿನಗಳ ಮುಂಚೆ ನಮ್ಮ ಮಿತ್ರ ಶ್ರೀರಾಮುಲು ಅವರು ಇದರ ಅಗತ್ಯವಿಲ್ಲ, ನನ್ನನ್ನು ಕರೆಯಬೇಡಿ ಎಂದು ಹೇಳಿದ್ದರು. ಇದು ಅವರ ವೈಯಕ್ತಿಕ ವಿಚಾರ ಎಂದರು.
ಕುಮಾರಸ್ವಾಮಿ ಅವರು ಇಲ್ಲಿಗೆ ಬಾರದೇ, ಅಲ್ಲೆಲ್ಲೋ ಹೇಳಿಕೆ ನೀಡಿದ್ದಾರೆ. ಎರಡು ಬಾರಿ ಶವಪರೀಕ್ಷೆ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಅವರಿಗೆ ಯಾರು ಸಂಶೋಧನೆ ಮಾಡಿ ಈ ಮಾಹಿತಿ ನೀಡಿದರೋ ಗೊತ್ತಿಲ್ಲ. ಈ ವಿಚಾರವಾಗಿ ಜಿಲ್ಲಾ ವೈದ್ಯಾಧಿಕಾರಿ ಅವರನ್ನು ವಿಚಾರಿಸಿದೆ. ಅವರು ಶವಪರೀಕ್ಷೆಗೆ ಒಂದೇ ಒಂದು ಅರ್ಜಿ ಬಂದಿದೆ. ಬೆಳಗ್ಗೆ 6-8 ಗಂಟೆವರೆಗೂ ಶವಪರೀಕ್ಷೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಯಾವ ಲೆಕ್ಕದಲ್ಲಿ 2 ಶವಪರೀಕ್ಷೆ ನಡೆದಿದೆ ಎಂದು ಕೇಂದ್ರ ಸಚಿವರು ರಾಜ್ಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರ ಮಾಹಿತಿ ಮೂಲ ಏನು ಎಂದು ಮಾಧ್ಯಮಗಳು ಕೇಳಬೇಕು. ಅಂತ್ಯಸಂಸ್ಕಾರ ಆದ ನಂತರ ಶವ ತೆಗೆದು ಪರೀಕ್ಷೆ ಮಾಡಲಾಗಿದೆಯೇ ಎಂದು ನಾನು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ವಾಲ್ಮೀಕಿ ಅವರ ಬ್ಯಾನರ್ ಹರಿದುಹಾಕಿದ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರಿಬ್ಬರು ಈಗ ತಬ್ಬಾಡುತ್ತಿದ್ದಾರೆ. ತಬ್ಬಾಡಲಿ, ತೊಂದರೆ ಇಲ್ಲ. ಈ ಹಿಂದೆ ಒಬ್ಬರು ಮತ್ತೊಬ್ಬರ ಮೇಲೆ ಎಷ್ಟು ಪ್ರೀತಿ, ಲವಲವಿಕೆ ಹೊಂದಿದ್ದರು, ಕುಮಾರಸ್ವಾಮಿ ಹಾಗೂ ಜನಾರ್ದನ ರೆಡ್ಡಿ ನಡುವೆ ಸಂಬಂಧ ಹೇಗಿತ್ತು, ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವೆ ಸಂಬಂಧ ಹೇಗಿತ್ತು, ನಮಗೂ ಶ್ರೀರಾಮುಲು, ಕುಮಾರಸ್ವಾಮಿಗೆ ಏನಿತ್ತು ಎಂಬುದನ್ನು ಬದಿಗಿಡೋಣ. ಅವರು ಒಟ್ಟಾಗಿರಲಿ, ನಾವು ಬೇಡ ಎನ್ನುವುದಿಲ್ಲ. ಆದರೆ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸಾರ್ವಜನಿಕವಾಗಿ ಈ ರೀತಿ ಸುಳ್ಳು ಹೇಳುವುದರಿಂದ ನಿಮ್ಮ ಘನತೆಗೆ ಧಕ್ಕೆ ಬರುತ್ತದೆಯೇ ಎಂದು ಕಿಡಿಕಾರಿದರು.












Click it and Unblock the Notifications