ಬಳ್ಳಾರಿಗೆ ಜನಾರ್ದನ ರೆಡ್ಡಿ, ಪಕ್ಷ ನೀಡುವ ಮೊದಲ ಟಾಸ್ಕ್ ಯಾವುದು?
ಬಳ್ಳಾರಿ, ಸೆಪ್ಟೆಂಬರ್ 30: ಗಂಗಾವತಿಯ ಶಾಸಕ, ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲಿದ್ದಾರೆ. ಅವರು ಬಳ್ಳಾರಿಗೆ ಭೇಟಿ ನೀಡಲು ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ಸೋಮವಾರ ಸಡಿಲಗೊಳಿಸಿದೆ. ಕೋರ್ಟ್ ತೀರ್ಪಿನ ಬಳಿಕ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈಗ ರೆಡ್ಡಿ ಬಳ್ಳಾರಿಗೆ ಯಾವಾಗ ಭೇಟಿ ನೀಡಲಿದ್ದಾರೆ? ಎಂಬುದು ಕುತೂಹಲವಾಗಿದೆ.
ಸೋಮವಾರ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಾಗ ಸುಪ್ರೀಂಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿತ್ತು. ಇದರಿಂದಾಗಿ ಅವರು ಗಂಗಾವತಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕೋರ್ಟ್ ಅನುಮತಿ ಪಡೆದು ಬಳ್ಳಾರಿಗೆ ಆಗಾಗ ಭೇಟಿ ನೀಡುತ್ತಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, "ನವರಾತ್ರಿ ಮೊದಲ ದಿನ ನಾನು ಬಳ್ಳಾರಿಗೆ ಭೇಟಿ ನೀಡಿ, ದುರ್ಗಾ ಮಾತೆ ಆಶೀರ್ವಾದ ಪಡೆಯುತ್ತೇನೆ. ಕೋರ್ಟ್ ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಸಾಮಾನ್ಯ ಕಾರ್ಯಕರ್ತನಾಗಿ ನಾನು ಜಿಲ್ಲೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ನಾನು ಬಳ್ಳಾರಿಗೆ ಏನು ಮಾಡಿರುವೆ? ಎಂಬುದು ಜನರಿಗೆ ತಿಳಿದಿದೆ" ಎಂದರು.
"ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಸಚಿವನಾಗಿದ್ದೆ. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಎಲ್ಲವೂ ಜನರಿಗೆ ತಿಳಿದಿದೆ. ಕೋರ್ಟ್ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡಿದೆ, ಇದರಿಂದ ಸಂತಸವಾಗಿದೆ" ಎಂದು ಜನಾರ್ದನ ರೆಡ್ಡಿ ಹೇಳಿದರು.
ಮೊದಲ ಟಾಸ್ಕ್ ಉಪ ಚುನಾವಣೆ: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪ್ರಭಾವ ಏನು? ಎಂಬುದನ್ನು ವಿವರಿಸಿ ಹೇಳ ಬೇಕಿಲ್ಲ. ಜನಾರ್ದನ ರೆಡ್ಡಿ ಮತ್ತೆ ಬಳ್ಳಾರಿಗೆ ಕಾಲಿಟ್ಟರೆ ಅಲ್ಲಿನ ರಾಜಕೀಯ ಚಿತ್ರವೇ ಬದಲಾಗಲಿದೆ. ಬಿಜೆಪಿ ಸೇರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿರುವ ಜನಾರ್ದನ ರೆಡ್ಡಿ ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಈಗ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಉಪ ಚುನಾವಣೆ ಹತ್ತಿರವಾಗಿರುವಾಗ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ಸಿಕ್ಕಿದೆ. ಆದ್ದರಿಂದ ಉಪ ಚುನಾವಣೆ ಚಿತ್ರಣವೇ ಬದಲಾಗಲಿದೆ. ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಸೇರಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದ್ದ ಸಂಡೂರು ಕ್ಷೇತ್ರವನ್ನು ಮರಳಿ ಬಿಜೆಪಿ ತಂದು ಕೊಡಲಿದ್ದಾರೆಯೇ? ಕಾದು ನೋಡಬೇಕು.
ಜನಾರ್ದನ ರೆಡ್ಡಿ ಸೋಮವಾರ, "ಸಂಡೂರು ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಸಂಡೂರು ಅಭ್ಯರ್ಥಿ ಯಾರು? ಎಂಬುದು ಇನ್ನೂ ಘೋಷಣೆಯಾಗಿಲ್ಲ. ಆದರೆ ಪಕ್ಷದ ನಾಯಕರು ಸಂಡೂರು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಅನ್ನು ಜನಾರ್ದನ ರೆಡ್ಡಿಗೆ ನೀಡುವುದಂತೂ ಖಾತ್ರಿಯಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು. ಶಿಲ್ಪಾ ರಾಘವೇಂದ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಚುನಾವಣೆಯಲ್ಲಿ ಅವರು 49,701 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್‌ನ ಇ. ತುಕಾರಾಂ 85,223 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ ಸಂಡೂರು ಶಾಸಕ ಇ. ತುಕಾರಾಂರನ್ನು 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಕಣಕ್ಕಿಳಿಸಿತು. ಬಿಜೆಪಿಯ ಬಿ. ಶ್ರೀರಾಮುಲು ಸೋಲಿಸಿದ ಅವರು ಸಂಸದರಾಗಿ ಆಯ್ಕೆಯಾದರು. ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಉಪ ಚುನಾವಣೆ ಘೋಷಣೆಯಾಬೇಕಿದೆ.
ಮತ್ತೊಂದು ಕಡೆ ಸಂಡೂರು ಕ್ಷೇತ್ರದ ಉಪ ಚುನಾವಣೆಗೆ ಬಿ. ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ರಾಧಾ ಮೋಹನ್ ದಾಸ್ ಅಗರ್ವಾಲ್, "ಸಂಡೂರು ಕ್ಷೇತ್ರದ ಉಪ ಚುನಾವಣೆಗೆ ಬಿ. ಶ್ರೀರಾಮುಲು ಪಕ್ಷದ ಅಭ್ಯರ್ಥಿಯಲ್ಲ. ಅವರು ಟಿಕೆಟ್ ಆಕಾಂಕ್ಷಿಯೂ ಅಲ್ಲ" ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಅಭ್ಯರ್ಥಿ ಯಾರು? ಎಂಬ ಕುತೂಹಲ ಹುಟ್ಟು ಹಾಕಿದ್ದಾರೆ.
ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಕೋರ್ಟ್ ಅವಕಾಶ ನೀಡಿರುವುದು ಬಿಜೆಪಿಗೆ ಆನೆ ಬಲವನ್ನು ತಂದಿದೆ. ಕೇಂದ್ರ ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ಸಂಡೂರು ಉಪ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಲಿದೆ. ಆಗ ಜನಾರ್ದನ ರೆಡ್ಡಿ ಉಪ ಚುನಾವಣೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಪಡೆಯುವ ನಿರೀಕ್ಷೆ ಇದೆ.












Click it and Unblock the Notifications