ಡಿಸಿಎಂ ಡಿಕೆಶಿ ಭೇಟಿಯಾದ ಜಗನ್ ಮೋಹನ್ ರೆಡ್ಡಿ ಸಹೋದರಿ
ಬೆಂಗಳೂರು, ಮೇ 29; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತಕ್ಕಿಂತ ಅಧಿಕ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸರ್ಕಾರ ರಚನೆ ಮಾಡಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ವಿವಿಧ ರಾಜ್ಯಗಳ ನಾಯಕರು ನೂತನ ಸರ್ಕಾರಕ್ಕೆ ಶುಭ ಹಾರೈಕೆ ಮಾಡುತ್ತಿದ್ದಾರೆ.
ಸೋಮವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ವೈ. ಎಸ್. ಶರ್ಮಿಳಾ ರೆಡ್ಡಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಸದಾಶಿವನಗರದ ಗೃಹ ಕಚೇರಿಯಲ್ಲಿ ಭೇಟಿಯಾಗಿ ಶುಭ ಹಾರೈಸಿದರು.

ಜಗನ್ ಮೋಹನ್ ರೆಡ್ಡಿ ಸಹೋದರಿ ವೈ. ಎಸ್. ಶರ್ಮಿಳಾ ರೆಡ್ಡಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ವೈ. ಎಸ್. ಆರ್. ತೆಲಂಗಾಣ ಪಕ್ಷದ ಸಂಸ್ಥಾಪಕರು ಅವರು. ಕೆ. ಚಂದ್ರಶೇಖರಾವ್ ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡುವ ಮೂಲಕ ಈ ವರ್ಷ ನಡೆಯುವ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ, ಅವರ ಕುಟುಂಬ ರಾಜಕೀಯದ ಹೊರತಾಗಿಯೂ ಕರ್ನಾಟಕದ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಬೆಂಗಳೂರಿನಲ್ಲಿ ಐಷಾರಾಮಿ ಬಂಗಲೆಯನ್ನು ಜಗನ್ ಹೊಂದಿದ್ದಾರೆ. ರಾಜ್ಯದಲ್ಲಿ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ವೈ. ಎಸ್. ಶರ್ಮಿಳಾ ರೆಡ್ಡಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಸೌಹಾರ್ದಯುತವಾಗಿ ಶುಭ ಕೋರಿದರು. ಡಿ. ಕೆ. ಶಿವಕುಮಾರ್ ಈ ಕುರಿತ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ವೈ. ಎಸ್. ಶರ್ಮಿಳಾ ರೆಡ್ಡಿ; ವೈ. ಎಸ್. ಜಗನ್ ಮೋಹನ್ ರೆಡ್ಡಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ. ಆಂಧ್ರ ಪ್ರದೇಶದಲ್ಲಿ ಅವರ ಪಕ್ಷ ಅಧಿಕಾರದಲ್ಲಿದೆ. ಜಗನ್ ಮೋಹನ್ ರೆಡ್ಡಿ ತಂಗಿ ವೈ. ಎಸ್. ಶರ್ಮಿಳಾ ತೆಲಂಗಾಣ ರಾಜ್ಯದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅದಕ್ಕಾಗಿಯೇ ಅವರು ತಂದೆಯ ಹೆಸರನ್ನು ಒಳಗೊಂಡ ವೈಎಸ್ಆರ್ ತೆಲಂಗಾಣ ಪಕ್ಷ ಸ್ಥಾಪನೆ ಮಾಡಿದ್ದಾರೆ. ತೆಲಂಗಾಣದಲ್ಲಿ ರಾಜಕೀಯ ನಡೆಸುವ ಕುರಿತು ಅಣ್ಣ ಮತ್ತು ತಂಗಿಯ ನಡುವೆ ಭಿನ್ನಾಭಿಪ್ರಾಯವಿದೆ.
ತೆಲಂಗಾಣದಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡಲು ಜಗನ್ ಮೋಹನ್ ರೆಡ್ಡಿ ಒಪ್ಪಿಗೆ ನೀಡಿರಲಿಲ್ಲ ಎಂಬ ಸುದ್ದಿ ಇದೆ. ಆದರೆ ಪಕ್ಷದ ನಾಯಕರ ಪ್ರಕಾರ ವೈ. ಎಸ್. ಶರ್ಮಿಳಾ ಯಾವುದೇ ತೀರ್ಮಾನ ಕೈಗೊಳ್ಳಲು ಸ್ವತಂತ್ರರು. ಆದ್ದರಿಂದ ತಂದೆಯ ಹುಟ್ಟಿದ ಹಬ್ಬದ ದಿನವೇ ತೆಲಂಗಾಣದಲ್ಲಿ ಅವರು ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಈ ವರ್ಷದ ಡಿಸೆಂಬರ್ ವೇಳೆಗೆ ಚುನಾವಣೆ ನಡೆಯಲಿದೆ. ಸದ್ಯ ರಾಜ್ಯದಲ್ಲಿ ಕೆ. ಚಂದ್ರಶೇಖರರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಅಧಿಕಾರದಲ್ಲಿದೆ. ರಾಷ್ಟ್ರ ರಾಜಕೀಯದ ಮೇಲೆಯೂ ಕಣ್ಣಿಟ್ಟಿರುವ ಅವರು ಟಿಆರ್‌ಎಸ್ ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬದಲಾವಣೆ ಮಾಡಿದ್ದಾರೆ.
2019ರ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸರ್ಕಾರ ಹೀನಾಯ ಸೋಲು ಕಂಡು ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ವೈ. ಎಸ್. ಶರ್ಮಿಳಾ ಅವರ ಪಾತ್ರವೂ ಮಹತ್ವದ್ದಾಗಿದೆ. ಸುಮಾರು 1,600 ಕಿ. ಮೀ. ಸಂಚಾರ ನಡೆಸಿ, 39 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿ ಅವರು ಪಕ್ಷವನ್ನು ಸಂಘಟನೆ ಮಾಡಿದ್ದರು. ಆದ್ದರಿಂದ ತೆಲಂಗಾಣ ರಾಜ್ಯಕ್ಕೆ ಅವರು ಆಗಮಿಸಿದ್ದು, ಸಹಜವಾಗಿಯೇ ಇತರ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications