IT Raid: ಬಿಜೆಪಿ ನಾಯಕ ಎಸ್ಎಂ ಕೃಷ್ಣ ಸಹೋದರಿ ಮನೆ ಮೇಲೆ ಐಟಿ ದಾಳಿ; ಶೋಧಕಾರ್ಯ ಮುಂದುವರಿಕೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಮೂರೇ ದಿನಗಳು ಬಾಕಿ ಇದ್ದು, ಈ ವೇಳೆ ಹರಿದಾಡುವ ಕುರುಡು ಕಾಂಚಾಣದ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಇದೀಗ ರಾಜ್ಯದಲ್ಲಿ ಐಟಿ ದಾಳಿ ಮುಂದುವರೆದಿದ್ದು, ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಸಹೋದರಿ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೋರಮಂಗಲದ 1ನೇ ಬ್ಲಾಕ್ನಲ್ಲಿರುವ ನಿವಾಸ ಎಸ್.ಎಂ.ಕೃಷ್ಣ ಸಹೋದರಿ ಎಸ್ಎಂ ಸುನೀತಾ ಅವರ ಮನೆ ಮೇಲೆ ಐಟಿ ದಾಳಿಯಾಗಿದೆ. ಬಾಗ್ಮನೆ ಹೆಸರಿನಲ್ಲಿರುವ ನಿವಾಸ ಹಾಗೂ ಬಾಗ್ಮನೆ ಬಿಲ್ಡರ್ ಕಚೇರಿಗಳ ಮೇಲೆಯೂ ದಾಳಿ ನಡೆಸಲಾಗಿದ್ದು, ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.
ಮತ್ತೊಂಡೆದೆ, ಟ್ರಾನ್ ಇನ್ಸೈನಿಯಾ ಅಪಾರ್ಟ್‌ಮೆಂಟ್ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಸುಮಾರು ಎಂಟು ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ದಾಳಿ
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿಯೂ ಐಟಿ ದಾಳಿಗಳು ಮುಂದುವರೆದಿದೆ. ಉಳಿದಂತೆ ರಿಯಲ್ ಎಸ್ಟೇಟ್ ಉದ್ಯಮಿ ಹರಿರೆಡ್ಡಿ ಎಂಬುವರ ಮನೆಯ ಮೇಲೂ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.

ಬೆಂಗಳೂರಿನ ಕಾಮಾಕ್ಯ ಬಳಿ ಇರುವ ಉದ್ಯಮಿ ಹರಿರೆಡ್ಡಿ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೂರು ಇನ್ನೋವಾ ಕಾರುಗಳಲ್ಲಿ ಅಧಿಕಾರಿಗಳು ಆಗಮಿಸಿದ್ದು, ಶನಿವಾರ ಸಂಜೆಯಿಂದಲೇ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಆಪ್ತನ ಮನೆ ಮೇಲೆ ಐಟಿ ದಾಳಿ
ಇನ್ನು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಗೌಡ ಆಪ್ತ ಸುರೇಶ್ ಬಾಬು ಎಂಬುವರ ಮನೆಯಲ್ಲಿ ಎರಡು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಚುನಾವಣಾ ಅಧಿಕಾರಿಗಳು 2 ಕೋಟಿ ಹಣ ಜಪ್ತಿ ಮಾಡಿದ್ದು, ತಪಾಸಣೆ ಮುಂದುವರಿದಿದೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ಗೌಡ ಬೆಂಬಲಿಗ ಸುರೇಶ್ ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉದಯ್ ಗೌಡ ಅವರ ಮತ್ತೊಬ್ಬ ಬೆಂಗಲಿಗ ರಮೇಶ್ ಮನೆಯ ಮೇಲೆಯೂ ಐಟಿ ದಾಳಿ ಅಧಿಕಾತರಿಗಳು ದಾಳಿ ನಡೆಸಿದ್ದು, ಮನೆಯ ಮಹಡಿಯ ಮೇಲೆ 3.50 ಲಕ್ಷ ರೂಪಾಯಿ ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜು ಬೋರಾ ಹಾಗೂ ನಗರಸಭೆ ಮಾಜಿ ಅಧ್ಯಕ್ಷ, ಉದ್ಯಮಿ ವೆಂಕಟೇಶ್ ಸಾಕಾ ಮನೆಗಳ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ.
ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮೇಲೆ ಐಟಿ ದಾಳಿ
ಕಲಬುರಗಿಯ ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮೇಲೆಯೂ ಐಟಿ ದಾಳಿ ನಡೆದಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌವಾಣ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಇತ್ತೀಚಿಗಷ್ಟೆ ಬಿಜೆಪಿ ತೊರೆದು ಅರವಿಂದ್ ಚೌವಾಣ್ ಕಾಂಗ್ರೆಸ್ ಸೇರಿದ್ದರು.
ಮೇ 6ರಂದು ಸಾಯಂಕಾಲ ಮನೆ, ಹೋಟೆಲ್, ಸ್ಟೋನ್ ಕ್ರಷರ್ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ರಾತ್ರಿ ಹನ್ನೊಂದು ಗಂಟೆವರಗೆ ಪರಿಶೀಲನೆ ನಡೆಸಿ ಐಟಿ ಅಧಿಕಾರಿಗಳು ತೆರಳಿದ್ದಾರೆ. ಎಲ್ಲ ಕಡೆ ದಾಖಲಾತಿಗಳ ಪರಿಶೀಲನೆ ನಡೆಸಲಾಗಿದೆ.
ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿ ಆಪ್ತನ ಮನೆ ಮೇಲೆ ಐಟಿ ದಾಳಿ
ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ. ಬ್ಯಾಡಗಿ ಪಟ್ಟಣದಲ್ಲಿರುವ ವಿದ್ಯಾನಗರದ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಚನ್ನಬಸಪ್ಪ ಹುಲ್ಲತ್ತಿ ಮಾಜಿ ಎಪಿಎಂಸಿ ಅಧ್ಯಕ್ಷರಾಗಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ನಿರಂತರವಾಗಿ ಶೋಧ ಮುಂದುವರೆದಿದೆ. ಸಿ.ಕೆ.ಎಲ್.ಇ ಆಂಡ್ ಸನ್ಸ್ ಮೆಣಸಿನಕಾಯಿ ದಲ್ಲಾಳಿ ಅಂಗಡಿ ನಡೆಸುತ್ತಿರುವ ಚನ್ನಬಸಪ್ಪ ಅವರು ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ್ ಜೊತೆ ನಿಕಟ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಚನ್ನಬಸಪ್ಪ ಬ್ಯಾಡಗಿಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಚುನಾವಣೆಗೆ ಫಂಡಿಂಗ್ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ದಾಳಿ ನಡೆಸಲಾಗಿದ್ದು, ಕೋಟ್ಯಂತರ ರೂಪಾಯಿ ದಾಖಲೆ ಇಲ್ಲದ ಹಣ ಪತ್ತೆಯಾಗಿರುವ ಶಂಕೆ ಇದೆ. ಐಟಿ ಅಧಿಕಾರಿಗಳು ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications