"RSS ಇಲ್ಲದಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಇರುವ ಜಾಗ ಪಾಕಿಸ್ತಾನವಾಗಿಬಿಡುತ್ತಿತ್ತು"
ಬೆಂಗಳೂರು, ಆಗಸ್ಟ್25: ಭಾರತದ ಭಾಗವನ್ನು ಪಾಕಿಸ್ತಾನ ಮಾಡಿದ್ದು ಇದೇ ಕಾಂಗ್ರೆಸ್‌ನವರು. ಆರ್‌ಎಸ್‌ಎಸ್ ಇರುವುದರಿಂದಲೇ ಭಾರತ ಪಾಕಿಸ್ತಾನವಾಗದೆಯೇ ಹಾಗೆಯೇ ಉಳಿದಿದೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಇರುವ ಜಾಗ ಪಾಕಿಸ್ತಾನವಾಗಿಬಿಡುತ್ತಿತ್ತು ಎಂದು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಹೇಳಿದರು.
ಈ ಕುರಿತು ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕೂಡ ಆರ್‌ಎಸ್‌ಎಸ್ ಹಿನ್ನೆಲೆಯಿಂದಲೇ ಬಂದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆಯನ್ನು ಚೆನ್ನಾಗಿ ಹಾಡುತ್ತಾರೆ. ಡಿ.ಕೆ.ಶಿವಕುಮಾರ್ ಎಚ್ಚರಿಕೆಯ ನಡೆ ಇಡುತ್ತಿದ್ದಾರೆ. ಅವರ ಚಾಣಾಕ್ಷತನದಿಂದ ಕೆಲಸ ಮಾಡುತ್ತಿದ್ದಾರೆ. ನವೆಂಬರ್‌ನಲ್ಲಿ ಕ್ರಾಂತಿಯಾಗಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಇರುವುದು ಬುರುಡೆ ಗ್ಯಾಂಗ್ ಎಂದು ವಿಧಾನಸಭೆಯಲ್ಲಿ ಹೇಳಿದಾಗ ಕಾಂಗ್ರೆಸ್ ನಾಯಕರು ಅದನ್ನು ವಿರೋಧಿಸಿದ್ದರು. ಲವ್ ಜಿಹಾದ್‌ನಂತೆಯೇ ಮತಾಂತರದ ಜಿಹಾದಿ ಕಾರ್ಯ ನಡೆಯುತ್ತಿದೆ. ಅನನ್ಯ ಭಟ್ ಇರುವುದೇ ಸುಳ್ಳು ಎಂದು ತಿಳಿದುಬಂದಿದೆ. ಆ ವ್ಯಕ್ತಿಗೆ ಮಾಸ್ಕ್ ಹಾಕಿಸಿದ್ದೇ ಸಿಎಂ ಸಿದ್ದರಾಮಯ್ಯನವರ ಸರ್ಕಾರ. ಪ್ರಗತಿಪರರು ಸಿದ್ದರಾಮಯ್ಯನವರ ಕಚೇರಿಗೆ ಹೋಗಿ ನೂರಾರು ಕೊಲೆಯಾಗಿದೆ ಎಂದು ಹೇಳಿದ್ದರು. ಇಂತಹವರ ಮಾತು ಕೇಳಿ ಸಿಎಂ ಸಿದ್ದರಾಮಯ್ಯ 2-3 ಕೋಟಿ ರೂ. ಖರ್ಚು ಮಾಡಿದ್ದಾರೆ. ಯಾವನೋ ದಾರಿಹೋಕ ಬಂದು ಎಸ್‌ಐಟಿಗೆ ಆಗ್ರಹ ಮಾಡಿದರೆ, ಅದಕ್ಕಾಗಿ ಎಸ್‌ಐಟಿ ರಚಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಇಷ್ಟೆಲ್ಲ ಮಾಡಲಾಗಿದೆ ಎಂದು ದೂರಿದರು.
ಮಸೀದಿ, ಚರ್ಚ್ ವಿಷಯಕ್ಕೆ ಈ ಹೋರಾಟಗಾರರು ಹೋಗಲ್ಲ. ಹಿಂದೂ ದೇವಸ್ಥಾನಗಳ ಬಗ್ಗೆ ಈ ರೀತಿ ಟೀಕೆ ಮಾಡುತ್ತಾರೆ. ಬುರುಡೆ ತಂದ ವ್ಯಕ್ತಿಯ ಪೂರ್ವಾಪರವನ್ನು ಮೊದಲೇ ವಿಚಾರಿಸಬೇಕಿತ್ತು. ಏಕಾಏಕಿ ಆತ ಮಾಸ್ಕ್ ಹಾಕಿ ಗುರುತು ಮರೆಮಾಚಲಾಗಿದೆ. ಮಾಸ್ಕ್ ಹಾಕದೇ ಇದ್ದಿದ್ದರೆ ಆತನ ಊರಿನವರು ಅವನೆಂತಹ ಕಳ್ಳ ಎಂದು ವಿವರಿಸುತ್ತಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಕಾಮನ್‌ಸೆನ್ಸ್ ಇಲ್ಲ ಎಂದು ಆರ್ ಅಶೋಕ್ ಅವರು ತಿಳಿಸಿದರು.
ಕಾಂಗ್ರೆಸ್ ಸಚಿವರು ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ಮೊದಲೇ ದುರಸ್ತಿ ಮಾಡಿಸಿದ್ದರೆ ಬಹಳಷ್ಟು ನೀರು ಉಳಿದು ಬೆಳೆ ನಷ್ಟವಾಗುವುದು ತಪ್ಪುತ್ತಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ತುಂಗಭದ್ರಾ ಜಲಾಶಯದಲ್ಲಿ 105 ಟಿಎಂಸಿವರೆಗೆ ನೀರು ಸಂಗ್ರಹಿಸಬಹುದು. ಆದರೆ 80 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹಿಸಿದರೆ ಗೇಟ್‌ಗಳು ಹಾಳಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಹೆಚ್ಚು ನೀರು ಸಂಗ್ರಹಿಸುತ್ತಿಲ್ಲ. ಬಹಳ ಹಳೆಯದಾಗಿರುವುದರಿಂದ ಎಲ್ಲ ಗೇಟ್‌ಗಳನ್ನು ದುರಸ್ತಿ ಮಾಡಲು 52 ಕೋಟಿ ರೂ. ನೀಡಲಾಗಿದೆ. ಹೆಚ್ಚು ನೀರು ವ್ಯರ್ಥವಾಗಿ ಹರಿದುಹೋಗಿದೆ. ಈ ಮೊದಲೇ ಗೇಟ್‌ಗಳನ್ನು ದುರಸ್ತಿ ಮಾಡಿದ್ದರೆ ಸುಮಾರು 180 ಟಿಎಂಸಿ ನೀರನ್ನು ಉಳಿಸಬಹುದಿತ್ತು. ಸಚಿವರು ಈ ಭಾಗಕ್ಕೆ ಭೇಟಿ ನೀಡಿದ್ದರೆ ಉಳಿಸಿದ ನೀರನ್ನು ರೈತರಿಗೆ ನೀಡಬಹುದಿತ್ತು. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗುವ ಉತ್ಸಾಹವನ್ನು ಈ ಕಡೆಗೆ ತೋರಿಸಬೇಕಿತ್ತು ಎಂದರು.
ನೀರು ವ್ಯರ್ಥವಾಗಿ ಹರಿದುಹೋಗಿರುವುದರಿಂದ ಈ ಭಾಗದಲ್ಲಿ ಸುಮಾರು 6-7 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ನಷ್ಟವಾಗಿ ಬೆಳೆಗಳಿಗೆ ಹಾನಿಯಾಗಿದೆ. ನೀರು ಸಿಕ್ಕಿದ್ದರೆ ರೈತರಿಗೆ ಬಹಳ ಅನುಕೂಲವಾಗುತ್ತಿತ್ತು. ಆದರೆ ಕಾಂಗ್ರೆಸ್ ಸಚಿವರು ನವೆಂಬರ್ ಕ್ರಾಂತಿಗೆ ಮಾತ್ರ ಸಿದ್ಧವಾಗುತ್ತಿದ್ದಾರೆ. ಪರಿಣಾಮ, ಬೇಗ ಹಣ ಬಿಡುಗಡೆಯಾಗದೆ ದುರಸ್ತಿ ಕಾರ್ಯ ನಡೆದಿಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಹೇಳಿದರು.












Click it and Unblock the Notifications