Gram Panchayat: ಗ್ರಾಮ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು ಯಾವುವು
ಬೆಂಗಳೂರು, ಫೆಬ್ರವರಿ 04: ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ಕರೆಯಲು ಹೊಸ ನಿಯಮಗಳನ್ನು ರೂಪಿಸಿದೆ. ಇದನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಸಭೆ ಕರೆಯುವ ಮತ್ತು ನಡೆಸುವು ನಿಯಮಗಳು, 2024) ಎಂದು ಕರೆಯತಕ್ಕದ್ದು ಎಂದು ರಾಜ್ಯಪತ್ರದಲ್ಲಿ ತಿಳಿಸಿದೆ. ಅಲ್ಲದೇ ಈ ಗ್ರಾಮ ಸಭೆಯಲ್ಲಿ ಯಾವ ಯಾವ ವಿಚಾರಗಳ ಕುರಿತು ಚರ್ಚಿಸಬೇಕು ಎಂದು ಹೇಳಿದೆ.
ಗ್ರಾಮ ಸಭೆಯಲ್ಲಿ ಮಂಡಿಸಬೇಕಾದ ವಿಷಯಗಳು ಯಾವುವು? ಎಂದು ಸರ್ಕಾರ ಹೇಳಿದೆ. ಸಭೆಯಲ್ಲಿ ಈ ಹಿಂದೆ ತತ್ಸಬಂಧವಾದ ಗ್ರಾಮಸಭೆಯ ನಡವಳಿಗಳಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳ ಇಲಾಖೆಗಳು ಕೈಗೊಂಡಿರುವ ಕ್ರಮದ ವರದಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಬೇಕು. ಪ್ರತಿಯೊಂದು ಕ್ಷೇತ್ರ ಇಲಾಖೆಯ ಪ್ರತಿನಿಧಿಸುವ ಅಧಿಕಾರಿಯು ಅವರುಗಳ ಇಲಾಖೆಯು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳು, ಅವುಗಳ ಅನುಷ್ಠಾನಕ್ಕೆ ಇಲಾಖೆಯಿಂದ ಲಭ್ಯವಾಗಿರುವ ಅನುದಾನದ ಮೊತ್ತದ ವಿವರಗಳನ್ನು ಸಭೆಯ ಮುಂದೆ ಮಂಡಿಸಬೇಕು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಮತ್ತು ಅದರಿಂದ ತಯಾರಿಸಿದ ವಾರ್ಷಿಕ ಯೋಜನೆಯಲ್ಲಿ ಒಳಗೊಂಡಿರುವ ಕಾರ್ಯಕ್ರಮಗಳನ್ನೇ ವಿವಿಧ ಇಲಾಖೆಗಳು (ಸರ್ಕಾರದ ಸಂಘ ಸಂಸ್ಥೆಗಳು ಮತ್ತು ನಿಗಮಗಳು ಒಳಗೊಂಡಂತೆ)ತಮ್ಮ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸುವುದು. ಅವುಗಳ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಗ್ರಾಮ ಸಭೆ ರಚಿಸಿದ ಸಮಿತಿಗಳಿಂದ ನಡೆಸಬೇಕು.
ವೈಯಕ್ತಿಕ ಫಲಾನುಭವಿಗಳ ಆಯ್ಕೆ: ರಾಜ್ಯ ವಲಯ ಮತ್ತು ಜಿಲ್ಲಾ ವಲಯದ ಎಲ್ಲಾ ಯೋಜನೆಗಳ ವೈಯಕ್ತಿಕ ಫಲಾನುಭವಿಗಳನ್ನು ಗುರುತಿಸಿ, ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿ, ಸಂಬಂಧಪಟ್ಟ ಇಲಾಖೆಗಳಿಗೆ ಪಟ್ಟಿಯನ್ನು ಕಳುಹಿಸಿಕೊಡುವುದು. ಸಂಬಂಧಪಟ್ಟ ಇಲಾಖೆಗಳು (ಸರ್ಕಾರದ ಸಂಸ್ಥೆಗಳನ್ನೊಳಗೊಂಡಂತೆ) ಯಥಾವತ್ತಾಗಿ ಅನುಷ್ಟಾನಗೊಳಿಸುವುದು.
ಸಮುದಾಯ ಕಾಮಗಾರಿಗಳ ಆಯ್ಕೆ. ಜನವಸತಿ ಸಭೆ ಮತ್ತು ವಾರ್ಡ್ ಸಭೆಗಳಿಂದ ಆಯ್ಕೆಯಾದ, ಅಗತ್ಯ ಮೂಲಭೂತ ಸೌಕರ್ಯಗಳ ಪಟ್ಟಿಯನ್ನು ಆದ್ಯತೆಯ ಪ್ರಕಾರ ಸಿದ್ಧಪಡಿಸಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಮತ್ತು ಇತರೆ ಇಲಾಖೆಗಳಿಗೆ ಕಳುಹಿಸಿಕೊಡುವುದು. ಸಂಬಂಧಿಸಿದಂತಹ ಸಂಸ್ಥೆಗಳು ಗ್ರಾಮ ಸಭೆ ಶಿಫಾರಸ್ಸು ಸಮುದಾಯ ಆಧಾರಿತ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ತನ್ನ ಕ್ರಿಯಾ ಯೋಜನೆಯಲ್ಲಿ ದೂರದೃಷ್ಟಿ ಯೋಜನೆಯ ಮಾರ್ಗಸೂಚಿಯ ಪಕಾರ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರತಕ್ಕದ್ದು.
ಬೀದಿ ದೀಪಗಳ ಅಗತ್ಯತೆ ಹಾಗೂ ಅವುಗಳು ಅನಗತ್ಯವಾಗಿ ಹಗಲು ವೇಳೆ ಬೆಳಗುತ್ತಿರುವುದನ್ನು ತಡೆಯುವ ಬಗ್ಗೆ ಸಮುದಾಯದ ನಲ್ಲಿಗಳ ನೀರು ನಿರ್ವಹಣೆ ಹಾಗೂ ಅನಗತ್ಯವಾಗಿ ನೀರು ಹರಿಯುವುದನ್ನು ನಿರ್ಬಂಧಿಸುವ ಬಗ್ಗೆ ಸಮುದಾಯದ ನೀರಿನ ನಲ್ಲಿಗಳು, ಸಾರ್ವಜನಿಕ ನೈರ್ಮಲ್ಯ ಘಟಕಗಳ ನಿರ್ವಹಣೆ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು.
ದುರ್ಬಲ ವರ್ಗದವರು ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳು, ಬಡತನ ರೇಖೆಗಿಂತ ಕೆಳಗಿರುವವರು, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುವುದು. ಈಗಾಗಲೇ ಸಿದ್ಧಪಡಿಸಿಕೊಂಡಿರುವ ದೂರದೃಷ್ಟಿ ಯೋಜನೆಯಿಂದ ಪ್ರಸ್ತುತ ವರ್ಷದ ಯೋಜನೆಗಳನ್ನು ರೂಪಿಸುವುದು.
ಗ್ರಾಮ ಸಭೆಯಲ್ಲಿ ಯಾರು ಪಾಲ್ಗೊಳ್ಳಬೇಕು?; ಗ್ರಾಮ ಸಭೆಯಲ್ಲಿ ಹಾಜರಿರಬೇಕಾದ ಇತರ ಇಲಾಖೆಯ ಅಧಿಕಾರಿ/ ಸಿಬ್ಬಂದಿಯವರು/ ಸರ್ಕಾರೇತರ ಸಂಸ್ಥೆಗಳ ಕುರಿತು ಮಾಹಿತಿ ನೀಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಪಧಾಧಿಕಾರಿಗಳು ಮತ್ತು ಇಲಾಖೆ (ಅದರಡಿಯಲ್ಲಿ ಬರುವ ಜಿಪಿಎಲ್‌ಎಫ್ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು. ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ. ಕೃಷಿ ಇಲಾಖೆಯ ಪ್ರತಿನಿಧಿಗಳು. ರೇಷ್ಮೆ ಇಲಾಖೆಯ ರೇಷ್ಮೆ ಕೃಷಿ ಸಹಾಯಕರು ಪಾಲ್ಗೊಳ್ಳಬೇಕು.
ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು. ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಪಶು ಪರಿವೀಕ್ಷಕರು. ವಿದ್ಯುತ್ ಸರಬರಾಜು(ESCOM)ನ- ಕಿರಿಯ ಅಭಿಯಂತರರು. ಅರಣ್ಯ ಇಲಾಖೆಯ ವನಪಾಲಕರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ -ಕಿರಿಯ / ಸಹಾಯಕ ಅಭಿಯಂತರರು. ಜಿಲ್ಲಾ ಪಂಚಾಯಿತಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಭಿಯಂತರರು ಭಾಗವಹಿಸಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು. ಆರೋಗ್ಯ ಮತ್ತು ಕ್ಷೇಮ ಸಲಹಾ ಕೇಂದ್ರ ಸಮುದಾಯ ಆರೋಗ್ಯ ಅಧಿಕಾರಿ. ಕಿರಿಯ/ ಸಹಾಯಕ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ (ಕಾರ್ಯನಿರ್ವಹಿಸುವ ಪಂಚಾಯತಿ ವ್ಯಾಪ್ತಿಯಲ್ಲಿ ಮಾತ್ರ) ಸಭೆಯಲ್ಲಿ ಪಾಲ್ಗೊಳ್ಳಬೇಕು.












Click it and Unblock the Notifications