Islam Religion:‘ಇಸ್ಲಾಂ ಶ್ರೇಷ್ಠ ಧರ್ಮ’ ಎಂದ ಸಚಿವ ರಾಯರೆಡ್ಡಿ; ಬೆಂಬಲಕ್ಕೆ ನಿಂತ ಯತೀಂದ್ರ ಸಿದ್ದರಾಮಯ್ಯ
Islam Religion: ಬೇರೆ ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠ. ನನಗೆ ಹಜ್ ಯಾತ್ರೆಗೆ ಹೋಗಬೇಕು ಎಂಬ ಆಸೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮೂಹ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠಮಾನ್ಯಗಳಿಗೆ ಹೋಗಬಾರದು, ನಾನು ಮಠ - ಮಾನ್ಯಗಳಿಗೆ ಜಾಸ್ತಿ ಹೋಗೋದೆ ಇಲ್ಲ. ಆದರೆ, ಹಜ್ ಯಾತ್ರೆಗೆ ಹೋಗುವ ಆಸೆ ಇದೆ. ಇಸ್ಲಾಂ ಧರ್ಮ ಒಂದು ಶ್ರೇಷ್ಠ ಧರ್ಮ, ಇಸ್ಲಾಂ ಧರ್ಮದ ಬಗ್ಗೆ ಸಮಾಜದಲ್ಲಿ ಹಲವು ತಪ್ಪು ಕಲ್ಪನೆಗಳಿವೆ ಎಂದರು.

"ನಾನು ಇಸ್ಲಾಂ ಧರ್ಮದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದೇನೆ. ಹಲವರಿಗೆ ಇಸ್ಲಾಂ ಧರ್ಮದ ಬಗ್ಗೆ ಸರಿಯಾದ ಅರಿವೇ ಇಲ್ಲ. ಧರ್ಮದ ಕುರಿತು ಇನ್ನಷ್ಟು ಅಧ್ಯಯನ ಮಾಡುವ ಅಗತ್ಯವಿದೆ. ನಾನು ಸಾಮಾನ್ಯವಾಗಿ ಮಠಮಾನ್ಯಗಳಿಗೆ ಹೆಚ್ಚಾಗಿ ಹೋಗುವುದಿಲ್ಲ" ಎಂದು ರಾಯರೆಡ್ಡಿ ತಿಳಿಸಿದರು.
Islam Religion: ಹಜ್ ಯಾತ್ರೆಗೆ ಹೋಗುವ ಆಸೆ
ತಮಗೆ ಹಜ್ ಯಾತ್ರೆಗೆ ತೆರಳುವ ಆಸೆಯಿದೆ ಎಂದ ರಾಯರೆಡ್ಡಿ, ಇಸ್ಲಾಂ ಧರ್ಮದ ಕುರಿತು ಹೆಚ್ಚಿನ ತಿಳುವಳಿಕೆ ಪಡೆಯಲು ತಾವು ಕುರಾನ್ ಅಧ್ಯಯನಕ್ಕೂ ಸಿದ್ಧವಿದ್ದೇನೆ ಎಂದು ಹೇಳಿದರು. ಇಸ್ಲಾಂ ಧರ್ಮದ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗಿದೆ. ವೈಜ್ಞಾನಿಕವಾಗಿ ರೂಪುಗೊಂಡಿರುವ ಧರ್ಮ ಎಂದರೆ ಇಸ್ಲಾಂ ಧರ್ಮ. ಅದರ ಹಿಂದಿನ ಇತಿಹಾಸವನ್ನು ಅಧ್ಯಯನ ಮಾಡಬೇಕು. ಮನುಷ್ಯ ಹೇಗೆ ಬದುಕಬೇಕು ಎಂಬ ವಿಚಾರಗಳೂ ಈ ಧರ್ಮದಲ್ಲಿ ಅಡಕವಾಗಿವೆ ಎಂದು ಅಭಿಪ್ರಾಯಪಟ್ಟರು.
'ಕುರಾನ್ ಕೇವಲ ಮುಸ್ಲಿಮರಿಗಷ್ಟೇ ಅಲ್ಲ'
ಕುರಾನ್ ಕೇವಲ ಮುಸ್ಲಿಮರಿಗಷ್ಟೇ ಸೀಮಿತವಾದ ಗ್ರಂಥವಲ್ಲ ಎಂದು ಹೇಳಿದ ಸಚಿವರು, ಯಾರು ಬೇಕಾದರೂ ಅದನ್ನು ಓದಿ ಅಧ್ಯಯನ ಮಾಡಬಹುದು.ಮಹಮ್ಮದ್ ಪೈಗಂಬರ್ ಅವರು ಇಡೀ ಮಾನವಕುಲಕ್ಕೆ ಕುರಾನ್ ನೀಡಿದ್ದಾರೆ. ಅದರಲ್ಲಿರುವ ವಿಚಾರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದು ಎಂದು ರಾಯರೆಡ್ಡಿ ಹೇಳಿದರು.
ರಾಯರೆಡ್ಡಿ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ಬೆಂಬಲ
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಯತೀಂದ್ರ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿದ್ದರೂ, ಸಮುದಾಯದ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯುತ್ತಿದೆ ಎಂದು ಯತೀಂದ್ರ ಹೇಳಿದರು.
'ಧರ್ಮಗಳ ನಡುವೆ ಜಗಳ ಬೇಡ'
ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ಪ್ರಶಂಸಿಸಿದ ಯತೀಂದ್ರ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಇಸ್ಲಾಂ ಧರ್ಮದ ಬಗ್ಗೆ ರಾಯರೆಡ್ಡಿ ಅವರಿಗೆ ಉತ್ತಮ ಜ್ಞಾನವಿದೆ ಎಂದು ಹೇಳಿದರು.
"ಎಲ್ಲರ ಸೃಷ್ಟಿಕರ್ತ ಒಬ್ಬನೇ. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣಬೇಕು. ಧರ್ಮಗಳ ನಡುವೆ ಜಗಳ ಹಚ್ಚಿ ರಾಜಕೀಯ ಲಾಭ ಪಡೆಯಬಾರದು. ಧರ್ಮದ ಮಧ್ಯೆ ರಾಜಕಾರಣ ಬೆರೆಸಬಾರದು. ಕೆಲ ಪಕ್ಷಗಳು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಇಂತಹ ರಾಜಕಾರಣ ಮಾಡುವ ಪಕ್ಷಗಳಿಗೆ ಜನರು ಬೆಂಬಲ ನೀಡಬಾರದು" ಎಂದು ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.


Click it and Unblock the Notifications
