ಗಣಿಧಣಿಯ ರಾಜಕೀಯ ದರ್ಬಾರ್ ಬಳ್ಳಾರಿಯಿಂದ ಕೋಲಾರಕ್ಕೆ ಶಿಫ್ಟ್?

Posted By:
Subscribe to Oneindia Kannada

ಬಳ್ಳಾರಿಯಲ್ಲಿ ಕೋಟೆಕಟ್ಟಿ ಮೆರೆದಿದ್ದ ಜನಾರ್ದನ ರೆಡ್ಡಿ ಅಂಡ್ ಕಂಪೆನಿಗೆ, ಈಗ ಅದೇ ದರ್ಬಾರ್ ಅನ್ನು ಬಳ್ಳಾರಿಯಲ್ಲಿ ಮತ್ತೆ ಮುಂದುವರಿಸಲು ಕಾನೂನಿನ ತೊಡಕಿದೆ. ಹಾಗಾಗಿ, ರಾಜಕೀಯದಲ್ಲಿ ತಮ್ಮ ಛಾಪು ಮುಂದುವರಿಸಲು ಅವರಿಗೊಂದು ಭದ್ರ ನೆಲೆಯ ಅವಶ್ಯಕತೆಯಿದೆ.

ಜೈಲಿಗೆ ಹೋಗುವ ಮುನ್ನ ಇದ್ದ ರಾಜಕೀಯ ಪರಿಸ್ಥಿತಿಯೇ ಬೇರೆ ಈಗಿನ ಪರಿಸ್ಥಿತಿಯೇ ಬೇರೆ ಅನ್ನುವುದನ್ನು ಅರಿತಿರುವ ಜನಾರ್ದನ ರೆಡ್ಡಿ, ಚುನಾವಣೆಗೆ ಒಂದು ವರ್ಷವಿರುವ ಈ ಹೊತ್ತಿನಲ್ಲಿ ತಮ್ಮ ನೆಲೆಯನ್ನು ಬಳ್ಳಾರಿಯಿಂದ ತೆಲುಗು ಪ್ರಾಬಲ್ಯವಿರುವ ರಾಜ್ಯದ ಗಡಿಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದತ್ತ ನೆಟ್ಟಿದ್ದಾರೆ. [5 ವರ್ಷಗಳ ನಂತರ ರೆಡ್ಡಿ ಬಂಧುಗಳೇ ಅಂದಾಗ]

ಕಳೆದ ಒಂದು ತಿಂಗಳಿನಿಂದ ಮೂರ್ನಾಲ್ಕು ಬಾರಿ ಕೋಲಾರಕ್ಕೆ ಭೇಟಿ ನೀಡಿರುವ ಜನಾರ್ದನ ರೆಡ್ಡಿ, ಇತ್ತೀಚೆಗೆ ಕೆ ಸಿ ರೆಡ್ಡಿ ಅವರ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೀವು ಆಶೀರ್ವಾದ ನೀಡಿದರೆ ಇಲ್ಲಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜನರ ಮುಂದೆ ವಾಗ್ದಾನವನ್ನೂ ರೆಡ್ಡಿ ಮಾಡಿದ್ದಾರೆ.

ಮೀಸಲು ಕ್ಷೇತ್ರವಾಗಿರುವ ಕೆಜಿಎಫ್, ಮುಂಬರುವ ಚುನಾವಣೆಯ ವೇಳೆಗೆ ಸಾಮಾನ್ಯ ಕ್ಷೇತ್ರವಾಗುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿ ಬರುತ್ತಿರುವುದರಿಂದ, ಜನಾರ್ದನ ರೆಡ್ಡಿ ಮೊದಲ ಆದ್ಯತೆ ಆ ಕ್ಷೇತ್ರದತ್ತ ಎನ್ನುವ ಮಾತು ಇಲ್ಲಿನ ಭಾಗದಲ್ಲಿ ಈಗ ಚಾಲ್ತಿಯಲ್ಲಿದೆ.

ಈ ಎರಡೂ ಕ್ಷೇತ್ರಗಳಲ್ಲಿ ರೆಡ್ಡಿಗಳ ರಾಜಕೀಯ ಪ್ರಾಬಲ್ಯವೇ ಹೆಚ್ಚಿರುವುದು ಒಂದೆಡೆಯಾದರೆ, ಇಡಿ (ಜಾರಿ ನಿರ್ದೇಶನಾಲಯ) ತನ್ನ ಆಸ್ತಿಹಣ ಮುಟ್ಟುಗೋಲು ಹಾಕಿಕೊಂಡಿದ್ದರೂ ಇನ್ನೂ ಆರ್ಥಿಕವಾಗಿ ಖದರ್ ಆಗಿರುವ ಜನಾರ್ದನ ರೆಡ್ಡಿಗೆ ಈ ಎರಡು ಜಿಲ್ಲೆಗಳಲ್ಲಿ ರಾಜಕೀಯ ನೆಲೆ ಕಾಣುವುದು ಕಷ್ಟದ ಕೆಲಸವೇನೂ ಅಲ್ಲ.

ಜನಾರ್ದನ ರೆಡ್ಡಿ ಮತ್ತು ಪತ್ನಿ ಕಣಕ್ಕೆ

ಜನಾರ್ದನ ರೆಡ್ಡಿ ಮತ್ತು ಪತ್ನಿ ಕಣಕ್ಕೆ

ಜನಾರ್ದನ ರೆಡ್ಡಿ ಈ ಎರಡು ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದರ ಜೊತೆಗೆ ತನ್ನ ಪತ್ನಿ ಅರುಣಾ ರೆಡ್ಡಿ, ಶ್ರೀರಾಮುಲು ಮತ್ತು ತಮ್ಮ ಪರಮಾಪ್ತ, ನಟ ಸಾಯಿಕುಮಾರ್ ಅವರಿಗೂ ಬಿಜೆಪಿ ಟಿಕೆಟ್ ಕೊಡಿಸುವ ಕೆಲಸಕ್ಕೆ ಮುಂದಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕೆಜಿಎಫ್ ಇಲ್ಲದಿದ್ದರೆ ಬಾಗೇಪಲ್ಲಿ

ಕೆಜಿಎಫ್ ಇಲ್ಲದಿದ್ದರೆ ಬಾಗೇಪಲ್ಲಿ

ಕೆಜಿಎಫ್ ಒಂದು ವೇಳೆ ಮೀಸಲು ಕ್ಷೇತ್ರವಾಗಿಯೇ ಮುಂದುವರಿದರೆ ಜನಾರ್ದನ ರೆಡ್ಡಿಯ ನಂತರದ ಆಯ್ಕೆ ಬಾಗೇಪಲ್ಲಿ. ಈ ಕ್ಷೇತ್ರದಲ್ಲಿ ನಾಯಕ ಸಮುದಾಯ ಜನಸಂಖ್ಯೆಯಲ್ಲಿ ಜಾಸ್ತಿಯಿದ್ದರೆ, ರೆಡ್ಡಿ ಸಮುದಾಯ ಆರ್ಥಿಕವಾಗಿ ಪ್ರಭಲವಾಗಿವೆ. ಹಾಗಾಗಿ ನಾಯಕ ಸಮುದಾಯದ ಶ್ರೀರಾಮುಲು ಮುಖಾಂತರ ಮತದಾರ ಮನಗೆಲ್ಲುವ ಕೆಲಸಕ್ಕೆ ರೆಡ್ಡಿ ಮುಂದಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕ್ಷೇತ್ರದಲ್ಲಿ ಇಬ್ಬರಿಂದ ಭಾರೀ ಪೈಪೋಟಿ ಸಾಧ್ಯತೆ

ಕ್ಷೇತ್ರದಲ್ಲಿ ಇಬ್ಬರಿಂದ ಭಾರೀ ಪೈಪೋಟಿ ಸಾಧ್ಯತೆ

ನವ ವಧೂವರರಿಗೆ ಹಸು ದಾನ ನೀಡುವ ಮೂಲಕವೇ ಕ್ಷೇತ್ರದಲ್ಲಿ ಹೆಸರಾಗಿರುವ ಕಾಂಗ್ರೆಸ್ಸಿನ ಸುಬ್ಬಾರೆಡ್ಡಿ ಮತ್ತು ಸಿಪಿಎಂನ ಶ್ರೀರಾಮರೆಡ್ಡಿ ಈ ಇಬ್ಬರೂ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದರೂ, ಜನಾರ್ದನ ರೆಡ್ಡಿ ಈ ಕ್ಷೇತ್ರವನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿರುವುದು ನಾಯಕ ಸಮುದಾಯದ ಮತಬ್ಯಾಂಕ್ ಎನ್ನಲಾಗುತ್ತಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ

ತನ್ನ ಪತ್ನಿಗೆ ಗೌರಿಬಿದನೂರು ಕ್ಷೇತ್ರದ ಜೊತೆಗೆ ಸಾಯಿಕುಮಾರ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಯಾವುದಾದರೂ ಸೇಫ್ ಕ್ಷೇತ್ರದ ಟಿಕೆಟ್ ಕೊಡಿಸುವುದು ಜನಾರ್ದನ ರೆಡ್ಡಿ ಮುಂದಿನ ಗುರಿ. ಇದಕ್ಕೆ ಮೊದಲು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತಮ್ಮ ರಾಜಕೀಯ ನೆಲೆಯನ್ನು ಉತ್ತಮಪಡಿಸಿಕೊಳ್ಳಲು ರೆಡ್ಡಿ ಮಾಸ್ಟರ್ ಪ್ಲಾನ್ ಸಿದ್ದ ಮಾಡಿಕೊಳ್ಳುತ್ತಿದ್ದಾರೆ.

ಶ್ರೀರಾಮುಲು ಬಳ್ಳಾರಿಯಲ್ಲೇ ಮುಂದುವರಿಕೆ?

ಶ್ರೀರಾಮುಲು ಬಳ್ಳಾರಿಯಲ್ಲೇ ಮುಂದುವರಿಕೆ?

ತನ್ನ ಆಪ್ತ ಶ್ರೀರಾಮುಲು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಗಲು ಒಪ್ಪದಿದ್ದರೆ, ಅವರ ಮೂಲಕ ಬಳ್ಳಾರಿ ರಾಜಕೀಯದ ಹಿಡಿತ ಸಾಧಿಸಿ ಅಲ್ಲಿಂದಲೇ ರಾಮುಲು ಅವರನ್ನು ವಿಧಾನಸೌಧಕ್ಕೆ ಕಳುಹಿಸುವ ಕಾರ್ಯತಂತ್ರವನ್ನೂ ಜನಾರ್ದನ ರೆಡ್ಡಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

ರಾಜಕೀಯ ಕರ್ಮಭೂಮಿಯಾಗಿ ಈ ಎರಡು ಜಿಲ್ಲೆಗಳು

ರಾಜಕೀಯ ಕರ್ಮಭೂಮಿಯಾಗಿ ಈ ಎರಡು ಜಿಲ್ಲೆಗಳು

ಮುಂದಿನ ದಿನಗಳಲ್ಲಿ ಈ ಎರಡು ಜಿಲ್ಲೆಗಳಲ್ಲಿ ಹಲವು ಸುತ್ತಿನ ಪ್ರವಾಸ ನಡೆಸಿ, ಸಾರ್ವಜನಿಕರ ಜೊತೆ ಬೆರೆತು, ಜನರ ನಾಡಿಮಿಡಿತ ಅರಿಯುವ ಕೆಲಸಕ್ಕೆ ಜನಾರ್ದನ ರೆಡ್ಡಿ ಮುಂದಾಗಲಿದ್ದಾರೆ. ಬೇರೆ ದಾರಿಯಿಲ್ಲದೇ ಬಳ್ಳಾರಿ ರಾಜಕೀಯದಿಂದ ದೂರ ಹೋಗುಲೇ ಬೇಕಾದ ಅನಿವಾರ್ಯತೆಯಲ್ಲಿರುವ ಜನಾರ್ದನ ರೆಡ್ಡಿ, ತೆಲುಗು ಪ್ರಾಭಲ್ಯದ ಈ ಎರಡು ಜಿಲ್ಲೆಗಳನ್ನು ತನ್ನ ಮುಂದಿನ ರಾಜಕೀಯ ಕರ್ಮಭೂಮಿಯಾಗಿ ಪರಿವರ್ತಿಸಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is former minister and BJP leader Janardhana Reddy getting ready to shift his political base to from Bellary to Kolar ahead of Karnataka Assembly Election in 2018?
Please Wait while comments are loading...