Karnataka Election: ಮುಂದಿನ ಸಿಎಂ ಬಿಎಲ್ ಸಂತೋಷ್? ಕಾಂಗ್ರೆಸ್ ಟ್ವೀಟ್ ಮಾಡಿ ಹೇಳಿದ್ದೇನು?
ಕರ್ನಾಟಕದಲ್ಲಿ ಚುನಾವಣಾ ರಂಗೇರಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ರಚನೆಯ ಕನಸು ಕಾಣುತ್ತಿವೆ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.
ಎರಡೂ ಪಕ್ಷಗಳು ಇನ್ನೂ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ, ಟ್ವಿಟರ್ ಸ್ಪೇಸ್‌ನಲ್ಲಿ ನಡೆದ ಚರ್ಚಾ ಕಾರ್ಯಕ್ರಮದ ಶೀರ್ಷಿಕೆಯನ್ನು ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಕುತೂಹಲಕಾರಿ ಸಂದೇಶ ನೀಡಿದೆ. ಮಾತ್ರವಲ್ಲದೆ ಬಿಎಲ್ ಸಂತೋಷ್ ವಿರುದ್ಧ ಟೀಕೆಯನ್ನು ಮಾಡಿದೆ.

"ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ವಿಥ್ ಬಿ.ಎಲ್ ಸಂತೋಷ್" ಬಿಜೆಪಿಯ ಟ್ವಿಟರ್ ಸ್ಪೇಸ್ ಚರ್ಚೆಯ ಈ ಹೆಸರು ರಹಸ್ಯವನ್ನು ಸೂಚಿಸುತ್ತಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಸಿಎಂ ಹುದ್ದೆಯ ಆಸೆಯಲ್ಲಿರುವ ಸಂತೋಷರಿಗೆ ಸ್ಪರ್ಧಿಸಲು 224ರಲ್ಲಿ ಒಂದು ಕ್ಷೇತ್ರವೂ ಸಿಗಲಿಲ್ಲವೇ? ಇದುವರೆಗೂ ಒಂದೂ ಬಹಿರಂಗ ಪ್ರಚಾರಕ್ಕೆ ಹೋಗಲಿಲ್ಲ ಏಕೆ? ಬಿಎಲ್ ಸಂತೋಷ್ ಅವರೇ, ತಾವು ಚಿರಂಜೀವಿಯೇ? ಎಂದು ಪ್ರಶ್ನೆ ಮಾಡಿದೆ. ಮತ್ತೊಂದು ಟ್ವೀಟ್‌ನಲ್ಲಿ ನಮಗೆ ಲಿಂಗಾಯತರ ಅಗತ್ಯವಿಲ್ಲ ಎಂದು ಬಿಎಲ್ ಸಂತೋಷ್ ಹೇಳಿದ್ದಾರೆ ಎನ್ನಲಾದ ಪತ್ರಿಕಾ ವರದಿಯ ಫೋಟೊವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಬಿಎಲ್ ಸಂತೋಷ್ ವಿರುದ್ಧ ಹರಿಹಾಯ್ದಿದೆ.
"ಲಿಂಗಾಯತರ ಅಗತ್ಯವಿಲ್ಲ ಎನ್ನುವುದನ್ನು ಬಿಜೆಪಿ ಕೃತಿಯಲ್ಲಿ ಕೂಡ ತೋರಿಸಿದೆ. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು ಎತ್ತಿ ಎಸೆದಿದ್ದು, ಲಿಂಗಾಯತರು ಬೇಡ ಎನ್ನುವ ಕಾರಣಕ್ಕಾಗಿಯೇ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದು, ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಹಾವೊಂದು ಸಂತೋಷದಿಂದ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿರುವುದು ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯಲಿದೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಹುದ್ದೆಯನ್ನು ಮಾರಾಟಕ್ಕಿಟ್ಟಿದೆ ಎಂದು ಆರೋಪ
ಬಿಜೆಪಿ ಹೈಕಮಾಂಡ್ ಸಿಎಂ ಹುದ್ದೆಯನ್ನು, ಮಂತ್ರಿಗಿರಿಯನ್ನು ರೇಟ್ ಕಾರ್ಡ್ ಹಾಕಿ ಮಾರಾಟ ಮಾಡಿಕೊಂಡರೆ ಇಲ್ಲಿನ ಬಿಜೆಪಿ ಸರ್ಕಾರಿ ಹುದ್ದೆಗಳಿಗೆ, ಕಾಮಗಾರಿಗಳಿಗೆ ರೇಟ್ ಕಾರ್ಡ್ ಹಾಕಿ ಮಾರಾಟಕ್ಕೆ ಇಟ್ಟಿದೆ. ಒಟ್ಟಿನಲ್ಲಿ ವಿಧಾನಸೌಧ ಎಂಬುದು ಬಿಜೆಪಿಯ ಕಾರಣದಿಂದ ಕೊಟ್ಟು ಕೊಳ್ಳುವ "ವ್ಯಾಪಾರಸೌಧ"ವಾಗಿ ಬದಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.












Click it and Unblock the Notifications