ಬೀಜ ನಿಗಮದ ನೇಮಕದಲ್ಲಿ ಅಕ್ರಮ: ಸಿಎಜಿ ತನಿಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು, ನ.5. ರಾಜ್ಯ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ನಡೆದಿರುವ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಗೆ ನಿರ್ದೇಶನ ನೀಡಿದೆ.
2007ರಿಂದ 2015ರ ನಡುವೆ ಗುತ್ತಿಗೆ ಆಧಾರದ ಮೇಲೆ ನಿಗಮದಲ್ಲಿ ಕೆಲಸ ಮಾಡಿರುವ ಸಿ.ಸುಜಾತಾ ಸಲ್ಲಿಸಿದ್ದ ಒಂದು ಅರ್ಜಿ ಹಾಗೂ ನಿಗಮ ಸಲ್ಲಿಸಿದ್ದ ಇನ್ನೊಂದು ಅರ್ಜಿ ಸೇರಿ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಒಪ್ಪಂದದ ಮೇಲಿನ ಉದ್ಯೋಗದ ವಿಧಾನವು ನಿಜವಾದ ಮತ್ತು ಪ್ರಾಮಾಣಿಕ ವ್ಯವಹಾರವೇ ಅಥವಾ ನಿಗಮವು ಅಳವಡಿಸಿಕೊಂಡ ಕಾಟಾಚಾರದ ವಿಧಾನವೇ ಎಂಬುದನ್ನು ಸಹ ಸಿಎಜಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನಿಗಮವು ಅಳವಡಿಸಿಕೊಂಡ ವಿಧಾನಗಳು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಕಲ್ಯಾಣ ರಾಜ್ಯದ ತತ್ವಗಳಿಗೆ ವಿರುದ್ಧವಾಗಿದೆಯೇ ಎಂದು ಕಂಡುಹಿಡಿಯಲು ಸಿಎಜಿಯನ್ನು ಸೂಚಿಸಿರುವ ನ್ಯಾಯಾಲಯವು 2023ರ ಅಕ್ಟೋಬರ್ 15 ರೊಳಗೆ ವರದಿ ನೀಡುವಂತೆ ಸಿಎಜಿ ನಿರ್ದೇಶನ ನೀಡಿದೆ.
ಆಘಾತಕಾರಿ: ಅವರು2007ರಿಂದ 2015ರ ನಡುವೆ ನಿರಂತರ ಆಧಾರದ ಮೇಲೆ ನಾಲ್ಕು ವಿಭಿನ್ನ ಗುತ್ತಿಗೆ ನೌಕರರ ಸೇವೆಯನ್ನು ಒದಗಿಸುವ ಸಂಸ್ಥೆಗಳ ಅಡಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ನೇಮಕಗೊಂಡಿರುವುದನ್ನು ಗಮನಿಸಿದ ನಂತರ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.
ಗುತ್ತಿಗೆ ನೌಕರರ ಸೇವೆಗೆ ಅಧಿಕಾರಿಗಳು ಯಾವ ರೀತಿಯಲ್ಲಿ ಟೆಂಡರ್ ಕರೆದಿದ್ದಾರೆ ಎಂಬುದು ತಿಳಿದಿಲ್ಲ. ಆ ಗುತ್ತಿಗೆದಾರರು/ಸೇವಾ ಪೂರೈಕೆದಾರರ ನೌಕರರು ಯಾರು ಎಂಬುದರ ಕುರಿತು ಪರಿಶೀಲನೆ ನಡೆದಿದೆಯೇ ಮತ್ತು ಬಿಡ್‌ನೊಂದಿಗೆ ಕಾರ್ಮಿಕರ ಪಟ್ಟಿಯನ್ನು ಒದಗಿಸಲಾಗಿದೆಯೇ, ಇತ್ಯಾದಿಗಳನ್ನು ಕೋರ್ಟ್ ಕೇಳಿತ್ತು. ಆರಂಭದಲ್ಲಿ ಆಕೆ ಕೆಲಸ ಮಾಡುತ್ತಿದ್ದ ಹುದ್ದೆಗೆ ಮರು ನೇಮಕ ಮಾಡುವಂತೆ ನಿಗಮಕ್ಕೆ ಸೂಚಿಸಿ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿತು. ಆದರೆ, ನಂತರ ಆಕೆಯನ್ನು ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಸರ್ಕಾರದ ಅಧೀನದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಾಗ ಮತ್ತು ಇ-ಆಡಳಿತ ಇಲಾಖೆಗೆ ನಿಯೋಜಿಸಿದಾಗ, ನ್ಯಾಯಾಲಯವು ಪರಿಹಾರವನ್ನು ನೀಡುವಂತೆ ಆದೇಶ ನೀಡಿತ್ತು.
ಪ್ರಕರಣದ ಹಿನ್ನೆಲೆ ಏನು?
ಗುತ್ತಿಗೆ ಆಧಾರದ ಮೇಲೆ ಅರ್ಜಿದಾರರನ್ನು ನೇಮಿಸಿಕೊಂಡ ನಂತರ, ನಿಗಮವು ಆಕೆಯನ್ನು ಕೃಷಿ ಇಲಾಖೆಯ ಸಚಿವಾಲಯಕ್ಕೆ ನಿಯೋಜಿಸಿತ್ತು, ಅವರು ವೇತನ ಹೆಚ್ಚಳ ಮತ್ತು ಸೇವೆಯನ್ನು ಕಾಯಂಗೊಳಿಸುವಂತೆ ಕೇಳಿದ ನಂತರ ೨೦೧೫ ರಲ್ಲಿ ಅವರ ಸೇವೆಯನ್ನು ಕೊನೆಗೊಳಿಸುವವರೆಗೆ ಅವರು ಕೆಲಸ ಮಾಡಿದ್ದರು.
ಅವರು ಕೈಗಾರಿಕಾ ನ್ಯಾಯಮಂಡಳಿಯ ಮುಂದೆ ವ್ಯಾಜ್ಯ ಹೂಡಿದ್ದರು. ನ್ಯಾಯಮಂಡಳಿ 2018ರಲ್ಲಿ ಅರ್ಜಿದಾರರಿಗೆ ಶೇ 9 ರ ಬಡ್ಡಿಯೊಂದಿಗೆ 5 ಲಕ್ಷ ಪರಿಹಾರವನ್ನು ನೀಡಿತು ಆದರೆ ಸೇವೆ ಕಾಯಂಗೊಳಿಸುವ ಅವರ ಮನವಿಯನ್ನು ತಿರಸ್ಕರಿಸಿತು. ಕಾಯಂಗೊಳಿಸುವಂತೆ ಕೋರಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದಾಗ, ನಿಗಮ ಕೂಡ ತನಗೆ ಪರಿಹಾರ ನೀಡಬೇಕೆಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿತ್ತು.












Click it and Unblock the Notifications