ದುಬೈನಲ್ಲಿ ಬಳ್ಳಾರಿಯ 32 ಮಂದಿ ಅತಂತ್ರ: ಮರಳಿ ಕರೆತರಲು, ಸಹಾಯವಾಣಿ ಆರಂಭಿಸಲು ಸಿದ್ದರಾಮಯ್ಯ ಸೂಚನೆ
ಬೆಂಗಳೂರು: ಇರಾನ್-ಇಸ್ರೇಲ್ ಮಧ್ಯ ಸಂಭವಿಸಿದ ಯುದ್ಧವು ಕೇವಲ ಆ ದೇಶಗಳಿಗೆ ಮಾತ್ರವೇ ತೊಂದರೆ ಆಗಿಲ್ಲ. ಅದರಲ್ಲಿ ಜಾಗತಿಕವಾಗಿ ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತಿದೆ. ಕನ್ನಡಿಗರು ಸೇರಿ ಭಾರತದ ಅನೇಕ ಪ್ರಜೆಗಳು ದುಬೈನಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗಾಗಿ ಆಗ್ರಹಗಳು ಜೋರಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ, ಧೈರ್ಯ ತುಂಬಿದ್ದೇನೆ. ಯುದ್ಧಪೀಡಿತ ಪ್ರದೇಶಗಳಲ್ಲಿನ ಕನ್ನಡಿಗರನ್ನು ಮರಳಿ ಕರೆತರಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ದುಬೈ ಸೇರಿದಂತೆ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸದ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದೇನೆ. ಅಲ್ಲಿರುವವರನ್ನು ತವರಿಗೆ ವಾಪಸ್ ಕರೆ ತರುವ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ತುಸು ಸಮಾಧಾನಕರ ವಿಚಾರ. ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ.
ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ದೆಹಲಿಯ ನಿವಾಸಿ ಆಯುಕ್ತರ ಜೊತೆ ಸಮಾಲೋಚನೆ ನಡೆಸಿ, ಅವರ ಸುರಕ್ಷತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
ದುಬೈನಲ್ಲಿ ಸಿಲುಕಿರುವ ಬಳ್ಳಾರಿ 32 ಮಂದಿ
ಬಳ್ಳಾರಿ ಮೂಲದ 32 ಮಂದಿ ದುಬೈನಲ್ಲಿ ಸಿಲುಕಿರುವ ಬಗ್ಗೆ ಮಾಜಿ ಸಚಿವರಾದ ನಾಗೇಂದ್ರ ಅವರು ನನಗೆ ಮಾಹಿತಿ ನೀಡಿದ್ದು, ಅವರ ಸುರಕ್ಷತೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿರುವ ಕಾರಣ ನಾಡಿಗೆ ಮರಳಲು ಸಾಧ್ಯವಾಗದೆ ಯುದ್ಧಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ. ನಾಳೆಯೇ ಸಹಾಯವಾಣಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಯುದ್ಧ ಪೀಡಿತ ದೇಶಗಳಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಪ್ರತಿಯೊಬ್ಬ ಕನ್ನಡಿಗನ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಅವರು ಇಲ್ಲಿರುವ ಅವರ ಕುಟುಂಬಗಳಿಗೆ ಅಭಯ ನೀಡಿದ್ದಾರೆ.
ಕನ್ನಡಿಗರನ್ನು ಕರೆತರಲು ಕೇಂದ್ರದೊಂದಿಗೆ ಕೈ ಜೋಡಿಸಬೇಕು
ಹಾವೇರಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು, ಅಮೆರಿಕ ಮತ್ತು ಇರಾನ್ ಯುದ್ದದ ಪರಿಣಾಮವಾಗಿ ದುಬೈ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ತಾಯಿನಾಡಿಗೆ ಮರಳಿ ತರಬೇಕು. ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ನಾವು ಕೈ ಜೋಡಿಸಬೇಕು. ದುಬೈನಲ್ಲಿರುವ ಕನ್ನಡಿಗರು ಹಾಗೂ ಅಲ್ಲಿನ ರಾಯಭಾರಿ ಕಚೇರಿ ಮುಖಾಂತರ ತಾತ್ಕಾಲಿಕವಾಗಿ ಊಟ, ವಸತಿ ವ್ಯವಸ್ಥೆ ಮಾಡಿ ಕೂಡಲೆ ವಾಪಸ್ ಕರೆ ತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಭಾರತ ಸರ್ಕಾರದ ಜೊತೆ ಕೈ ಜೋಡಿಸಿ ಕನ್ನಡಿಗರನ್ನು, ಭಾರತಿಯರನ್ನು ತಾಯಿ ನಾಡಿಗೆ ಕರೆ ತರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಯುದ್ಧದ ಪರಿಣಾಮ ಭಾರತದ ಮೇಲೂ ಆಗಲಿದೆ. ಇಲ್ಲಿಯ ಪೆಟ್ರೋಲಿಯಂ ವಲಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಆರ್ಥಿಕತೆಯ ಮೇಲೂ ದೊಡ್ಡ ಪ್ರಭಾವ ಬೀರಲಿದೆ. ಮತ್ತು ವಿಶ್ವಾದ್ಯಂತ ಇದರ ಪರಿಣಾಮ ಎಲ್ಲರೂ ಎದುರಿಸಬೇಕಾದ ಪರಿಸ್ಥಿತಿ ಇದೆ. ಇನ್ನಷ್ಟು ಜನರ ಸಾವುಗಳು ಆಗುವ ಮುಂಚೆ ಮಾತುಕತೆಯ ಮುಖಾಂತರ ಇದನ್ನು ಬಗೆ ಹರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ದೋಹಾ, ದುಬೈ, ಕುವೈತ್ ಸೇರಿದಂತೆ ಅನೇಕ ಕಡೆಗಳಲ್ಲಿ ನಮ್ಮ ಕನ್ನಡಿಗರು ಕೆಲಸಕ್ಕೆ ಹೋಗಿದ್ದಾರೆ. ಯುದ್ಧದ ವೇಳೆ ಅವರೀಗ ಅಲ್ಲಿ ಸಿಲುಕಿದ್ದಾರೆ. ಯುರೋಪಿನಿಂದ ಬರುವಾಗ ದುಬೈ, ದೋಹಾ ಮೂಲಕ ಬರುವುದು ವಾಡಿಕೆ ಇದೆ. ಅಲ್ಲೂ ಕೂಡ ಬಹಳಷ್ಟು ಜನರು ಸಿಲುಕಿಕೊಂಡಿದ್ದಾರೆ. ಈಗಾಗಲೇ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೆಲಸ ಮಾಡುತ್ತಿದೆ. ಹಿಂದೆ ಇದೇ ಥರ ಸಿರಿಯಾ, ಇರಾಕ್ ನಲ್ಲಿ ಯುದ್ದ ನಡೆದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲ ಭಾರತಿಯರನ್ನು ಸುರಕ್ಷಿತವಾಗಿ ಕರೆತಂದಿದ್ದರು ಎಂದು ಹೇಳಿದರು.












Click it and Unblock the Notifications