D. Roopa: ಐಪಿಎಸ್ ಅಧಿಕಾರಿ ಡಿ. ರೂಪಾ ವರ್ಗಾವಣೆ
ಬೆಂಗಳೂರು, ಮಾರ್ಚ್ 05: ಕರ್ನಾಟಕದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳು ಸುದ್ದಿಯಲ್ಲಿದ್ದಾರೆ. ಮಾರ್ಚ್ 3ರಂದು ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಈಗ ಡಿ. ರೂಪಾ ವರ್ಗಾವಣೆಗೊಳಿಸಿ ಆದೇಶವನ್ನು ಹೊರಡಿಸಿದೆ. ಡಿ. ರೂಪಾ ವಿರುದ್ಧ ವರ್ತಿಕಾ ಕಟಿಯಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು.
ರೂಪಾ ಡಿ. ಮೌದ್ಗಿಲ್ ವರ್ಗಾವಣೆಗೊಳಿಸಿ ಕರ್ನಾಟಕ ಸರ್ಕಾರ ಬುಧವಾರ ಆದೇಶವನ್ನು ಹೊರಡಿಸಿದೆ. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ ಎಂಡಿಯಾಗಿ ಡಿ. ರೂಪಾ ವರ್ಗಾವಣೆ ಮಾಡಲಾಗಿದೆ.

ಡಿ. ರೂಪಾ ಆಂತರಿಕ ಭದ್ರತಾ ದಳ (ಐಎಸ್‌ಡಿ) ಐಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ವರ್ತಿಕಾ ಕಟಿಯಾರ್ ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದರು. ಈ ಇಬ್ಬರು ಅಧಿಕಾರಿಗಳ ನಡುವಿನ ಜಟಾಪಟಿ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಡಿ. ರೂಪಾ ವರ್ಗಾವಣೆ: ಬುಧವಾರ ಡಿ. ರೂಪಾ ವರ್ಗಾವಣೆ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗಪ್ಪ ಎಸ್ ಪರೀತ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-4) ಆದೇಶ ಹೊರಡಿಸಿದ್ದಾರೆ.
ರೂಪಾ ಡಿ. (ಕೆಎನ್: 2000) ಐಜಿಪಿ ಆಂತರಿಕ ಭದ್ರತಾ ವಿಭಾಗ (ಎಸ್‌ಐಡಿ) ತತ್ ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ, ಬೆಂಗಳೂರು ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಅಲ್ಲದೇ ಈ ಆದೇಶದಲ್ಲಿ ಈ ಹುದ್ದೆಯಲ್ಲಿದ್ದ ಚಂದ್ರಶೇಖರ್ ಎನ್. ಐಎಎಸ್ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ ಹುದ್ದೆ ಸಿಐಡಿ ಐಜಿಪಿ ಹುದ್ದೆಯ ಸರಿಸಮಾನದ ಹುದ್ದೆ ಐಪಿಎಸ್ ವೇತನ ನಿಯಮ 2016ರ ನಿಯಮ-12ರಂತೆ ಇದು ಅನ್ವಯ ಎಂದು ತಿಳಿಸಿದೆ.
ಮಾರ್ಚ್ 3ರಂದು ಕರ್ನಾಟಕ ಸರ್ಕಾರ ವರ್ತಿಕಾ ಕಟಿಯಾರ್ (ಕೆಎನ್: 2010) ಆಂತರಿಕ ಭದ್ರತಾ ವಿಭಾಗ (ಎಸ್‌ಐಡಿ) ಡಿಐಜಿ, ಬೆಂಗಳೂರು ಅವರನ್ನು ತಕ್ಷಣದಿಂದಲೇ ವರ್ಗಾವಣೆ ಮಾಡಿ ಮುಂದಿನ ಆದೇಶದ ತನಕ ಉಪ ಮಹಾನಿರೀಕ್ಷಕ ಮತ್ತು ಹೆಚ್ಚುವರಿ ಕಮಾಂಡಂಟ್ ಜನರಲ್, ಗೃಹ ರಕ್ಷಕರು ಮತ್ತು ಹುದ್ದೆಯ ಹೆಚ್ಚುವರಿ ನಿರ್ದೇಶಕ, ನಾಗರಿಕ ರಕ್ಷಣಾ ವಿಭಾಗ, ಬೆಂಗಳೂರು ಖಾಲಿ ಹುದ್ದೆಗೆ ನೇಮಕ ಮಾಡಿತ್ತು.
ಸೆಪ್ಟೆಂಬರ್ 2023ರಲ್ಲಿ ಡಿ. ರೂಪಾ ಅವರನ್ನು ಕರ್ನಾಟಕ ಸರ್ಕಾರ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ನಿಯೋಜನೆ ಮಾಡಿತ್ತು. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಯ ಬಳಿಕ ಡಿ. ರೂಪಾ ಅವರನ್ನು ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ಹಲವು ತಿಂಗಳಿನಿಂದ ಅವರು ಹುದ್ದೆಯ ನಿರೀಕ್ಷೆಯಲ್ಲಿದ್ದರು ಬಳಿಕ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ನೇಮಕವಾಗಿದ್ದರು.












Click it and Unblock the Notifications