ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸುತ್ತಿರುವ ಪ್ರಭಾವಿ ಶಾಸಕರು ಯಾರು ತಿಳಿಯಿರಿ: ಇನ್‌ಸೈಡ್ ಸ್ಟೋರಿ
ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಬಹುಮತ ಬಂದಿದೆ. ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದರೂ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಇದೆಲ್ಲದರ ನಡುವೆ, ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ಶಾಸಕರು ಹೊಸ ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನವನ್ನು ಪಡೆದುಕೊಳ್ಳಲು ತೀವ್ರ ಲಾಬಿ ನಡೆಸಿದ್ದಾರೆ.
ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ, ಎಂ ಬಿ ಪಾಟೀಲ್, ಬಸವರಾಜ ರಾಯರಡ್ಡಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ ಮುಂತಾದವರು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಮುಖ್ಯಮಂತ್ರಿ ಯಾರೆಂದು ತಿಳಿಯಲು ಹಲವು ಶಾಸಕರು ಕಾಯುತ್ತಿದ್ದಾರೆ ಎಂದು ಕಿತ್ತೂರು ಕರ್ನಾಟಕದ ಶಾಸಕರೊಬ್ಬರು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ತಿಳಿಸಿದ್ದಾರೆ. 'ನಾವು ಸಿದ್ದರಾಮಯ್ಯ ಅಥವಾ ಶಿವಕುಮಾರ್ ಅವರನ್ನು ಸಂಪರ್ಕಿಸಬೇಕೇ ಅಥವಾ ಬೇರೆ ಯಾರನ್ನಾದರೂ ಸಂಪರ್ಕಿಸಬೇಕೆ ಎಂಬ ಗೊಂದಲದಲ್ಲಿದ್ದಾರೆ. ಸಿಎಂ ಸ್ಥಾನದ ಪ್ರಕ್ರಿಯೆ ಅಂತಿಮಗೊಂಡ ನಂತರ, ನಾವು ಎಲ್ಲಾ ರೀತಿಯಲ್ಲಿ ಅವರನ್ನು ಸಂಪರ್ಕಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
ಈ ಭಾಗದ 97 ಸ್ಥಾನಗಳಲ್ಲಿ ಕಾಂಗ್ರೆಸ್ ಕಿತ್ತೂರು ಕರ್ನಾಟಕದಲ್ಲಿ 37 ಮತ್ತು ಕಲ್ಯಾಣ ಕರ್ನಾಟಕದಲ್ಲಿ 26 ಸ್ಥಾನಗಳನ್ನು ಗೆದ್ದಿದೆ. ಈ 63 ಶಾಸಕರ ಪೈಕಿ 51 ಮಂದಿ ಎರಡನೇ ಅವಧಿಗೆ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಆಯ್ಕೆಯಾಗಿದ್ದಾರೆ.
ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಸರ್ಕಾರಗಳಲ್ಲಿ ತನ್ನ ಏಳು ಜಿಲ್ಲೆಗಳಿಂದ ಕೇವಲ ಮೂವರು ಸಚಿವರನ್ನು ಹೊಂದಿದ್ದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೆಚ್ಚು ಸಚಿವ ಸ್ಥಾನ ಸಿಗಬೇಕೆಂಬುದು ಶಾಸಕರ ಆಶಯವಾಗಿದೆ.

ಉತ್ತರ ಕರ್ನಾಟಕ ಭಾಗದಿಂದ 63 ಶಾಸಕರನ್ನು ಪಡೆದಿರುವ ನಮಗೆ ಸಚಿವ ಸಂಪುಟದಲ್ಲಿ ಶೇ.50ರಷ್ಟು ಪಾಲು ಸಿಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರು ಹೇಳಿದ್ದಾರೆ.
ಜಯ ಸಾಧಿಸಿದರುವ ಕೆಲವು ಅಭ್ಯರ್ಥಿಗಳು ತಮಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಬಹಿರಂಗವಾಗಿ ಹೇಳುತ್ತಿದ್ದರೆ, ಇನ್ನು ಕೆಲವರು ಮೌನವಹಿಸಿ ತಮ್ಮ ಹಿಂಬಾಲಕರ ಮೂಲಕ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.
ಬೆಳಗಾವಿಯ ನಾಲ್ಕು ಶಾಸಕರಿಂದ ಲಾಬಿ
ಬೆಳಗಾವಿಯ ನಾಲ್ವರು ಪ್ರಭಾವಿ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಸ್ಥಾನಕ್ಕೆ ಉತ್ಸುಕರಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮುಂಚೂಣಿಯಲ್ಲಿದ್ದಾರೆ. ಇವರೊಂದಿಗೆ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ ಮತ್ತು ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, 18 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಇದಲ್ಲದೆ, ಜಾರಕಿಹೊಳಿ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ, ಈ ಹಿಂದೆ ಹಲವಾರು ಸಚಿವ ಖಾತೆಗಳನ್ನು ನಿಭಾಯಿಸಿದ್ದಾರೆ.
ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಹೆಬ್ಬಾಳ್ಕರ್ ಅವರು ಈ ಬಾರಿ ಲಿಂಗಾಯತ ಪಂಚಮಸಾಲಿ ಮತಗಳನ್ನು ಕಾಂಗ್ರೆಸ್‌ಗೆ ಕ್ರೋಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಅಥಣಿ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸವದಿ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಕಾಂಗ್ರೆಸ್‌ಗೆ ಅವರು ಸೇರ್ಪಡೆಗೊಂಡರು. ಇದು ಹಲವು ಕ್ಷೇತ್ರಗಳಲ್ಲಿ ಪಕ್ಷಕ್ಕೆ ದೊಡ್ಡ ಉತ್ತೇಜನ ನೀಡಿತು.
ಸವದಿ ಅವರು ಯಾವುದೇ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಅವರ ಹೆಸರು ರಾಜ್ಯದ ರಾಜಕೀಯ ವಲಯಗಳಲ್ಲಿ ಸುತ್ತುತ್ತಿದೆ. ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವುದರ ಹೊರತಾಗಿ ಅನೇಕ ಸಚಿವ ಖಾತೆಗಳನ್ನು ನಿರ್ವಹಿಸಿದ ಅವರ ಅನುಭವವು ಅವರ ಭವಿಷ್ಯಕ್ಕೆ ಸಹಾಯ ಮಾಡಲಿದೆ.
ಏತನ್ಮಧ್ಯೆ, ಪ್ರಕಾಶ್ ಹುಕ್ಕೇರಿ ಸದ್ದಿಲ್ಲದೆ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ತಮಗೆ ಅಥವಾ ಅವರ ಮಗ ಗಣೇಶ್‌ಗೆ ಸಚಿವ ಸ್ಥಾನ ಸಿಗಬೇಕೆಂದು ಅವರು ಲಾಬಿ ನಡೆಸುತ್ತಿದ್ದಾರೆ.












Click it and Unblock the Notifications