ಬಂಧಿತ ವ್ಯಕ್ತಿಗೆ ತಿಳಿದ ಭಾಷೆಯಲ್ಲೇ ದಾಖಲೆ ಒದಗಿಸಿ; ಹೈಕೋರ್ಟ್
ಬೆಂಗಳೂರು, ಸೆಪ್ಟೆಂಬರ್ 07; ಗೂಂಡಾ ಕಾಯಿದೆಯಡಿ ಯಾವುದೇ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದಾಗ ಆತನಿಗೆ ಏಕೆ ಬಂಧಿಸಲಾಗಿದೆ? ಎಂಬ ಬಗ್ಗೆ ಆತನಿಗೆ ತಿಳಿದಿರುವ ಸ್ಥಳೀಯ ಭಾಷೆಯಲ್ಲೇ ಮಾಹಿತಿ ಒದಗಿಸುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಗೃಹ ಇಲಾಖೆಗೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ವಿಭಾಗೀಯಪೀಠ ಕಲಬುರಗಿ ಪೀಠದಲ್ಲಿ ಈ ಆದೇಶವನ್ನು ನೀಡಿದೆ. ಹಾಗಾಗಿ ಇನ್ನು ಮುಂದೆ ಪೊಲೀಸರು ಗೂಂಡಾ ಕಾಯ್ದೆಯಡಿ ಯಾರನ್ನಾದರೂ ಬಂಧಿಸಿದರೆ ಅವರಿಗೆ ತಿಳಿದ ಭಾಷೆಯಲ್ಲಿ ಏಕೆ ಬಂಧಿಸಲಾಗಿದೆ? ಎಂಬ ಮಾಹಿತಿಯನ್ನು ನೀಡಲೇಬೇಕಾಗುತ್ತದೆ.

ಬಂಧಿತ ವ್ಯಕ್ತಿಗೆ ಗೊತ್ತಿರುವ ಭಾಷೆಯಲ್ಲಿ ಮಾಹಿತಿ ನೀಡಿಲ್ಲವೆಂಬ ಕಾರಣಕ್ಕೆ ಕಲಬುರಗಿಯ ಹುಚ್ಚಪ್ಪ ಅಲಿಯಾಸ್ ಧನರಾಜ್ ಕಾಳೇಬಾಗ್ ಎಂಬ ವ್ಯಕ್ತಿಯ ವಿರುದ್ಧದ ಪ್ರಕರಣ ರದ್ದುಗೊಳಿಸಿ ತಕ್ಷಣ ಬಿಡುಗಡೆಗೆ ಆದೇಶಿಸಿದೆ.
21 ದಿನಗಳಲ್ಲಿ ಮಾಹಿತಿ: ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ ಅರ್ಜಿದಾರರು ಕೇವಲ 3ನೇ ತರಗತಿವರೆಗೆ ಓದಿದ್ದಾರೆ, ಅವರಿಗೆ ಇಂಗ್ಲೀಷ್ ತಿಳಿದಿಲ್ಲ. ಅಂತಹ ಸಂದರ್ಭದಲ್ಲಿ ಬಂಧಿಸಿದ ಅಧಿಕಾರಿಗಳು ಆತನಿಗೆ ತಿಳಿದಿರುವ ಭಾಷೆಯಲ್ಲೇ ದಾಖಲೆಗಳನ್ನು ಒದಗಿಸಬೇಕಾದ್ದು ಆದ್ಯ ಕರ್ತವ್ಯ. ಹಾಗೆ ದಾಖಲೆ ಒದಗಿಸಿದರೆ ಆ ವ್ಯಕ್ತಿ ಸರ್ಕಾರದ ಸಲಹಾ ಮಂಡಳಿಯ ಮುಂದೆ ಒಂದು ಅವಕಾಶವನ್ನು ಕೋರಬಹುದಾಗಿದೆ. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಗೂಂಡಾ ಕಾಯಿದೆ ಸೆಕ್ಷನ್ 3(3) ರ ಅನ್ವಯ 21 ದಿನಗಳಲ್ಲಿ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸಲು ಬಂಧಿತ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಆದೇಶಿಸಿದೆ.
ಸರಕಾರ ಅರ್ಜಿದಾರರ ಪತಿಯ ಬಂಧನಕ್ಕೆ ಹೊರಡಿಸಿರುವ ಆದೇಶ ನಿಯಮ ಬದ್ಧವಾಗಿಲ್ಲ. ಬಂಧಿತನಿಗೆ ದಾಖಲೆಯನ್ನು ಆತನಿಗೆ ತಿಳಿದಿರುವ ಭಾಷೆಯಲ್ಲಿ ಒದಗಿಸಿಲ್ಲ ಎಂದು ಹೇಳಿರುವ ನ್ಯಾಯಾಲಯ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ಹಲವು ಆದೇಶಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ.
ಅರ್ಜಿದಾರರ ವಿಚಾರದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೂಂಡಾ ಕಾಯಿದೆ ಅಡಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲು ಆದೇಶ ನೀಡಿತ್ತು. ಅದನ್ನು ಸರ್ಕಾರ ಖಚಿತಪಡಿಸಿ, 12 ತಿಂಗಳು ಬಂಧನದಲ್ಲಿಡಲು ಆದೇಶ ನೀಡಿತ್ತು.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಪತ್ನಿ ಶ್ರೀನಿಕಾ ಪತಿಯನ್ನು 12 ತಿಂಗಳು ಸೆರೆವಾಸದಲ್ಲಿಡಲು ಮಾಡಿರುವ ಆದೇಶ ಅಕ್ರಮ ಹಾಗೂ ಕಾನೂನು ಬಾಹಿರ. ಗೂಂಡಾ ಕಾಯಿದೆ ಸೆಕ್ಷನ್ 3(2)ರಡಿ ಮೊದಲಿಗೆ ಮೂರು ತಿಂಗಳು ಮಾತ್ರ ಬಂಧನ ಆದೇಶ ಹೊರಡಿಸಬಹುದು ಮತ್ತು ಆನಂತರ ಅಗತ್ಯಬಿದ್ದರೆ ಮೂರು ತಿಂಗಳು ವಿಸ್ತರಣೆ ಮಾಡಬಹುದು ಎಂದು ಆಕ್ಷೇಪಿಸಿದ್ದರು.
ಅಲ್ಲದೇ, ಗೂಂಡಾ ಕಾಯಿದೆಯ ನಿಯಮಗಳಂತೆ ವ್ಯಕ್ತಿಯನ್ನು ಬಂಧಿಸಿದ ಕೂಡಲೇ 21 ದಿನಗಳಲ್ಲಿ ಆತನಿಗೆ ಏಕೆ ಬಂಧಿಸಲಾಗಿದೆ? ಎಂಬ ವಿವರಗಳುಳ್ಳ ದಾಖಲೆಗಳನ್ನು ಆತನಿಗೆ ತಿಳಿದಿರುವ ಭಾಷೆಯಲ್ಲಿಯೇ ನೀಡಬೇಕಾಗಿದೆ. ಆದರೆ ಆ ರೀತಿ ದಾಖಲೆ ಒದಗಿಸದೆ ಅರ್ಜಿದಾರರ ಹಕ್ಕು ಮೊಟಕುಗೊಳಿಸಲಾಗಿದೆ ಎಂದು ಹೇಳಲಾಗಿತ್ತು.
ಆದರೆ ಸರ್ಕಾರ ಬಂಧನ ಆದೇಶವನ್ನು ಸಮರ್ಥಿಸಿಕೊಂಡು ಬಂಧಿತ ವ್ಯಕ್ತಿ ಇತರೆಯವರ ಜತೆ ಸೇರಿ ಕೊಲೆ, ಕೊಲೆ ಯತ್ನ, ದರೋಡೆ ಸೇರಿ ಹಲವು ಬಗೆಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಕಾರಣ ಗೂಂಡಾ ಕಾಯಿದೆಯಡಿ ಬಂಧನ ಆದೇಶ ಹೊರಡಿಸಲಾಗಿತ್ತು ಎಂದು ಹೇಳಿತ್ತು.












Click it and Unblock the Notifications