ಗ್ರಾಮ ಪಂಚಾಯತ್: ಎಲ್ಲಾ ಹಕ್ಕುಪತ್ರಕ್ಕೂ ಕಡ್ಡಾಯವಾಗಿ ಇ- ಸ್ವತ್ತು: ಬಿಗ್ ಅಪ್‌ಡೇಟ್
ಹಾಸನ, ನವೆಂಬರ್ 28: ಮುಖ್ಯಮಂತ್ರಿ ಕಾರ್ಯಕ್ರಮದ ಹೆಸರಿನಲ್ಲಿ ದುಂದು ವೆಚ್ಚ ಮಾಡುವಂತಿಲ್ಲ. ಸಮಯವನ್ನು ವ್ಯರ್ಥಗೊಳಿಸುವಂತಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬ ಫಲಾನುಭವಿಗಳಿಗೂ ಕಡ್ಡಾಯವಾಗಿ ಹಕ್ಕುಪತ್ರ, ಕ್ರಯಪತ್ರ, ಹಾಗೂ ಇ-ಸ್ವತ್ತು ಮಾಡಿ ಕೊಡ ತಕ್ಕದ್ದು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮ ಸಂಬಂಧ ಶುಕ್ರವಾರ ಹಾಸನದಲ್ಲಿ ನಡೆದ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈಗಿನಿಂದಲೇ ಹಕ್ಕುಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ಸಿದ್ದಪಡಿಸಿಕೊಳ್ಳಬೇಕು. ಕಳೆದ ಸರ್ಕಾರದ ಅವಧಿಯಲ್ಲಿ 94c ಹಾಗೂ 94d ಅಡಿಯಲ್ಲಿ 2.50 ಲಕ್ಷ ಹಕ್ಕುಪತ್ರ ನೀಡಿದ್ದರೂ ಸಹ 10600 ಮಾತ್ರ ಇ-ಸ್ವತ್ತು ಆಗಿದೆ.

ನಾಮಕಾವಸ್ತೆ ಹಕ್ಕುಪತ್ರ ನೀಡುವ ಪ್ರವೃತ್ತಿ ಇನ್ನಾದರೂ ನಿಲ್ಲಬೇಕು. ಗ್ರಾಮ ಪಂಚಾಯತ್ ಯಲ್ಲಿ ಎಲ್ಲಾ ಹಕ್ಕುಪತ್ರಕ್ಕೂ ಕಡ್ಡಾಯವಾಗಿ ಇ- ಸ್ವತ್ತು ಮಾಡಕೊಡಲೇಬೇಕು. ಫೌತಿಖಾತೆ ಆಂದೋಲನವನ್ನು ಯಾವ ಕಾರಣಕ್ಕೂ ನಿಲ್ಲಿಸುವಂತಿಲ್ಲ. ಮೃತರ ಹೆಸರಲ್ಲಿರುವ ಜನೀನನ್ನು ಈಗಿನ ವಾರಸುದಾರರ ಹೆಸರಿಗೆ ಬದಲಿಸಲೇಬೇಕು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮಟ್ಟದಲ್ಲೂ ನೋಡಲ್ ಆಫೀಸರ್ ಗಳನ್ನ ನೇಮಕ ಮಾಡಿ ಫಲಾನುಭವಿಗಳನ್ನು ಯಾವುದೇ ಸಮಸ್ಯೆ ಇಲ್ಲದಂತೆ ಕಾರ್ಯಕ್ರಮಕ್ಕೆ ಕರೆತರಬೇಕು.
ಫಲಾನುಭವಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದೂ ನಮ್ಮ ಕರ್ತವ್ಯ. ಬಸ್ ಗಳ ಜೊತೆ ಬೇರೆ ಬೇರೆ ವಾಹನಗಳನ್ನೂ ಏರ್ಪಾಟು ಮಾಡಬೇಕು. ಕಾರ್ಯಕ್ರಮವನ್ನು ಬೆಳಗ್ಗೆ 11 ಗಂಟೆಯ ಒಳಗೆ ಆರಂಭಿಸಿ ಮಧ್ಯಾಹ್ನ 2.30ರೊಳಗೆ ಮುಗಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡಬೇಕು. ವಿಎ ಹಾಗೂ ಪಿಡಿಓಗಳು ತಾವು ಕರೆತಂದ ಜನರನ್ನು ಜೊತೆಗೆ ಕಾರ್ಯಕ್ರಮದಲ್ಲಿ ಕುಳಿತು ಆ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕು. ಹೋಗುವಾಗ ಅವರ ಎಲ್ಲಾ ದಾಖಲೆಗಳೂ ಅವರ ಕೈಯಲ್ಲಿರುವಂತೆ ನೋಡಿಕೊಳ್ಳಬೇಕು.
ಮಾಧ್ಯಮಗಳು ಜನರ ಸಮಸ್ಯೆಗಳ ಬಗ್ಗೆಯೂ ಮಾತನಾಡಬೇಕು. ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಎಸಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಬೇಕಾದ ರಾಜ್ಯ ಬಿಜೆಪಿ ನಾಯಕರು ರೈತರ ಜೊತೆ ರಸ್ತೆಯಲ್ಲಿ ಮಲಗಿ ನಾಟಕ ಮಾಡುತ್ತಿದ್ದಾರೆ. ಈ ವಿಚಾರಗಳನ್ನ ಚರ್ಚಿಸಬೇಕಾದ ಮಾಧ್ಯಮಗಳು ಜನರ ಗಮನವನ್ನ ಅನಗತ್ಯ ವಿಚಾರಗಳ ಕಡೆ ಸೆಳೆಯುವುದು ಸರಿಯೇ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದ್ದರು.












Click it and Unblock the Notifications