Tungabhadra Dam: ಭರ್ಜರಿ ಮಳೆ; ತುಂಗಭದ್ರಾ ಡ್ಯಾಮ್ಗೆ ಒಳ ಹರಿವು ಆರಂಭ: ಇಲ್ಲಿದೆ ಮಾಹಿತಿ
ಕೊಪ್ಪಳ, ಜೂ.06: ಏಳು ತಿಂಗಳ ನಂತರ ತುಂಗಭದ್ರಾ ಡ್ಯಾಮ್ಗೆ ಒಳ ಹರಿವು ಆರಂಭವಾಗಿದ್ದು, ರೈತರಲ್ಲಿ ಸಂತಸ ಮೂಡಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ.
ತುಂಗಭದ್ರಾ ಡ್ಯಾಮ್ ತುಂಬಿದರೆ ಮೂರು ರಾಜ್ಯದ ಹತ್ತು ಜಿಲ್ಲೆಗಳ ಜನರ ಸಂತಸ ಹೆಚ್ಚಾಗುತ್ತದೆ. ಆದರೆ 2023 ರಲ್ಲಿ ರಾಜ್ಯದಲ್ಲಿ ಮಳೆಯಾಗದೇ ಭೀಕರ ಬರಗಾಲದಿಂದ ಡ್ಯಾಮ್ ಒಮ್ಮೆಯೂ ತುಂಬಿಲ್ಲ. ಹೀಗಾಗಿ ಬೇಸಿಗೆ ಸಮಯದಲ್ಲಿ ಎರಡನೇ ಬೆಳೆಗೆ ನೀರು ಸಿಗದೆ ರೈತರು ಪರದಾಡಿದ್ದರು. ಇದೀಗ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಕಳೆದ ಏಳು ತಿಂಗಳಿಂದ ಸ್ಥಗಿತವಾಗಿದ್ದ ಜಲಾಶಯದ ಒಳಹರಿವು ಇದೀಗ ಮತ್ತೆ ಆರಂಭವಾಗಿದೆ.

ತುಂಗಭದ್ರಾ ನದಿ 105 ಟಿಎಂಸಿ ನೀರು ಸಂಗ್ರಹ ಸಾಮರ್ಥವಿರುವ ಈ ಡ್ಯಾಮ್ನ ನೀರಿನ ಮೇಲೆಯೇ, ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನರು ನಿಂತಿದ್ದಾರೆ. ಇನ್ನೂ ನೆರೆಯ ತೆಲೆಂಗಾಣ, ಆಂಧ್ರ ಪ್ರದೇಶ ರಾಜ್ಯದ ಕೆಲ ಜಿಲ್ಲೆಯ ಜನರು ಇದೇ ನೀರಿನ ಮೇಲೆಯೇ ಅವಲಂಭಿತರಾಗಿದ್ದಾರೆ. ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಬಿಡಬೇಕು ಮತ್ತು ಕುಡಿಯುವ ನೀರಿಗೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ಜಲಾಶಯ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ವರ್ಷ ಮಳೆ ಇಲ್ಲದೆ ಜನತೆ ನರಳಾಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಇನ್ನೂ, ಕೆಲ ವರ್ಷಗಳಲ್ಲಿ ನೂರಾರು ಟಿಎಂಸಿ ನೀರು ಹರಿದು ವ್ಯರ್ಥವಾಗಿ ಹೋಗಿದೆ.
ಈ ವರ್ಷ ಮುಂಗಾರು ಆರಂಭಕ್ಕಿಂತ ಮೊದಲೇ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ರೈತರು ಸಂತಸಗೊಂಡಿದ್ದಾರೆ. ಇನ್ನು, ಕಳೆದ ನಾಲ್ಕು ದಿನಗಳಿಂದ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಆರಂಭವಾಗಿದೆ. ಪ್ರತಿನಿತ್ಯ ನಾಲ್ಕುನೂರರಿಂದ ಐನೂರು ಕ್ಯೂಸೆಕ್ ನೀರು ಡ್ಯಾಮ್ಗೆ ಹರಿದು ಬರ್ತಿದ್ದು, ಬುಧವಾರ(ಜೂನ್ 05) ಡ್ಯಾಮ್ಗೆ 495 ಕ್ಯೂಸೆಕ್ ಒಳಹರಿವು ಇದೆ. ಇನ್ನು 3.34 ಟಿಎಂಸಿಗೆ ಕುಸಿದಿದ್ದ ನೀರಿನ ಸಾಮರ್ಥ್ಯ, ಇದೀಗ ಒಳಹರಿವು ಆರಂಭವಾದಾಗಿನಿಂದ 3.49 ಟಿಎಂಸಿ ಗೆ ಹೆಚ್ಚಿದೆ.
ಶಿವಮೊಗ್ಗ ಸೇರಿದಂತೆ ತುಂಗಭದ್ರಾ ನದಿ ಉಗಮದ ಸ್ಥಳದಲ್ಲಿ ಹೆಚ್ಚಿನ ಮಳೆಯಾದರೆ ಡ್ಯಾಂಗೆ ನೀರು ಬರುತ್ತದೆ. ಆದ್ರೆ, ನದಿ ಪಾತ್ರದಲ್ಲಿಯೇ ಮಳೆ ಕಡಿಮೆಯಾದ್ರೆ ಜಲಾಶಯಕ್ಕೆ ನೀರು ಬರುವುದು ಕಷ್ಟವಾಗಿದೆ. ನದಿ ಪಾತ್ರದಲ್ಲಿ ಉತ್ತಮ ಮಳೆಯಾದ್ರೆ ಮಾತ್ರ ಡ್ಯಾಮ್ ತುಂಬಲಿದೆ. ಕಳೆದ ವರ್ಷ ಡ್ಯಾಮ್ ಒಮ್ಮೆ ಕೂಡ ತುಂಬಿರಲಿಲ್ಲ. ಇದೀಗ ಡ್ಯಾಮ್ಗೆ ನೀರು ಬರುತ್ತಿರುವುದು ಜನರ ಸಂತಸ ಹೆಚ್ಚಿಸುತ್ತಿದೆ. ಈ ಬಾರಿ ಮಳೆ ಹೆಚ್ಚಾಗಿಜಲಾಶಯಗಳು ತುಂಬಲಿ ಎಂದು ಜನತೆ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications