ಸಚಿವ ಪ್ರಿಯಾಂಕ್ ಖರ್ಗೆಗೆ ಹೆಚ್ಚಿನ ಭದ್ರತೆ: ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ: ಜಿ. ಪರಮೇಶ್ವರ್
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್ - Rss) ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಡೆಸುವುದಕ್ಕೆ ನಿರ್ಬಂಧ ಹೇರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದು. ಕರ್ನಾಟಕ ಹಾಗೂ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಕೊನೆಗೂ ಕರ್ನಾಟಕ ಸರ್ಕಾರವು ಈ ವಿಚಾರದಲ್ಲಿ ಗಂಭೀರವಾದ ಕ್ರಮ ತೆಗೆದುಕೊಂಡಿದೆ.
ಅಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆಯನ್ನೊಡ್ಡಿದ್ದ ವ್ಯಕ್ತಿಯನ್ನು ಇದೀಗ ಬಂಧಿಸಲಾಗಿದೆ. ತುಮಕೂರು- ರಾಜ್ಯದಲ್ಲಿ ಆರ್‌ಆರ್‌ಎಸ್ ಚಟುವಟಿಕೆ ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಬೆದರಿಕೆಯೊಡ್ಡುವ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಿಯಾಂಕ ಖರ್ಗೆಯವರಿಗೆ ಎಲ್ಲ ರೀತಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಇದರ ಹಿಂದೆ ಯಾರಾದರೂ ಇದ್ದಾರ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಸರ್ಕಾರಿ ಜಾಗಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಖಾಸಗಿಯವರು ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಕಡ್ಡಾಯ. ಈ ಹಿಂದೆ ಜಗದೀಶ್‌ಶೆಟ್ಟರ್‌ರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖಾಸಗಿಯವರು ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡುವುದನ್ನು ನಿಷೇಧ ಮಾಡಿ ಅಥವಾ ಅನುಮತಿ ಪಡೆಯುವಂತೆ ಆದೇಶ ಮಾಡಿದ್ದರು. ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಅವರು ಹೇಳಿದರು.
ಶಾಲಾ-ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಸೇರಿ ಬೇರೆ ಬೇರೆ ಖಾಸಗಿ ಸಂಸ್ಥೆಗಳಿಗೆ ಕಾರ್ಯಕ್ರಮ ಮಾಡಲು ಅವಕಾಶ ಕೊಡಬಾರದು ಎಂದು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಆರ್‌ಎಸ್‌ಎಸ್‌ನವರು ಪಥಸಂಚಲನ ನಡೆಸುವ ಸಂಬಂಧ ಪೊಲೀಸರ ಅನುಮತಿ ಪಡೆಯಬೇಕು. ಕಾನೂನು ಕ್ರಮಗಳನ್ನು ಪಾಲಿಸಿ ಪಥಸಂಚಲನ ನಡೆಸಬೇಕು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಹಣ ಮಾಡುವುದಕ್ಕೋಸ್ಕರ ಭೂಪರಿವರ್ತನೆ ಮಾಡಲಾಗುತ್ತಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು, ಈಗ ಕೇಂದ್ರ ಸಚಿವರಾಗಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಭೂ ಪರಿವರ್ತನೆ ವಿಚಾರದಲ್ಲಿ ಹಣ ಮಾಡಲಾಗುತ್ತಿದೆ ಎಂಬುದನ್ನು ಅವರು ನಿರ್ದಿಷ್ಟವಾಗಿ ಹೇಳಬೇಕು. ನಿರ್ದಿಷ್ಟವಾಗಿ ಹೇಳಿದರೆ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.












Click it and Unblock the Notifications