ಸರಕಾರಕ್ಕೆ ಹೊಸ ತಲೆಬೇನೆ: ಓಮಿಕ್ರಾನ್, ಕೆಂಪು ಪಟ್ಟಿಗೆ ಬೆಂಗಳೂರು?
ಬೆಂಗಳೂರು, ಜನವರಿ 03: ಕೊರೊನಾ ಮೂರನೇ ಅಲೆ ಕರ್ನಾಟಕಕ್ಕೆ ಪ್ರವೇಶಿಸಿರುವುದು ನಿಶ್ಚಿತ ಎನ್ನುವ ರೀತಿಯಲ್ಲಿ ಹೊಸ ಕೇಸುಗಳು ದಿನದಿಂದ ದಿನಕ್ಕೆ ಏರುತ್ತಿವೆ. ದೇಶದಲ್ಲಿ ನಿನ್ನೆಯಿಂದ ಇವತ್ತಿಗೆ ಒಂದೇ ದಿನ 33,750 ಕೇಸುಗಳು ದಾಖಲಾಗಿವೆ. ಕರ್ನಾಟಕದಲ್ಲಿ 1,187 ಕೇಸುಗಳು ವರದಿಯಾಗಿವೆ, ಇದರಲ್ಲಿ ರಾಜಧಾನಿಯ ಪಾಲು 923.
ಈ ಆತಂತಕಾರಿ ಅಂಕಿಅಂಶಗಳ ನಡುವೆ ಲಾಕ್ಡೌನ್ ಮತ್ತೆ ಹೇರಬೇಕೇ ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿವೆ. ಲಾಕ್ಡೌನ್ ಜಾರಿಗೆ ತರುವುದು ಅಥವಾ ಬಿಡುವುದು ಸಾರ್ವಜನಿಕರ ಕೈಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ, ಮತ್ತೆ ಲಾಕ್ಡೌನ್ ಗುಮ್ಮ ಕಾಡಲಾರಂಭಿಸಿದೆ.
ಇದುವರೆಗೆ ದೇಶದ 22 ರಾಜ್ಯಗಳಲ್ಲಿ ಓಮಿಕ್ರಾನ್ ಕೇಸುಗಳು ಪತ್ತೆಯಾಗಿವೆ. "ಕರ್ನಾಟಕದಲ್ಲಿ ಭಾನುವಾರ 10 ಹೊಸ ಓಮಿಕ್ರಾನ್ ಪ್ರಕರಣ ಪತ್ತೆಯಾಗಿವೆ.
ರಾಜ್ಯದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 76ಕ್ಕೆ ಏರಿದೆ. ಬೆಂಗಳೂರಿನಲ್ಲಿ 8 ಮತ್ತು ಧಾರವಾಡದಲ್ಲಿ 2 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ" ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ ಹೊಸ ಸೋಂಕಿತರ ಸಂಖ್ಯೆ ಶೇ. 241ರಷ್ಟು ಏರಿಕೆಯಾಗಿದೆ, ಇದರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ಹಾಗಾಗಿ, ಕೇಂದ್ರ ಆರೋಗ್ಯ ಇಲಾಖೆ ಬೆಂಗಳೂರು ನಗರವನ್ನು ಕೆಂಪು ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ. ಒಂದು ವೇಳೆ ಹಾಗಾದಲ್ಲಿ ಸರಕಾರಕ್ಕೆ ಭಾರೀ ತಲೆನೋವಾಗಲಿದೆ. ಕೆಂಪು ಪಟ್ಟಿಗೆ ಸೇರಿಸಿದರೆ ಏನೆಲ್ಲಾ ನಿರ್ಬಂಧ ಇರಲಿದೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ

ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ
ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಕೇಸುಗಳು ವರದಿಯಾಗುತ್ತಿರುವುದರಿಂದ ಸರಕಾರ ಸಮರೋಪಾದಿಯಲ್ಲಿ ನಿಯಂತ್ರಣ ಕ್ರಮದತ್ತ ಸಿದ್ದತೆ ಆರಂಭಿಸಿದೆ. ಇದೇ ಜನವರಿ 5 ಅಥವಾ 6ರಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈಗಿರುವ ನೈಟ್ ಕರ್ಫ್ಯೂ ಜನವರಿ ಏಳರ ಬೆಳಗ್ಗೆ ಐದರವರೆಗೆ ಇರಲಿದೆ. ಸದ್ಯದ ಮಾಹಿತಿಯ ಪ್ರಕಾರ, ನೈಟ್ ಕರ್ಫ್ಯೂ ಜೊತೆ, ವೀಕೆಂಡ್ ಕರ್ಫ್ಯೂ ಹೇರುವ ಸಾಧ್ಯತೆಯಿಲ್ಲದಿಲ್ಲ. ಪಶ್ಚಿಮ ಬಂಗಾಳದಲ್ಲಿ ಸೆಮಿ ಲಾಕ್ಡೌನ್ ಈಗಾಗಲೇ ಜಾರಿಯಾಗಿದೆ. ಮಹಾರಾಷ್ಟ್ರ, ಗುಜರಾತ್ ನಲ್ಲೂ ಬಿಗಿಕ್ರಮ ಜಾರಿಗೆ ತರಲಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ
ಈ ನಡುವೆ, ಬೆಂಗಳೂರು ನಗರದಲ್ಲಿ ಸೋಂಕು ಏರಿಕೆಯ ಪ್ರಮಾಣ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರುತ್ತಿರುವುದರಿಂದ ನಗರವನ್ನು ಕೆಂಪು ವಲಯದ ಪಟ್ಟಿಗೆ ಸೇರಿಸಲು ಕೇಂದ್ರ ಆರೋಗ್ಯ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಜಾರಿಯಾದಲ್ಲಿ ಸರಕಾರಕ್ಕೆ ಹೊಸ ತಲೆನೋವು ಎದುರಾಗಲಿದ್ದು, ಬಿಗಿಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಈ ವಿಚಾರದಲ್ಲಿ ಕೊನೆಯ ನಿರ್ಧಾರ ಮುಂದಿನ ಕೆಲವು ದಿನಗಳಲ್ಲಿ ವರದಿಯಾಗುವ ಸೋಂಕಿನ ಪ್ರಮಾಣದ ಮೇಲೆ ನಿರ್ಧಾರವಾಗಲಿದೆ.

ಬೆಂಗಳೂರು ನಗರ ರೆಡ್ ಝೋನ್ ನಲ್ಲಿ ಬಂದರೆ ಕೇಂದ್ರದ ಮಾರ್ಗಸೂಚಿ
ಒಂದು ವೇಳೆ ಬೆಂಗಳೂರು ನಗರ ರೆಡ್ ಝೋನ್ ನಲ್ಲಿ ಬಂದರೆ ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ. ಜನರ ಓಡಾಟಕ್ಕೆ ನಿಯಂತ್ರಣ ಹೇರಲೇಬೇಕಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಎದುರಾಗಲಿದೆ. ಪಾಸಿಟಿವಿಟಿ ದರ ಶೇ. ಐದರ ಮೇಲೆ ಹೋದರೆ ಮಾತ್ರ ಲಾಕ್ಡೌನ್ ವಿಧಿಸಬಹುದು ಎಂದು ತಜ್ಞರು ಶಿಫಾರಸನ್ನು ಮಾಡಿದ್ದಾರೆ. ರಾಜ್ಯದ ಸದ್ಯದ ಪಾಸಿಟಿವಿಟಿ ದರ ಶೇ.1.08. ಬೆಂಗಳೂರಿನಲ್ಲಿ ಸದ್ಯ 8,671 ಸಕ್ರಿಯ ಪ್ರಕರಣಗಳಿವೆ, ಇದರಲ್ಲಿ ಓಮ್ರಿಕಾನ್ ಕೇಸುಗಳು 76.

ಬೆಂಗಳೂರು ನಗರವನ್ನು ರೆಡ್ ಝೋನಿಗೆ ಸೇರಿಸಿದರೆ, ಜನಜೀವನ ಅಸ್ತವ್ಯಸ್ತ
ರೆಡ್ ಝೋನ್ ಪಟ್ಟಿಗೆ ಬೆಂಗಳೂರು ನಗರ ಸೇರಿದರೆ, ಹೋದ ವರ್ಷದ ಮೇ, ಜೂನ್ ತಿಂಗಳಲ್ಲಿ ಇದ್ದಂತೆ ನಿರ್ಬಂಧ ಜಾರಿಯಾಗುವ ಸಾಧ್ಯತೆಯಿದೆ. ಧಾರ್ಮಿಕ ಕೇಂದ್ರಗಳು, ಈಜುಕೊಳಗಳು, ಪಾರ್ಕ್, ಸಲೂನ್, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಚಲನಚಿತ್ರ ಮಂದಿರಗಳು, ಉದ್ಯಾನವನ ಮುಂತಾದವು ಬಂದ್ ಆಗಲಿವೆ. ಜೊತೆಗೆ, ಹೊಟೇಲ್ ಕೂಡಾ ಪಾರ್ಸೆಲ್ ವ್ಯವಸ್ಥೆಗೆ ಸೀಮಿತವಾಗಲಿದೆ. ಹಾಗಾಗಿ, ಕೇಂದ್ರ ಸರಕಾರ ಬೆಂಗಳೂರು ನಗರವನ್ನು ರೆಡ್ ಝೋನಿಗೆ ಸೇರಿಸಿದರೆ, ಜನಜೀವನ ಅಸ್ತವ್ಯಸ್ತಗೊಳ್ಳಲಿದೆ.












Click it and Unblock the Notifications