ಐಟಿ ದಾಳಿ : ಮೂರು ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಖುಲಾಸೆ
ಬೆಂಗಳೂರು, ಫೆಬ್ರವರಿ 28 : ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ಪ್ರಕರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಖುಲಾಸೆಯಾಗಿದ್ದಾರೆ. 3 ಪ್ರಕರಣದಲ್ಲಿ ಸಚಿವರನ್ನು ಆರೋಪ ಮುಕ್ತಗೊಳಿಸಲಾಗಿದೆ.
ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐಟಿ ದಾಳಿಯ ವೇಳೆ ಸಾಕ್ಷ್ಯನಾಶ, ತಪ್ಪು ಮಾಹಿತಿ ನೀಡಿರುವುದು ಮತ್ತು ಚೀಟಿ ಹರಿದ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶ ನೀಡಿದೆ.

ಆದರೆ, ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಹಣ ಪತ್ತೆಯಾದ ಪ್ರಕರಣ, ಹವಾಲ ಹಣ ಆರೋಪ ಪ್ರಕರಣದ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಆಪ್ತರಾದ ಸುನೀಲ್ ಶರ್ಮಾ ಮತ್ತು ಸಚಿನ್ ನಾರಾಯಣ್ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ನಿವಾಸ ಮತ್ತು ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ದಾಳಿ ನಡೆದಿತ್ತು. ಆಗ ಅವರು ಹಲವು ಪ್ರಮುಖ ಸಾಕ್ಷಿಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪವಿತ್ತು.
ಐಟಿ ಕಾಯ್ದೆ ಸೆಕ್ಷನ್ 277, 278, 193, 199 ಹಾಗೂ 120 (ಬಿ) ಅಡಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಡಿ.ಕೆ.ಶಿವಕುಮಾರ್ ಅವರು ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications