ಇನ್ಮುಂದೆ ಶನಿವಾರ-ಭಾನುವಾರವೂ ಸಿಗಲಿದೆ ಈ ಸರ್ಕಾರಿ ಸೇವೆ
ಸರ್ಕಾರಿ ಕಚೇರಿಗಳಲ್ಲಿ ವಾರದ ದಿನಗಳಲ್ಲಿ ಆದಷ್ಟು ಬೇಗ ಕೆಲಸ ಮಾಡಿಸಿಕೊಳ್ಳಬೇಕು, ಇಲ್ಲದಿದ್ರೆ ಆ ರಜೆ.. ಈ ರಜೆ ಅಂತ ವಿಳಂಬ ಮಾಡ್ತಾರೆ ಅನ್ನೋರಿಗೆ ರಾಜ್ಯ ಸರ್ಕಾರ ಒಂದು ಗುಡ್‌ನ್ಯೂಸ್ ನೀಡಿದೆ. ಈ ಪೈಕಿ ಕಂದಾಯ ಇಲಾಖೆಯು ಮಹತ್ವ ನಿರ್ಧಾರ ಕೈಗೊಂಡಿದ್ದು, ಅಕ್ಟೋಬರ್ 21ರ ನಂತರ ಎಲ್ಲ ನೋಂದಣಿ ಕಚೇರಿಗಳು ಶನಿವಾರ ಹಾಗೂ ಭಾನುವಾರದ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಜನರಿಗೆ ಸುಗಮ ಆಡಳಿತ ನೀಡುವ ಭಾಗವಾಗಿ ಈ ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ದುಡಿಯುವ ಮಧ್ಯಮ ವರ್ಗದ ಜನರು ವಾರದ ದಿನಗಳಲ್ಲಿ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಈ ಸಮಯದಲ್ಲಿ ಅವರು ಕೆಲಸ ಬಿಟ್ಟು, ನೋಂದಣಿ ಕಚೇರಿಗಳಿಗೆ ಬರವುದು ಕಷ್ಟ. ಇನ್ನು ನೋಂದಣಿಗಾಗಿ ಹೊರ ರಾಜ್ಯಗಳಿಂದ ಬರುವವರಿಗೂ ತೊಂದರೆಗಳಾಗುತ್ತಿವೆ. ಹೀಗಾಗಿ ವಾರಾಂತ್ಯದಲ್ಲಿ ಜನರಿಗೆ ಬಿಡುವು ಸಿಗುವುದರಿಂದ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ವಾರದಲ್ಲಿ ಶನಿವಾರ, ಭಾನುವಾರವೂ ನೋಂದಣಿ ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಅದರಂತೆ ಅಕ್ಟೋಬರ್ 21ರ ನಂತರ ಪ್ರತಿ ಜಿಲ್ಲೆಗಳಲ್ಲಿ ಒಂದು ರಿಜಿಸ್ಟರ್ ಆಫೀಸ್ ಶನಿವಾರ ಹಾಗೂ ಭಾನುವಾರವೂ ಕಾರ್ಯನಿರ್ವಹಿಸಲಿದ್ದು, ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದಾರೆ. ಇನ್ನು ಈ ಸೂಚಿಸಿದ ದಿನಗಳಲ್ಲಿ ಯಾವ ನೋಂದಣಿ ಕಚೇರಿಗಳು ತೆರೆದಿರಲಿವೆ ಎಂಬ ಮಾಹಿತಿಯನ್ನು ಮೊದಲೇ ನೀಡುತ್ತೇವೆ. ನೋಂದಣಿಗಾಗಿ ಅರ್ಜಿ ಹಾಕಿದಾಗ ಯಾವ ಕಚೇರಿ ವಾರಾಂತ್ಯದಲ್ಲಿ ಸೇವೆಗೆ ಲಭ್ಯವಿರುತ್ತದೆ ಎಂಬ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ನೀಡುತ್ತೇವೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ಮೊದಲಿನಿಂದಲೂ ವಾರಾಂತ್ಯದಲ್ಲಿ ನೋಂದಣಿ ಕಚೇರಿಗಳನ್ನು ತೆರಯಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು. ಕಳೆದ ಬಜೆಟ್ ವೇಳೆಯೂ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನಮ್ಮ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಈ ಸೇವೆಗೆ ಅಗತ್ಯವಾದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಸಂಪುಟದಿಂದಲೂ ಒಪ್ಪಿಗೆ ಪಡೆದಿದ್ದೇವೆ ಎಂದಿದ್ದಾರೆ.
ಅಕ್ರಮ ನೋಂದಣಿ ತಡೆಗೆ ಹೊಸ ರೂಲ್ಸ್: ಕೆಲವರು ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೇವಲ ಪೇಪರ್‌ನಲ್ಲಿ ಖಾತೆ ಪ್ರಿಂಟ್ ಮಾಡಿಸಿ, ನೋಂದಣಿ ಮಾಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿ ಅಥವಾ ಬಿಬಿಎಂಪಿ ನಗರಸಭೆ ಖಾತೆ ಮಾಡಿಸದೇ ಇದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದಕ್ಕಾಗಿ ಕಂದಾಯ ಇಲಾಖೆಯು ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯಲು ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಿಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಿದೆ ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

ನೋಂದಣಿ ಮಾಡಿಸುವಾಗ ಇತರೆ ಎಂಬ ಒಂದು ಕೆಟಗರಿ ಕೂಡ ಇದೆ. ಆಶ್ರಯ ನಿವೇಶನಗಳನ್ನು ನೋಂದಾಯಿಸುವಾಗ ಸಂದರ್ಭದಲ್ಲಿ ಮಾತ್ರ ಈ ಕೆಟಗರಿ ಬಳಸಲಾಗುತ್ತದೆ. ಇದರಲ್ಲಿ ಮಾರುಕಟ್ಟೆ ಬೆಲೆ ಕಡಿಮೆ ಇರುತ್ತದೆ, ನೋಂದಣಿ ಶುಲ್ಕವೂ ಕಡಿಮೆ. ಹೀಗಾಗಿ ಹಲವರು ತಮ್ಮದು ಖಾಸಗಿ ಸ್ವತ್ತಾಗಿದ್ದರೂ ಇತರೆ ಎಂದು ತೋರಿಸಿ ದೊಡ್ಡ ಪ್ರಮಾಣದಲ್ಲಿ ಕಟ್ಟಬೇಕಿರುವ ವೆಚ್ಚ ಪಾವತಿಸದೆ ಮೋಸ ಮಾಡುತ್ತಿದ್ದಾರೆ. ಇಂತಹ ನಕಲಿ ಮಾರ್ಗದಲ್ಲಿ ಎಷ್ಟು ನೋಂದಣಿಯಾಗಿವೆ ಹಾಗೂ ತೆರಿಗೆ ವಂಚನೆ ಪ್ರಕರಣಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಬರೋಬ್ಬರಿ 250 ಕೋಟಿ ನಷ್ಟವಾಗಿದೆ ಎಂದು ವಿವರಿಸಿದ್ದಾರೆ.
ಖಾತೆ ನೋಂದಣಿ ಮಾಡುವಾಗ ಸ್ಕೆಚ್ ಕಡ್ಡಾಯವಾಗಿ ಬೇಕು. ಆದರೆ ಹಲವೆಡೆ ಸ್ಕೆಚ್ ಇಲ್ಲದಿದ್ದರೂ ನೋಂದಣಿಯಾಗಿದೆ. ಈ ಜನವರಿಯಿಂದ ಇಲ್ಲಿವರೆಗೆ 200ಕ್ಕೂ ಹೆಚ್ಚು ನೋಂದಣಿ ಸ್ಕೆಚ್ ಇಲ್ಲದೆಯೇ ಮಾಡಿರುವುದು ಗೊತ್ತಾಗಿದೆ. ನಿವೇಶನ, ಜಮೀನನ್ನು ಟಿಡಿಆರ್ ಎಂದು ನೋಂದಣಿ ಮಾಡಿಸಿದ್ದಾರೆ. ಇದು ಅಕ್ರಮ ಮಾತ್ರವಲ್ಲದೆ, ತೆರಿಗೆ ವಂಚನೆಯೂ ಹೌದು ಎಂದು ದೂರಿದ್ದಾರೆ.












Click it and Unblock the Notifications