ಅಂಗಾಂಗ ದಾನ: ಕರ್ನಾಟಕದಲ್ಲಿ 1 ವರ್ಷದಲ್ಲಿ ನೂರಾರು ಮಂದಿಗೆ ಮರುಜೀವ, ಮಾಹಿತಿ ನೀಡಿದ ಆರೋಗ್ಯ ಸಚಿವರು
ಬೆಂಗಳೂರು ಜನವರಿ 17: ಅಂಗಾಂಗ ದಾನ ಶ್ರೇಷ್ಠ ದಾನವೆಂದೇ ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಅಂಗಾಂಗ ದಾನ ಮಾಡುವರರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಒಂದೇ ವರ್ಷದಲ್ಲಿ 389 ಜನರಿಗೆ ಮರು ಜೀವ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು ಮೆಡಿಕಲ್ ಸರ್ವಿಸಸ್ ಟ್ರಸ್ಟ್ (BMST) ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ 'ಅನ್‌ಸಂಗ್ ಹೀರೋಸ್ʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ರಾಜ್ಯದಲ್ಲಿ ಒಟ್ಟು 19 ಅಂಗಾಂಗ ದಾನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೂ ಮೊದಲು ರಾಜ್ಯದಲ್ಲಿ ಒಂದೇ ಅಂಗಾಗ ದಾನ ಕೇಂದ್ರ ಇತ್ತು ಎಂದರು.
ಕರ್ನಾಟಕದಲ್ಲಿ ಇತರರ ಜೀವ ಉಳಿಸಬಹುದಾದ ಅಂಗಾಂಗ ದಾನದ ಪ್ರಮಾಣ ಹೆಚ್ಚುತ್ತಿರುವುದು ಸಂತಸದ ಸಂಗತಿ. ಕಳೆದ ವರ್ಷ ನಡೆದ ಅಂಗಾಂಗ ದಾನಗಳಿಂದ ಸಂಕಷ್ಟದಲ್ಲಿ 389 ಮಂದಿಗೆ ಮರು ಜೀವ ಸಿಕ್ಕಿದೆ.ಈ ನಿಟ್ಟಿನಲ್ಲಿ ಜನರು ಇನ್ನೂ ಹೆಚ್ಚು ಜಾಗೃತರಾಗಬೇಕು ಎಂದು ಅವರು ಅಂಗಾಂಗ ದಾನದ ಮಹತ್ವ ತಿಳಿಸಿದರು.

ಅಂಗಾಂಗ ದಾನದ ನಿರ್ವಹಣೆಗೆ ರಾಜ್ಯದಲ್ಲಿ ಸೊಟ್ಟೊ ಎಂಬ ಸಂಸ್ಥೆ ಇದೆ. ಕಳೆದ ಮೂರು ವರ್ಷಗಳಲ್ಲಿ ಅಂಗಾಂಗ ದಾನಕ್ಕೆ ಹೆಚ್ಚು ಒತ್ತು ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಹೀಗಾಗಿ ದಾನಿಗಳ ಸಂಖ್ಯೆ ಏರಿಕೆ ಆಗಿದೆ. ಅಂಗಾಂಗ ದಾನ ಮಾಡುವವರು ಸಾವಿನ ನಂತರವೂ ಮತ್ತೊಬ್ಬರ ಬದುಕಿಗೆ ದಾರಿ ದೀಪವಾಗುತ್ತದೆ. ಇಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ. ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಈ ಬಗ್ಗೆ ಕೂಡ ಜಾಗೃತಿ ಕಾರ್ಯಕ್ರಮಗಳಿಂದಾಗಿ ಅಂಗಾಂಗ ದಾನ ನಡೆದಿದೆ. ಹಾಗೆಯೇ ದಾನಕ್ಕೆ ಹೆಸರು ನೋಂದಣಿ ಪ್ರಕ್ರಿಯೆ ಕೂಡ ನಡೆದಿದೆ ಎಂದು ವಿವರಿಸಿದರು.
ಒಬ್ಬ ವ್ಯಕ್ತಿ ಅಂಗಾಂಗ ದಾನ: 8 ಮಂದಿಗೆ ಉಪಯೋಗ
ರಕ್ತದಾನ ಮಹಾದಾನ ಎಂದು ಹೇಳಲಾಗುತ್ತದೆ. ಹಾಗೆಯೇ, ಅಂಗಾಂಗ ದಾನ ಸರ್ವಶ್ರೇಷ್ಠ ದಾನವಾಗಿದೆ. ಒಬ್ಬ ವ್ಯಕ್ತಿ ಮರಣದ ಬಳಿಕ 8 ಜನರಿಗೆ ಅಂಗಾಂಗಗಳನ್ನು ದಾನ ಮಾಡಬಹುದು. ವ್ಯಕ್ತಿ ಮೃತಪಟ್ಟಾಗ ಕುಟುಂಬದವರು ಬಹಳ ದುಃಖದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ವೈದ್ಯರು ಕುಟುಂಬದವರ ಮನ ಒಲಿಸಿ ಅಂಗಾಂಗ ದಾನ ಮಾಡಿಸುತ್ತಾರೆ. ಹಾಗೆಯೇ ಕಡಿಮೆ ಸಮಯದೊಳಗೆ ಮಾಡುವ ಕಸಿಗಾಗಿ ಸಂಚಾರಿ ಪೊಲೀಸರು ಗ್ರೀನ್ ಕಾರಿಡಾರ್ ನಿರ್ಮಿಸುತ್ತಾರೆ. ಕೆಲ ಸಂದರ್ಭದಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ, ರಾಜ್ಯದಲ್ಲಿ ಒಂದೇ ಒಂದು ಅಂಗಾಂಗ ಪಡೆಯುವ ಕೇಂದ್ರ ಇತ್ತು. ಬಳಿಕ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಸೇರಿದಂತೆ ಹಲವೆಡೆ ಒಟ್ಟು 19 ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇದು ಬಿಜೆಪಿ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications