'ಇದು ಕಾಂಗ್ರೆಸ್ ಸರ್ಕಾರದ 8 ನೇ ಗ್ಯಾರಂಟಿ'
ಬೆಂಗಳೂರು, ಮೇ 10: ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ" ಹೆಸರಿನಲ್ಲಿ ತುಕ್ಕು ಹಿಡಿದ ಹಳೆಯ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ನವೀಕರಿಸಿದಂತೆ ತೋರಿಸಿ, "ಸಂಚಾರಿ ಕಾವೇರಿ" ಎಂಬ ಯೋಜನೆಯನ್ನು ವಿಧಾನಸೌಧದಿಂದ ಆರಂಭಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಖಂಡಿಸುತ್ತೆವೆ. ಇದು ಕಾಂಗ್ರೆಸ್ ಸರ್ಕಾರದ 8 ನೇ ಗ್ಯಾರಂಟಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಈ ಕುರಿತು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, "ಜನಪರ ಯೋಜನೆ" ಎಂಬ ಮಂತ್ರ ಜಪಿಸುತ್ತಲೇ, ಸರ್ಕಾರ ನಿಜವಾದ ಜನಪರತೆಯಿಂದ ದೂರವಾಗಿ, ಟ್ಯಾಂಕರ್‌ಗಳ ಮೇಲ್ಮೈ ಬಣ್ಣವನ್ನು ಬದಲಾಯಿಸುವ ಮೂಲಕ ಜನರ ಆರೋಗ್ಯಕ್ಕೆ ಬಣ್ಣದ ಲೇಪನವನ್ನು ಹಾಕುತ್ತಿದೆ. ಈ ಯೋಜನೆಯ ರೂವಾರಿಯಾದ ಮಂತ್ರಿಗಳ ಚಿಂತನೆಗೂ ಈಗಾಗಲೇ ತುಕ್ಕು ಹಿಡಿದಿದೆ ಎಂಬುದು ಸ್ಪಷ್ಟ ಎಂದು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಯೋಜನೆಯನ್ನು "ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ" ಯೋಜನೆ ಎಂದು ಹೇಳುವ ಬದಲಿಗೆ "ತುಕ್ಕು ಹಿಡಿದ ಟ್ಯಾಂಕರ್ ಗಳಲ್ಲಿ, ಮನೆ ಬಾಗಿಲಿಗೆ ಅಶುದ್ಧ ನೀರನ್ನು ತಲುಪಿಸುವ" ಯೋಜನೆ ಎಂದು ಹೇಳುವುದು ಸೂಕ್ತ. ಅದಲ್ಲದೆ ಟ್ಯಾಂಕರ್ ಗಳ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಊಹಿಸಲು ಅಸಾಧ್ಯ ಮತ್ತು ಶುದ್ಧವಾದ ಟ್ಯಾಂಕರ್ ಗಳಲ್ಲಿ ಶುದ್ಧವಾದ ನೀರನ್ನು ಕಳುಹಿಸಬೇಕಾದ ಇವರು ಅಶುದ್ಧವಾದ ಟ್ಯಾಂಕರ್ ಗಳಲ್ಲು ಇವರ ಜಾಹಿರಾತನ್ನು ಶುದ್ಧವಾಗಿ ಹಾಕಿಕೊಂಡಿರುವುದು ಹಾಸ್ಯಾಸ್ಪದ.
ತುಕ್ಕು ಹಿಡಿದ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ಅವುಗಳಲ್ಲಿ ಬಿ.ಐ.ಎಸ್ ಪ್ರಮಾಣಿತ ನೀರನ್ನು ಪೂರೈಸಲಾಗುತ್ತಿದೆ ಎಂಬ ನಾಟಕವನ್ನು ಜನರು ನಂಬಲಾರರು. ವಿಧಾನಸೌಧದ ಆವರಣದಲ್ಲೇ ಇಂತಹ ತುಕ್ಕು ಹಿಡಿದ ಟ್ಯಾಂಕರ್‌ಗಳನ್ನು ಪ್ರದರ್ಶಿಸಿದ್ದು, ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ನಿಲುವನ್ನು ಸ್ಪಷ್ಟಪಡಿಸುತ್ತದೆ. ಈ ಯೋಜನೆಯ ಟ್ಯಾಂಕರ್‌ಗಳಿಗೆ ಮಾತ್ರ ತುಕ್ಕು ಹಿಡಿದಿಲ್ಲ, ಯೋಜನೆ ರೂಪಿಸುವ ಕಲ್ಪನೆಗೂ, ಜವಾಬ್ದಾರಿ ನಿಯೋಜನೆಗೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾರ್ವಜನಿಕ ಸೇವೆಯ ಮಾನವೀಯ ದೃಷ್ಟಿಕೋನಕ್ಕೂ ತುಕ್ಕು ಹಿಡಿದಿದೆ. ಸ್ವಚ್ಛತೆ, ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ ಸರ್ಕಾರ, ಭ್ರಷ್ಟಾಚಾರದಲ್ಲಿ ಮುಳುಗಿ ಸಾರ್ವಜನಿಕರ ಜೀವನಕ್ಕೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications