7th Pay Commission; ವೇತನ ಆಯೋಗದ ವರದಿ ಜಾರಿ ತಾತ್ಕಾಲಿಕ ಮುಂದೂಡಿಕೆ?
ಬೆಂಗಳೂರು, ಜುಲೈ 07: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಅನುಷ್ಠಾನದ ವಿಚಾರದಲ್ಲಿ ಕರ್ನಾಟಕ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಮಾರ್ಚ್‌ನಲ್ಲಿ ವರದಿಯನ್ನು ಸರ್ಕಾರ ಸ್ವೀಕಾರ ಮಾಡಿದೆ. ಆದರೆ ಜುಲೈ ತಿಂಗಳು ಬಂದರೂ ವರದಿ ಜಾರಿಯಾಗಿಲ್ಲ. ಇದರಿಂದಾಗಿ ಸರ್ಕಾರಿ ನೌಕರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2024ರ ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಸ್ವೀಕಾರ ಮಾಡಿದರು. ಆದರೆ ಲೋಕಸಭೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿತು. ವರದಿ ಜಾರಿ ವಿಳಂಬವಾಯಿತು.

ಈಗ ಚುನಾವಣೆ ಮುಗಿದಿದೆ, ನೀತಿ ಸಂಹಿತೆಗಳ ಅಡ್ಡಿ ವರದಿಯ ಶಿಫಾರಸು ಅನುಷ್ಠಾನಕ್ಕೆ ಇಲ್ಲ. ಆದರೆ ಮೂರು ಸಚಿವ ಸಂಪುಟ ಸಭೆಗಳು ನಡೆದರೂ ಸಹ ಸರ್ಕಾರ ಆಯೋಗದ ಶಿಫಾರಸು ಜಾರಿ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸರ್ಕಾರಿ ನೌಕರರು ಹೋರಾಟ ನಡೆಸಬೇಕೆ? ಎಂದು ಚಿಂತನೆ ನಡೆಸುತ್ತಿದ್ದಾರೆ.
ತಾತ್ಕಾಲಿಕವಾಗಿ ಮುಂದೂಡಿಕೆ?; ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಸರ್ಕಾರಿ ನೌಕರರ ಮೂಲ ವೇತನ ಏರಿಕೆಗೆ ಶಿಫಾರಸು ಮಾಡಿದೆ. ಅಲ್ಲದೇ ಫಿಟ್‌ಮೆಂಟ್ ನಿಗದಿಗೊಳಿಸಿ 2024ರ ಏಪ್ರಿಲ್‌ನಿಂದ ಜಾರಿಗೆ ತರುವಂತೆಯೂ ವರದಿಯಲ್ಲಿ ಉಲ್ಲೇಖ ಮಾಡಿದೆ. ಆದರೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆಯ ಲೆಕ್ಕಾಚಾರ ಸರ್ಕಾರವನ್ನು ಕಂಗೆಡಿಸಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 7ನೇ ರಾಜ್ಯ ವೇತನ ಆಯೋಗದ 244 ಪುಟದ ವರದಿಯನ್ನು ಹಣಕಾಸು ಇಲಾಖೆಗೆ ಸಲ್ಲಿಸಿದ್ದಾರೆ. ವರದಿಯನ್ನು ಹೇಗೆ ಜಾರಿ ಮಾಡಬೇಕು? ಎಂದು ಇಲಾಖೆ ರೂಪುರೇಷೆ ನೀಡಲಿದೆ. ಸದ್ಯದ ಮಾಹಿತಿ ಪ್ರಕಾರ ಜುಲೈ ತಿಂಗಳಿನಲ್ಲಿ ಸರ್ಕಾರ ವರದಿಯ ಶಿಫಾರಸು ಅನುಷ್ಠಾನದ ಕುರಿತು ತೀರ್ಮಾನ ಮಾಡುವುದಿಲ್ಲ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆಯೇ ಸರ್ಕಾರ 2024-25ನೇ ಸಾಲಿನ ಬಜೆಟ್‌ನ ಘೋಷಣೆಗಳನ್ನು ಜಾರಿಗೊಳಿಸಲು ಉತ್ಸಾಹ ತೋರಿಸುತ್ತಿದೆ. ಮತ್ತೊಂದು ಕಡೆ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪ್ರಯತ್ನ ನಡೆಸಿದೆ. ಆದ್ದರಿಂದ ವೇತನ ಆಯೋಗದ ವರಿಯ ಅನುಷ್ಠಾನದ ವಿಚಾರದಲ್ಲಿ ಜುಲೈ ತಿಂಗಳಿನಲ್ಲಿ ತೀರ್ಮಾನವಿಲ್ಲ. ಹಾಗಾಗಿ ವರದಿ ಜಾರಿ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.
ಆಯೋಗ ಮಾಡಿರುವ ಶಿಫಾರಸಿನ ಅನ್ವಯ ವರದಿ ಜಾರಿಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 18 ಸಾವಿರ ಕೋಟಿ ರೂ. ಹೊರೆ ಹೆಚ್ಚಾಗಲಿದೆ. ಭತ್ಯೆ, ಪಿಂಚಣಿ, ಪೂರ್ವಾನ್ವಯವಾಗುವಂತೆ ಜಾರಿ ಎಲ್ಲವೂ ಸೇರಿ ಸರ್ಕಾರಕ್ಕೆ ಅನುದಾನ ಹೊಂದಿಸುವುದು ಸಮಸ್ಯೆಯಾಗಲಿದೆ. ಈ ಕಾರಣದಿಂದ ಹಣಕಾಸು ಇಲಾಖೆ ಹಂತ-ಹಂತವಾಗಿ ವರದಿ ಅನುಷ್ಠಾನಗೊಳಿಸುವ ಕುರಿತು ಮುಖ್ಯಮಂತ್ರಿಗಳಿಗೆ ಸಲಹೆಯನ್ನು ನೀಡಿದೆ. ಸರ್ಕಾರವೂ ಇದೇ ಮಾದರಿ ಅನುಸರಿಸುವ ನಿರೀಕ್ಷೆ ಇದೆ.
7ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಸಮಾಧಾನ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವರದಿ ಜಾರಿಗಾಗಿ ಒತ್ತಾಯ ಮಾಡಿದೆ. ಈಗಾಗಲೇ ಮೂರು ಸಂಪುಟ ಸಭೆ ಮುಗಿದಿದ್ದು, ಜುಲೈ 15ರಂದು ನಡೆಯುವ ಸಭೆಯಲ್ಲಿ ಸರ್ಕಾರ ತೀರ್ಮಾನ ಪ್ರಕಟಿಸಲಿದೆಯೇ? ಎಂದು ನೌಕರರು ನಿರೀಕ್ಷೆ ಮಾಡುತ್ತಿದ್ದಾರೆ.
ಜುಲೈ 7ರ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯು ನಡೆಯಲಿದೆ. ಸಭೆಯಲ್ಲಿ ವರದಿ ಜಾರಿಗಾಗಿ ಮುಂದಿನ ಹೋರಾಟ ಏನಿರಬೇಕು? ಎಂದು ಚರ್ಚೆ ನಡೆಸುವ ನಿರೀಕ್ಷೆ ಇದೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಸರ್ಕಾರಿ ನೌಕರರು ಮುಷ್ಕರ ಆರಂಭಿಸಲಿದ್ದಾರೆ? ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿವೆ.












Click it and Unblock the Notifications