7th Pay Commission; ವೇತನ ಆಯೋಗದ ವರದಿ ಜಾರಿ, ಹಣಕಾಸು ಇಲಾಖೆ ವಿವರಣೆ ಏನು?
ಬೆಂಗಳೂರು, ಜುಲೈ 08: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ವಿಳಂಬ ಮಾಡುತ್ತಿರುವುದು ಏಕೆ?. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸಚಿವರಿಗೆ ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಲಾಗಿದೆ. ವರದಿಯ ಶಿಫಾರಸು ಜಾರಿ ಕೆಲವು ದಿನಗಳ ಕಾಲ ಇನ್ನೂ ವಿಳಂಬವಾಗಲಿದೆ.
ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ನೀಡಿತು. ವರದಿಯಲ್ಲಿ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.

ಜುಲೈ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿ ಏಕೆ ವಿಳಂಬ? ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಅಂಕಿ-ಅಂಶಗಳ ಸಮೇತ ಸಚಿವರಿಗೆ ವಿವರಣೆ ನೀಡಿದ್ದಾರೆ. ಇಲಾಖೆಯು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಿದೆ.
ಸಚಿವರಿಗೆ ಮಾಹಿತಿ: ಸಚಿವರ ಸಂಪುಟ ಸಭೆಯಲ್ಲಿ ಸಚಿವರಿಗೆ ಹಣಕಾಸು ಇಲಾಖೆ ಅಧಿಕಾರಿಗಳು ಪಿಪಿಟಿ ಮೂಲಕ ಅಂಕಿ ಸಂಖ್ಯೆಗಳನ್ನು ವಿವರಿಸಿದ್ದಾರೆ. ಜಿಎಸ್‌ಟಿ ಸೇರಿದಂತೆ ವಿವಿಧ ಮೂಲಗಳಿಂದ ನಿರೀಕ್ಷಿತ ತೆರಿಗೆ ಸಂಗ್ರಹವಾಗುತ್ತಿಲ್ಲ. ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಹೋಗುತ್ತಿದೆ. ಆದ್ದರಿಂದ ಆಯೋಗದ ವರದಿ ಅನ್ವಯ ವೇತನ ಪರಿಷ್ಕರಣೆ ವಿಳಂಬವಾಗಲಿದೆ.
ವೇತನ ಪರಿಷ್ಕರಣೆ, ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ವ್ಯವಸ್ಥೆಗೆ ವಾಪಸ್ ತಂದರೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ. ಆದ್ದರಿಂದ ಪ್ರತಿ ತಿಂಗಳ ವಿವಿಧ ಬಾಬ್ತುಗಳಿಗೆ ಹಣ ಹೊಂದಿಸುವುದು ಕಷ್ಟವಾಗಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಆರ್ಥಿಕವಾಗಿ ಹೊರೆಯಾಗುತ್ತದೆ ಎಂದು ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡದೇ ಇರಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣದ 7ನೇ ವೇತನ ಆಯೋಗದ ವರದಿಯ ಶಿಫಾರಸು ಜಾರಿ ಅಸಾಧ್ಯ. ಈ ಕುರಿತು ಸಚಿವರು ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದ್ದಾರೆ. ಸಚಿವರು ಎಲ್ಲಾ ತೀರ್ಮಾನ ಕೈಗೊಳ್ಳುವ ನಿರ್ಧಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗದ ವರದಿ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಿದೆ. ವೇತನ ಪರಿಷ್ಕರಣೆ ಆಗದಿದ್ದರೆ ನೌಕರರು ಮುಷ್ಕರವನ್ನು ಆರಂಭಿಸಬಹುದು ಎಂಬ ಮಾಹಿತಿಯೂ ಇದೆ. ಆದ್ದರಿಂದಲೇ ಸಚಿವ ಸಂಪುಟ ಸಭೆಗೆ ಅಧಿಕಾರಿಗಳನ್ನು ಕರೆಸಿಕೊಂಡು ಸಚಿವರಿಗೆ ಅಂಕಿ-ಅಂಶಗಳ ಸಮೇತ ವಿವರಣೆ ಕೊಡಲಾಗಿದೆ.
ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿ, ಹಳೆಯ ಪಿಂಚಣಿ ವ್ಯವಸ್ಥೆ ಮರು ಸ್ಥಾಪನೆಯ ಭರವಸೆಯನ್ನು ನೀಡಿತ್ತು. ಕೆ. ಸುಧಾಕರ್ ರಾವ್ ನೇತೃತ್ವದ ವೇತನ ಆಯೋಗ 244 ಪುಟಗಳ ವರದಿಯಲ್ಲಿ ಹಲವು ಶಿಫಾರಸು ಮಾಡಿದೆ.
ವರದಿಯಲ್ಲಿ ಕನಿಷ್ಠ ಮೂಲ ವೇತನವನ್ನು ರೂ. 17,000 ದಿಂದ ರೂ. 27,000ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಇನ್ನೂ ಅನೇಕ ಶಿಫಾರಸುಗಳಿದ್ದು ವರದಿ ಸ್ವೀಕಾರ ಮಾಡಿದ್ದ ಮುಖ್ಯಮಂತ್ರಿಗಳು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಿದ್ದರು. ಆಗ ಲೋಕಸಭೆ ಚುನಾವಣೆ ನೀತಿ ಸಂಹಿತೆಯೂ ಜಾರಿಗೆ ಬಂದ ಕಾರಣ ಸರ್ಕಾರ ಮೂರು ತಿಂಗಳು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು. ಈಗ ನೀತಿ ಸಂಹಿತೆ ವಾಪಸ್ ಪಡೆಯಲಾಗಿದ್ದು, ನೌಕರರು ವೇತನ ಪರಿಷ್ಕರಣೆಗಾಗಿ ಪಟ್ಟು ಹಿಡಿದಿದ್ದಾರೆ.












Click it and Unblock the Notifications