ಕರಾವಳಿ-ಮಲೆನಾಡಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು ಜು.7: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜು.11 ರವರೆಗೆ ಗುಡುಗು, ಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿಯಲ್ಲೇ ಹೆಚ್ಚು ಮಳೆ ಆಗುವ ಕಾರಣಕ್ಕೆ ಗುರುವಾರ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಒಂದು ವಾರದಿಂದಲೂ ಎಡೆಬಿಡದೇ ಮಳೆ ಸುರಿಯುತ್ತಿದೆ. ಹವಾಮಾನದಲ್ಲಿ ತೀವ್ರತೆ ಬದಲಾವಣೆಗಳ ಕಾರಣದಿಂದ ರಾಜ್ಯಾದ್ಯಂತ ಮಳೆ ವಾತಾವರಣ ಆವರಿಸಿದೆ. ಇಂದು (ಗುರುವಾರ) ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗುವ ಹಿನ್ನೆಲೆ 'ರೆಡ್ ಅಲರ್ಟ್' ನೀಡಲಾಗಿದೆ.
ನಂತರ ಜುಲೈ 9ರವರೆಗೆ ಕರಾವಳಿಯ ಇದೇ ಮೂರು ಜಿಲ್ಲೆಗಳು ಸೇರಿದಂತೆ ಮಲೆನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೂ 'ಆರೆಂಜ್ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ. ಈ ಅವಧಿಯಲ್ಲಿ ಈ ನಿಗದಿತ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಕಡೆಗಳಲ್ಲೂ ಜೋರು ಮಳೆ ಬೀಳಲಿದೆ ಎಂದು ತಿಳಿದು ಬಂದಿದೆ.

ಕರಾವಳಿ, ಮಲೆನಾಡಿನ ಜತೆಗೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಸಹ ಮುಂಗಾರು ಚುರುಕಾಗಿರಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಜು. 11ರವರೆಗೆ ಮತ್ತು ಬೀದರ್, ಕಲಬುರಗಿಗಳಲ್ಲೂ ಭಾರೀ ಮಳೆ ನಿರೀಕ್ಷೆ ಕಾರಣಕ್ಕೆ ಜು.9ರಂದು ಮಾತ್ರ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೊನ್ನಾವರದಲ್ಲಿ116ಮಿ.ಮೀ. ಮಳೆ ದಾಖಲು; ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ರಾಜ್ಯದಲ್ಲೆ ಅತ್ಯಧಿಕ 116 ಮಿ.ಮೀ. ಮಳೆ ಹೊನ್ನಾವರದಲ್ಲಿ ದಾಖಲಾಗಿದೆ. ನಂತರದ ಸ್ಥಾನದಲ್ಲಿ ಮಂಗಳೂರು ಇದ್ದು, ಅಲ್ಲಿ 81.9 ಮಿ.ಮೀ. ಮಳೆ ಬಿದ್ದಿದೆ. ಗೋಕರ್ಣದಲ್ಲಿ 70.3 ಮಿ.ಮೀ, ಕಾರವಾರದಲ್ಲಿ 50.6 ಮಿ.ಮೀ., ಮಡಿಕೇರಿಯಲ್ಲಿ 30 ಮಿ.ಮೀ. ಮಳೆ ದಾಖಲಾಗಿದೆ. ಇದೇ ವೇಳೆ ಕರಾವಳಿ ಮತ್ತು ಮಲೆನಾಡಿನ ಇನ್ನಿತರ ಜಿಲ್ಲೆಗಳಲ್ಲೂ ಉತ್ತಮ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬೆಂಗಳೂರಿನ ಹವಾಮಾನ ಮುನ್ಸೂಚನೆ; ಬೆಂಗಳೂರಿನಲ್ಲಿ ಒಂದು ವಾರದಿಂದ ಮಳೆ ಅಷ್ಟಾಗಿ ಆಗಿಲ್ಲ. ಆದರೆ ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ತೀವ್ರ ಚಳಿ ವಾತಾವರಣ ಕಂಡು ಬಂದಿದೆ. ಈ ವಾತಾವರಣ ಜು.11ರವರೆಗೂ ಮುಂದುವರಿಯುವ ನಿರೀಕ್ಷೆ ಇದೆ.

ಅಲ್ಲಿಯವರೆ ನಗರದ ವಿವಿಧ ಕಡೆ ಸಂಜೆ ನಂತರ ಕೆಲವೊಮ್ಮೆ ಆಗಾಗ ತುಂತುರು ಮಳೆ ಆಗಲಿದೆ. ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಬಹುದು. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 26 ಡಿ.ಸೆ. ಹಾಗೂ ಕನಿಷ್ಠ ತಾಪಮಾನ 20 ಡಿ.ಸೆ. ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.












Click it and Unblock the Notifications