ಅಕ್ರಮ ಆಸ್ತಿ ಗಳಿಕೆ: ವಿ ಸೋಮಣ್ಣ ವಿರುದ್ಧ ಎಸಿಬಿ ತನಿಖೆಗೆ ಅಸ್ತು
ಬೆಂಗಳೂರು, ಸೆ. 14: ಮಾಜಿ ವಸತಿ ಸಚಿವ ವಿ ಸೋಮಣ್ಣ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮತ್ತೊಮ್ಮೆ ಕೇಳಿ ಬಂದಿದೆ. ಈ ಕುರಿತಂತೆ ತನಿಖೆ ನಡೆಸಿ ಡಿಸೆಂಬರ್ 17ರೊಳಗೆ ವರದಿ ಸಲ್ಲಿಸುವಂತೆ ಎಸಿಬಿಗೆ ಲೋಕಾಯುಕ್ತ ಕೋರ್ಟ್ ಬುಧವಾರ ಆದೇಶಿಸಿದೆ.
ವಿ ಸೋಮಣ್ಣ ವಿರುದ್ಧ ಮೂಡಲಪಾಳ್ಯದ ರಾಮಕೃಷ್ಣ ಎಂಬುವರು ಲೋಕಾಯುಕ್ತ ಕೋರ್ಟಿನಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.ಚುನಾವಣಾ ಆಯೋಗ ಹಾಗೂ ಲೋಕಾಯುಕ್ತಕ್ಕೆ ಈ ಹಿಂದೆ ಸಲ್ಲಿಸಲಾದ ಆಸ್ತಿ ವಿವರಕ್ಕೂ ಇಂದಿನ ಆಸ್ತಿ ವಿವರಕ್ಕೂ ಶೇ205 ರಷ್ಟು ಏರಿಕೆ ಕಂಡು ಬಂದಿದೆ ಎಂದು ಆರೋಪಿಸಲಾಗಿದೆ.

ಸೋಮಣ್ಣ ವಿರುದ್ಧ ದೊಡ್ಡಬಳ್ಳಾಪುರ ಬಳಿ 40 ಎಕರೆ ಅಕ್ರಮ ಭೂಮಿ ಹೊಂದಿರುವ ಆರೋಪ ಕೇಳಿ ಬಂದಿತ್ತು. ಆದರೆ, ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ತಿರಸ್ಕರಿಸಿದ್ದ ಲೋಕಾಯುಕ್ತ ನ್ಯಾಯಾಧೀಶರು ಎಲ್ಲ ಆರೋಪಿಗಳ ವಿರುದ್ಧ ಸಮನ್ಸ್ ಜಾರಿ ಮಾಡಿದ್ದರು.
ಕರ್ನಾಟಕ ಚುನಾವಣಾ ಕಾವಲು (ಕೆಇಡಬ್ಲ್ಯೂ) ಸಂಸ್ಥೆ 2004 ರಿಂದ 2008 ರ ತನಕದ ಅದಾಯ ಘೋಷಣೆ ಮಾಡಿರುವ ಶಾಸಕರ ಮಾಹಿತಿ ವಿಶ್ಲೇಷಣೆ ಮಾಡಿ ವಿವರ ಬಹಿರಂಗ ಮಾಡಿದೆ. ಇದರಲ್ಲಿ ಕರ್ನಾಟಕದ ಕೋಟಿ ಗಳಿಕೆ ಮಾಡಿರುವ ಶಾಸಕ, ಸಚಿವರ ವಿವರಗಳಿದೆ. ವಿ. ಸೋಮಣ್ಣ ಅವರ ಹೆಸರು ಕೂಡಾ ಈ ಪಟ್ಟಿಯಲ್ಲಿ ಕಾಣಿಸಿದೆ. ಚರಾಸ್ತಿ 9.16 ಕೋಟಿ ಹಾಗೂ ಸ್ಥಿರಾಸ್ತಿ 1.83 ಕೋಟಿ ರು ಘೋಷಿತ ಆಸ್ತಿಯಾಗಿದೆ. ಈಗ ಈ ಮೊತ್ತ ಶೇ 205ರಷ್ಟು ಏರಿಕೆಯಾಗಿದೆ.
ಇತರೆ ಪ್ರಕರಣಗಳು: ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಬಳಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ ಇದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಕೀಲ ಎಚ್.ಯೋಗೇಂದ್ರ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲು ಮಾಡಲಾಗಿದೆ.












Click it and Unblock the Notifications