Bengaluru Weather: ನಗರದಲ್ಲಿ 2 ಗಂಟೆಗಳಲ್ಲಿ 7.7 ಸೆಂಟಿ ಮೀ ಮಳೆ ದಾಖಲು; ಮೇ 1ರತನಕ ಭಾರೀ ಮಳೆ
ಬೆಂಗಳೂರು: ಬಿಸಿಲ ಧಗೆಗೆ ಕಾದು ಕೆಂಡವಾಗಿದ್ದ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ಎರಡು ಗಂಟೆಗಳಲ್ಲಿ ಅತ್ಯಧಿಕ ದಾಖಲೆಯ ಮಳೆ ಸುರಿದಿದೆ. ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಬಂದ ಮಳೆಗೆ ನಗರ ಅಕ್ಷರಶಃ ನಲುಗಿದೆ. ಪ್ರಮುಖ ರಸ್ತೆ ಜಂಕ್ಷನ್‌ಗಳಲ್ಲಿ ನೀರು ನಿಂತಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ನೀರು ಹೊಕ್ಕಿದೆ. ವಿಧಾನಸೌಧದ ಕಾರಿಡಾರ್ ನಲ್ಲೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತು ಏಳು ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ವರ್ಷದ ಮೊದಲ ಬಿರುಗಾಳಿ ಭಾರೀ ಮಳೆಗೆ ಹತ್ತಾರು ಗಿಡಮರಗಳು ಉರುಳಿ ಬಿದ್ದು ವಾಹನಗಳು ಜಖಂಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಯಿತು. ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?
ಸಂಜೆ 4 ಗಂಟೆ ಆಸುಪಾಸಿಗೆ ಬಿರುಗಾಳಿ ಸಹಿತ ಜೋರು ಮಳೆ ನಿರಂತರವಾಗಿ ಸುರಿಯಿತು. ಕೇವಲಸ ಎರಡೇ ಗಂಟೆಗಳಲ್ಲಿ ಕಾಟನ್‌ಪೇಟೆ ಮತ್ತು ಚಾಮರಾಜ ಪೇಟೆಯಲ್ಲಿ ತಲಾ ಬರೋಬ್ಬರಿ 7.7 ಸೆಂಟಿ ಮಿಟರ್ ಆಲಿಕಲ್ಲು ಮಳೆ ದಾಖಲಾಗಿದೆ. ಇದು ಇಷ್ಟು ಕಡಿಮೆ ಸಮಯದಲ್ಲೇ ದಾಖಲಾದ ಅತ್ಯಧಿಕ ಮಳೆ ಆಗಿದ್ದು, ಈ ಕಾರಣದಿಂದಲೇ ನಿಮಿಷದಿಂದ ನಿಮಿಷಕ್ಕೆ ತಗ್ಗು ಪ್ರದೇಶಗಳ ಸ್ಥಿತಿ ಬದಲಾಗಿದೆ. ನೋಡ ನೋಡುತ್ತಿದ್ದಂತೆ ರಸ್ತೆಗಳು ಕೆರೆಯಂತಾಗಿ ಮಾರ್ಪಟ್ಟಿವೆ. ಬಿಸಿಲಿಗೆ ಬೆಂದ ಜನರು ಪ್ರವಾಹ ಸ್ಥಿತಿ ಎದುರಿಸಬೇಕಾಯಿತು.

ಇನ್ನುಳಿದಂತೆ ಬೊಮ್ಮನಹಳ್ಳಿ ಮತ್ತು ಪುಲಕೇಶಿ ನಗರದಲ್ಲಿ ತಲಾ 6.2 ಸೆಂಟಿ ಮೀಟರ್, ವಿವಿ ಪುರಂ ವ್ಯಾಪ್ತಿಯಲ್ಲಿ 6 ಸೆಂಟಿ ಮೀಟರ್, ರಾಜಮಹಲ್ ಗುಟ್ಟಹಳ್ಳಿಯಲ್ಲಿ 5.4 ಸೆಂಟಿ ಮೀಟರ್, ಬಿಟಿಎಂ ಬಡಾವಣೆ 4.7 ಸೆಂಟಿ ಮೀಟರ್, ವನ್ನಾರಪೇಟೆ, ಸಂಪಗಿರಾಮನಗರದಲ್ಲಿ ತಲಾ 3.9 ಸೆಂಟಿ ಮೀಟರ್, ಆರ್‍ಆರ್ ನಗರ ಭಾಗದಲ್ಲಿ 3.8ಸೆಂಟಿ ಮೀಟರ್, ದಯಾನಂದನಗರ, ಎಚ್‌ಎಎಲ್ ಏರ್‍ಪೋರ್ಟ್, ಮಾರತ್ತಹಳ್ಳಿ, ಪಟ್ಟಾಭಿರಾಮನಗರದಲ್ಲಿ ತಲಾ 3 ಸೆಂಟಿ ಮೀಟರ್ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ವಿಧಾನಸೌಧ, ಮೆಟ್ರೋ ನಿಲ್ದಾಣದಲ್ಲೂ ಮಳೆ ನೀರು
ಗಂಟೆಗಳ ಕಾಲ ಸುರಿ ಮಳೆಗೆ ನಮ್ಮ ಮೆಟ್ರೋ ಪ್ರಯಾಣಿಕರ ತೊಂದರೆ ಅನುಭವಿಸಬೇಕಾಯಿತು. ಜನನಿಬಿಡ ಪ್ರದೇಶವಾದ ಬನಶಂಕರಿ ಮೆಟ್ರೋ ನಿಲ್ದಾಣದಲ್ಲಿ ನೀರು ಒಳನುಗ್ಗಿ ಸಮಸ್ಯೆ ಸೃಷ್ಟಿಸಿತು. ನಿಲ್ದಾಣ ಒಳಭಾಗದಲ್ಲಿ ಕೆಲ ಕಾಲ ನೀರು ನಿಂತದ್ದು ಕಂಡು ಬಂತು. ಮಳೆ ನೀರಿನಲ್ಲೇ ಪ್ರಯಾಣಿಕರ ಓಡಾಡಿದರು.
ಶಕ್ತಿಸೌಧ, ರಾಜ್ಯ ಆಡಳಿತ ಯಂತ್ರವಿರುವ ವಿಧಾನಸೌಧದ ಸುತ್ತಮುತ್ತ ಜೋರು ಮಳೆ ಆಯಿತು. ವಿಧಾನಸೌದ ಕಾರಿಡಾರ್‍ನೊಳಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಅಧಿಕಾರಿಗಳು, ಸರ್ಕಾರಿ ಸಿಬ್ಬಂದಿ ಮಳೆ ನೀರಿನಲ್ಲಿ ಓಡಾಡುವಂತಾಯಿತು. ಸುಮಾರು ಮೂರು ಮಹಡಿಗಳಲ್ಲಿ ಇದೇ ಸ್ಥಿತಿ ಕಂಡು ಬಂತು.
ವಿವಿಧೆಡೆ ಧರೆಗುರುಳಿದ ಮರಗಳು
ಬಿರುಗಾಳಿ ಸಹಿತ ಜೋರಾಗಿ ಸುರಿದ ಭಾರೀ ಮಳೆಗೆ ಮರಗಳು ಧರೆಗುರುಳಿವೆ. ಮರಗಳಿಗೆ ಅಡಿ ಕಾರುಗಳು, ಬೈಕ್ ಸಿಲುಕಿ ಜಖಂಗೊಂಡಿವೆ. ಮರದ ಕೊಂಬೆಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು. ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಒಂದು ಅಡಿಗೂ ಅಧಿಕ ನೀರು ನಿಂತು ಸಂಚಾರ ನಿಧಾನವಾಯಿತು. ವಾಹನಗಳು ನೀರಿನಲ್ಲೇ ಸಂಚರಿಸಿದ್ದು ಕಂಡು ಬಂತು. ಜಯನಗರ, ಕೆ.ಆರ್.ಪುರಂ, ಕೋರಮಂಗಲ, ಮಲ್ಲೇಶ್ವರ, ಶೇಷಾದ್ರಿಪುರಂ, ಕೋರಮಂಗಲ, ಜೆಪಿನಗರ ಇನ್ನಿತರ ಕಡೆಗಳಲ್ಲಿ ಮಳೆ ಮುಂದುವರಿಯುತು.
ಮೇ 1ರವರೆಗೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುಂದುವರಿಯಲಿದೆ. ಈ ಸಂಬಂಧ ನಗರಕ್ಕೆ ಎರಡು ದಿನ (ಮೇ 1ರವರೆಗೆ) ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಆಗಲಿದ್ದು, ಇನ್ನು ಹಲವೆಡೆ ಆಲಿಕಲ್ಲು ಸಹಿತ ಸಾಧಾರಣದಿಂದ ಭಾರೀ ಮಳೆ ಆಗಲಿದೆ. 6.5 ಸೆಂಟಿ ಮೀಟರ್‌ನಿಂದ 11ಸೆಂಟಿ ಮೀಟರ್‌ವರೆಗೆ ಮಳೆ ಆಗುವ ಸಾಧ್ಯತೆ ಇದೆ. ಈ ವೇಳೆ ನಗರದ ಗರಿಷ್ಠ ತಾಪಮಾನ 35 ಹಾಗೂ ಕನಿಷ್ಠ 23ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.













Click it and Unblock the Notifications