ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣ; ಶಾಸಕ ರೇಣುಕಾಚಾರ್ಯಗೆ ಸಂಕಷ್ಟ
ಬೆಂಗಳೂರು, ಮಾರ್ಚ್ 29; ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯಗೆ ಸಂಕಷ್ಟ ಎದುರಾಗಿದೆ. ಅವರು ತಮ್ಮ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಇದರಿಂದಾಗಿ ಶಾಸಕ ರೇಣುಕಾಚಾರ್ಯಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದ್ದು, ಯಾವುದೇ ಕ್ಷಣದಲ್ಲಿ ಅವರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆಯಾಗಲಿದೆ. ರೇಣುಕಾಚಾರ್ಯ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಈ ಆದೇಶ ನೀಡಿದೆ. ತನಿಖೆ ಮುಕ್ತಾಯವಾಗಿ ಅಂತಿಮ ವರದಿ ಸಿದ್ಧವಾಗಿದೆ ಎಂಬ ಲೋಕಾಯುಕ್ತರ ಪರ ವಾದವನ್ನು ಮಾನ್ಯ ಮಾಡಿರುವ ನ್ಯಾಯಾಲಯ, ಈ ಹಂತದಲ್ಲಿಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ಹೇಳಿದೆ.

ಲೋಕಾಯುಕ್ತರ ವಾದವೇನು?; ಲೋಕಾಯುಕ್ತ ಪರ ವಾದಿಸಿದ್ದ ವಕೀಲರು, ನಿಯಮದಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದು, ತನಿಖೆ ಮುಕ್ತಾಯವಾಗಿ ಅಂತಿಮ ವರದಿ ಸಿದ್ಧವಾಗಿದೆ. ಆದರೆ ಅರ್ಜಿದಾರರು ಜನಪ್ರತಿನಿಧಿಯಾಗಿರುವುದರಿಂದ ಅಂತಿಮ ವರದಿ ಸಲ್ಲಿಕೆಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಸಕ್ಷಮ ಪ್ರಾಧಿಕಾರವಾದ ಸ್ಪೀಕರ್ ಅನುಮತಿ ನೀಡಿದ ಕೂಡಲೇ ಸಂಬಂಧಿಸಿದ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಅರ್ಜಿದಾರರ ಪರ ವಕೀಲರು, ನಿಯಮದ ಪ್ರಕಾರ ಎರಡನೇ ದೂರು ಊರ್ಜಿತವಾಗುವುದಿಲ್ಲ. ಹಾಗಾಗಿ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ ಏನು?; 2015ರ ಏಪ್ರಿಲ್ 28ರಂದು ಗುರುಪಾದಯ್ಯ ಮಠದ್ ಎಂಬುವರು ರೇಣುಕಾಚಾರ್ಯ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಸಿದ್ದಾರೆ, ಆ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಬೇಕೆಂದು ದಾವಣಗೆರೆಯ ವಿಶೇಷ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಮನಗಂಡ ಕೋರ್ಟ್, ದಾವಣಗೆರೆ ಲೋಕಾಯುಕ್ತ ಎಸ್‌ಪಿಗೆ ಸಿಆರ್‌ಪಿಸಿ ಸೆಕ್ಷನ್ 156 (3) ಅಡಿಯಲ್ಲಿಈ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ಆಗ ರೇಣುಕಾಚಾರ್ಯ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ತಾಂತ್ರಿಕ ಕಾರಣದಿಂದ ಹೈಕೋರ್ಟ್ ಪ್ರಕರಣ ರದ್ದು ಮಾಡಿತ್ತು. ಆನಂತರ ದೂರುದಾರರು ಮತ್ತೊಂದು ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ತಡೆ ಕಾಯಿದೆ ಸೆಕ್ಷನ್ 13(1)(ಇ) ಅಡಿಯಲ್ಲಿಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ, ಅಂತಿಮ ವರದಿಯನ್ನೂ ಸಹ ಸಿದ್ಧಪಡಿಸಿದ್ದಾರೆ. ಅದರಲ್ಲಿ ರೇಣುಕಾಚಾರ್ಯ ವಿರುದ್ಧದ ಆರೋಪಗಳು ಸಾಬೀತಾದರೆ ಆಗ ಅವರು ನಿಜಕ್ಕೂ ಸಂಕಷ್ಟ ಎದುರಿಸಬೇಕಾಗುತ್ತದೆ. ಏಕೆಂದರೆ ಚುನಾವಣೆ ಕೂಡ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಪ್ರಕರಣದಲ್ಲಿ ಏನಾದರೂ ಆದೇಶಗಳಾದರೆ ಅದು ಅವರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.
ಗುರುಪಾದಯ್ಯ ಮಠದ್ ಎಂಬುವರು ತಮ್ಮ ದೂರಿನಲ್ಲಿ ಎಂ. ಪಿ. ರೇಣುಕಾಚಾರ್ಯ ಮತ್ತು ಅವರ ಸಹೋದರ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಆಸ್ತಿಗಳಿಕೆ ಮಾಡಿದ್ದಾರೆ. ಶಾಸಕರು, ಸಚಿವರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಹೋದರರು, ಸಂಬಂಧಿಗಳ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪವನ್ನು ಮಾಡಿದ್ದರು.
ಎಂ. ಪಿ. ರೇಣುಕಾಚಾರ್ಯ 2004ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 26.07 ಲಕ್ಷ ಆಸ್ತಿ, 2008ರ ಚುನಾವಣೆ ಸಂರ್ಭದಲ್ಲಿ 73.97 ಲಕ್ಷ ರೂ. ಆಸ್ತಿ, 2013ರ ಚುನಾವಣೆ ಸಂದರ್ಭದಲ್ಲಿ 4.95 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ವಾರ್ಷಿಕ ಆದಾಯ 27 ಲಕ್ಷ ರೂ., 8 ಎಕರೆ ಕೃಷಿ ಭೂಮಿ, ಐಷಾರಾಮಿ ಕಾರು ಇದೆ ಎಂದು ನಮೂದು ಮಾಡಿದ್ದಾರೆ. ಅಲ್ಪ ಅವಧಿಯಲ್ಲಿ ಇಷ್ಟೊಂದು ಆಸ್ತಿಗಳಿಸಲು ಹೇಗೆ ಸಾಧ್ಯ? ಈ ಬಗ್ಗೆ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದರು.












Click it and Unblock the Notifications