ನನ್ನದು ಗಜಕೇಸರಿ ಯೋಗ, ನಾನು ಪ್ರಧಾನಿ ಆಗಬಹುದು: ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ್
ಬಾಗಲಕೋಟೆ, ಏಪ್ರಿಲ್ 12: ಲೋಕಸಭಾ ಚುನಾವಣಾ ಅಖಾಡದಲ್ಲಿ ಅಬ್ಬರ ಪ್ರಚಾರ ಜೋರಾಗಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಸ್ಪರ್ಧಿಸುತ್ತಿದ್ದು, ಬಾಗಲಕೋಟೆ ಜನತೆ ಬದಲಾವಣೆಯನ್ನ ಬಯಸಿದ್ದು, ಪ್ರಚಾರದ ವೇಳೆ ಸಂಯುಕ್ತ ಪಾಟೀಲ್ ಅವರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ತುಂಬೆಲ್ಲ ಸಂಚಾರ ಮಾಡುತ್ತಾ ಮತ ಯಾಚಿಸುತ್ತಿರು ಸಂಯುಕ್ತಾ ಪಾಟೀಲ್ ಜೊತೆಗೆ ಅಲ್ಲಲ್ಲಿ ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಸಂಯುಕ್ತ ಪಾಟೀಲ್ ಸರಣಿ ಸಭೆಗಳನ್ನ ಮಾಡುತ್ತಿದ್ದಾರೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನದು ಗಜಕೇಸರಿ ಯೋಗ, ನಾನು ಹುಟ್ಟಿದಾಗ ತಂದೆ ಶಾಸಕರಾದರು. ಚಿಕ್ಕವಳಿದ್ದಾಗ ಏನಾಗುತ್ತಿಯಾ ಅಂದರೆ ಪ್ರಧಾನಿ ಆಗುತ್ತೇನೆ ಅಂತಿದ್ದೆ. ಈಗ ಸಂಸದಳಾಗುವ ಅವಕಾಶ ಬಂದಿದೆ. ಮುಂದೆ ನಾನು ಪ್ರಧಾನಿ ಆಗಬಹುದು ಎಂದು ಹೇಳುವ ಮೂಲಕ ಪ್ರಧಾನಿ ಹುದ್ದೆ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ.
ನಾನು ಬಾಗಲಕೋಟೆ ಮಗಳು, ಸಹೋದರಿ. ನನ್ನ ತಂದೆ ನನ್ನನ್ನು ನಿಮ್ಮ ಉಡಿಯಲ್ಲಿ ಹಾಕಿದ್ದಾರೆ. ಒಂದು ಅವಕಾಶ ಕೊಡಿ ನಿಮ್ಮ ಜೀತದಾಳಾಗಿ ಕೆಲಸ ಮಾಡುತ್ತೇನೆ. ಮನೆ ಯಜಮಾನಿಗೆ ಸರ್ಕಾರ ತಲಾ 2 ಸಾವಿರ ಹಣ ನೀಡುತ್ತಿದೆ. ಪುರುಷರಿಗೆ ಕೊಟ್ರೆ ಸಂಜೆ ಯಾವ ಅಂಗಡಿಗೆ ಹೋಗುತ್ತೆ ಅಂತ ಗೊತ್ತಿದೆ.
ರಾಜ್ಯದಿಂದ ಪ್ರತಿ ವರ್ಷದ ನಾಲ್ಕು ಲಕ್ಷ ಕೋಟಿ ರೂ ತೆರಿಗೆ ಪಾವತಿಸಲಾಗುತ್ತದೆ. ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ ಪರಿಹಾರ ಕೊಡಲು ಆಗಲ್ಲ ಎನ್ನುತ್ತಿದೆ. ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಅನುದಾನ ಕೇಳಿದರೆ ಕೊಟ್ಟಿಲ್ಲ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎನ್ನುವ ಪ್ರಧಾನಿ ಅದೇ ರೈತರ ಮೇಲೆ ಗೋಲಿಬಾರ್ ನಡೆಸುತ್ತಾರೆ.
ಇನ್ನೂ ಈ ವೇಳೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕಳೆದ ಚುನಾವಣೆಯಲ್ಲಿ ವೀಣಾ ಅವರು ಪಡೆದ ಮತಗಳಿಗಿಂತ ಎರಡು ಲಕ್ಷ ಲೀಡ್ ಪಡೆಯುತ್ತೇವೆ. ಇಪ್ಪತ್ತು ವರ್ಷ ಅಧಿಕಾರದಲ್ಲಿರುವ ಬಿಜೆಪಿಯವರು ಅವಳಿ ಜಿಲ್ಲೆಗಳ ಸಮಸ್ಯೆಗೆ ಧ್ವನಿಯಾಗಿಲ್ಲ. ಕೃಷ್ಣಾ ನದಿಯಲ್ಲಿ ನಮ್ಮ ಪಾಲಿನ 200 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಈ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಿಲ್ಲ. ಸದ್ಯ ಮಹಾರಾಷ್ಟ್ರಕ್ಕೆ ನೀರು ಕೊಡಿ ಎನ್ನುವ ಸ್ಥಿತಿಯಿದೆ. ಈ ಬಗ್ಗೆ ಬಿಜೆಪಿ ಸಂಸದರು ಧ್ವನಿ ಎತ್ತಿದ್ದರೆ ಅವಳಿ ಜಿಲ್ಲೆ ನಂದನವನವಾಗುತ್ತಿತ್ತು. ಈ ಬಾರಿ ನಾವು ಬಾಗಲಕೋಟೆ, ವಿಜಯಪುರ ಎರಡೂ ಕ್ಷೇತ್ರ ಗೆಲ್ಲುತ್ತೇವೆ ಎಂದು ಹೇಳಿದರು.
ಯೋಗಾಯೋಗಕ್ಕಿಂತ ಪರಿಶ್ರಮ ಪಡಬೇಕು. ಈ ಬಾರಿ ಜನ ಗೆಲ್ಲಿಸಬಹುದು, ನಾವು ಮುಂದಿನ ಬಾರಿ ಸ್ವಂತ ಕಾಲ ಮೇಲೆ ನಿಂತು ಕ್ಷೇತ್ರ ಗೆಲ್ಲಬೇಕು, ಪುತ್ರಿ ಸಂಯುಕ್ತಾ ಅವಳಿ ಜಿಲ್ಲೆಯ ಮನೆ ಮಗಳು. ಯುಕೆಪಿ ಸೇರಿದಂತೆ ಜಿಲ್ಲೆಯ ಸಮಸ್ಯೆಯ ಬಗ್ಗೆ ಪುತ್ರಿ ಸಂಸತ್‌ನಲ್ಲಿ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸಲಿದ್ದಾಳೆ. ಮೈಸೂರು ಮಹಾರಾಜರು ರಸ್ತೆಯ ಮೇಲೆ ನಿಂತು ಮತ ಕೇಳುವಂತೆ ಮಾಡಿದ್ದು ಕಾಂಗ್ರೆಸ್ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.












Click it and Unblock the Notifications