"ರಸ್ತೆ ನಿರ್ಮಿಸಬೇಕಾದರೆ ಗ್ಯಾರಂಟಿ ಯೋಜನೆ ನಿಲ್ಲಿಸಬೇಕು!"
ಕರ್ನಾಟಕ ಸರ್ಕಾರವು ಆದಾಯ ಹಾಗೂ ಆರ್ಥಿಕ ವಿಚಾರದಲ್ಲಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ, ಗ್ಯಾರಂಟಿ ಯೋಜನೆಗಳಿಂದ ಸಂಕಷ್ಟ ಎದುರಾಗಿದೆ ಎಂದು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದರ ನಡುವೆಯೇ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಆಗಬೇಕಾದರೆ ಗ್ಯಾರಂಟಿ ನಿಲ್ಲಿಸಬೇಕೇ ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನೆ ಮಾಡಿದ್ದಾರೆ.
ಅಕ್ಕಿ ಹಾಗೂ ಇನ್ನಿತರ ಯೋಜನೆ ಬೇಡ ಎಂದರೆ ರಸ್ತೆ ಮಾಡ್ತೀವಿ ರಸ್ತೆ ಬೇಕು ಎಂದರೆ ಯೋಜನೆಗಳನ್ನು ನಿಲ್ಲಿಸಲು ಹೇಳೀನಿ ಎಂದು ಬಸವರಾಜ್ ಅವರು ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ರಾವಣಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ರೈತರೊಬ್ಬರು, ನಮ್ಮ ಹೊಲಕ್ಕೆ ಹೋಗುವ ರಸ್ತೆ ಮಾಡಿಕೊಡಿ ಎಂದು ಮನವಿ ಮಾಡಿದ್ದು. ಈ ಸಂದರ್ಭದಲ್ಲಿ ಸ್ಕೀಂ ಬೇಕೋ ಅಥವಾ ರಸ್ತೆ ಬೇಕೋ ಎಂಬರ್ಥದಲ್ಲಿ ರಾಯರೆಡ್ಡಿ ಅವರು ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಗ್ಯಾರೆಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಒಪ್ಪಿಕೊಂಡಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಈಗ ಮತ್ತೊಮ್ಮೆ ಪಾಪರ್ ಸರ್ಕಾರದ ಬಂಡವಾಳ ಬಿಚ್ಚಿಟ್ಟಿದ್ದಾರೆ. ರಸ್ತೆ ಬೇಕು ಅಂದರೆ ಗ್ಯಾರೆಂಟಿ ಸ್ಕೀಮ್ ಬಂದ್ ಮಾಡಬೇಕಾಗುತ್ತದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಖಜಾನೆ ಖಾಲಿ ಆಗಿ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.
ಅವ್ಯಾಹತ ಭ್ರಷ್ಟಾಚಾರ, ಒಲೈಕೆ ರಾಜಕಾರಣ ನಡೆಸುತ್ತಾ, ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಹೊಡೆದು ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆ ಬರಿದು ಮಾಡಿಕೊಂಡಿದೆ. ಅನುದಾನವಿಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಆಗದೆ, ಕ್ಷೇತ್ರದ ಜನರ ಬೇಡಿಕೆಗಳಿಗೆ ಸ್ಪಂದಿಸಲಾಗದೆ ಶಾಸಕರು ನಲುಗಿ ಹೋಗಿದ್ದಾರೆ. ಆಡಳಿತ ಪಕ್ಷದ ಶಾಸಕರೊಬ್ಬರು ತಮ್ಮ ಸರ್ಕಾರದಲ್ಲಿ ಅನುದಾನಕ್ಕೂ ಕೊರತೆಯಾಗಿದೆ ಎಂದು ಬಹಿರಂಗವಾಗಿ ಅಂಗಲಾಚುವ ಪರಿಸ್ಥಿತಿ ಬಂದಿದೆ. ಅಕ್ಕಿ, ಇನ್ನೊಂದು ಬೇಡ ಎಂದರೆ ರಸ್ತೆ ಮಾಡ್ತೀವಿ, ರಸ್ತೆ ಬೇಕು ಎಂದರೆ ಗ್ಯಾರಂಟಿ ಸ್ಕೀಂ ನಿಲ್ಲಿಸಲು ಹೇಳ್ತಿನಿ ಎಂದು ಸ್ವತಃ ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರೇ ಹೇಳಿದ್ದಾರೆ.
ಅನುದಾನದ ವಿಚಾರದಲ್ಲಿ ರಾಜು ಕಾಗೆ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದರು, ಒಂದು ಚರಂಡಿ ನಿರ್ಮಿಸಲು ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಎನ್. ವೈ. ಗೋಪಾಲಕೃಷ್ಣ ಹೇಳಿದ್ದರು. ಗೃಹ ಸಚಿವ ಜಿ ಪರಮೇಶ್ವರ್ ಅವರು ಕೂಡ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಈಗ ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರೇ ರಸ್ತೆ ಬೇಕು ಎಂದರೆ ಗ್ಯಾರಂಟಿ ಸ್ಕೀಂ ನಿಲ್ಲಿಸಲು ಹೇಳ್ತಿನಿ ಎನ್ನುವ ಮೂಲಕ ಸರ್ಕಾರದ ಅರ್ಥಿಕ ಸ್ಥಿತಿಗತಿಯನ್ನು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ಒಲೈಕೆ ರಾಜಕಾರಣಕ್ಕೆ ಅನುದಾನ ಬಿಡುಗಡೆ ಮಾಡುವ ನಿಮಗೆ, ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲು ನಿಮ್ಮ ಸರ್ಕಾರದ ಬಳಿ ದುಡ್ಡಿಲ್ಲವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.












Click it and Unblock the Notifications