'ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ಆರ್‌ಎಸ್‌ಎಸ್ ಬ್ಯಾನ್'
ಬೆಂಗಳೂರು, ಜುಲೈ 01: ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್‌ಸಮರ ನಡೆಯುತ್ತಲೇ ಇದೆ. ಆರ್‌ಎಸ್‌ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹೊತ್ತಿಸಿದ ಕಿಡಿ ರಾಜ್ಯದಲ್ಲಿ ಧಗಧಗಿಸುತ್ತಿದೆ. ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯಬೇಕು ಎಂಬ ಮಾತಿನ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅಂತ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಹೌದು, ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್‌ನ ಬ್ಯಾನ್ ಮಾಡಬಹುದು. RSS ಅವರನ್ನ ಎರಡು ಬಾರಿ ಬ್ಯಾನ್ ಮಾಡಿದ್ವಿ, ನಾವು ಬ್ಯಾನ್ ತೆಗೆದಿದ್ದೇ ತಪ್ಪಾಯ್ತು ಅಂತ ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದ್ದಾರೆ. ಜ್ಯಾತ್ಯಾತೀತ ಇರಬಹುದು, ಸಮಾನತೆ ಇರಬಹುದು, ಸಮನಾವಾದ ಅವಕಾಶಗಳು ಇರಬಹುದು. ಅವರಿಗೆ (ಆರ್‌ಎಸ್‌ಎಸ್) ಅಲರ್ಜಿ ಇದೆ. ಅದು ಇವಾಗಿಂದ ಅಲ್ಲ. ಆ ಸಂಸ್ಥೆ ಹುಟ್ಟಿದಾಗಿನಿಂದಲೂ ಅಲರ್ಜಿ ಇದೆ. ಸಮಾನತೆ ಬಗ್ಗೆ ಅಲರ್ಜಿ ಇದೆ. ಆರ್ಥಿಕ ಸಮಾನತೆ ಬಗ್ಗೆ ಅಲರ್ಜಿ ಇದೆ. ಅದೆಲ್ಲ ಹೊಸದಲ್ಲ. ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾವು ಆರ್‌ಎಸ್‌ಎಸ್ ತತ್ವ ಸಿದ್ಧಾಂತವನ್ನು ಮುಂಚೆಯಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇವೆ. ಮುಂದೇನೂ ವಿರೋಧ ಮಾಡುತ್ತೇವೆ. ಈಗಾಗಲೇ ನಾವು ಹೇಳಿದ್ದೇನೆ. ಈ ಹಿಂದೆ ನಾವು ಆರ್‌ಎಸ್‌ಎಸ್‌ನ ಬ್ಯಾನ್ ಮಾಡಲಾಗಿತ್ತು. ಆ ಬ್ಯಾನ್ ತೆರವುಗೊಳಿಸಿದ್ದೇ ನಮ್ಮಿಂದ ತಪ್ಪಾಗಿದೆ. ಬ್ಯಾನ್ ಮಾಡಿದಾಗಲೆಲ್ಲ ಅವರೇ ಕೈಕಾಲು ಹಿಡಿದುಕೊಂಡು ಬಂದಿದ್ದರು. ಆಗ ದೇಶದ್ರೋಹ ಚಟುವಟಿಕೆ ಮಾಡಲ್ಲ ಅಂತಾ ಬಂದಿದ್ದರು. ಅದಕ್ಕೆಲ್ಲ ದಾಖಲೆಗಳು ಇವೆ. ಮುಂದೆ ನೋಡೋಣ. ಮುಂದೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಾಗ ನೋಡೋಣ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಂಘ ಪರಿವಾರ ಬ್ಯಾನ್ ಮಾಡಬೇಕು ಎಂಬ ಮಾತಿಗೆ ಬಿಜೆಪಿಯ ಘಟಾನುಘಟಿ ನಾಯಕರು ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ. ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.
ಶತಮಾನ ಪೂರೈಸಿರುವ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ಈ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ. ಆರ್‌ಎಸ್‌ಎಸ್ ಸಂಘಟನೆ ಮಹಾನ್ ವೃಕ್ಷ, ಈ ವೃಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತೇವೆಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ರಾಜಕೀಯ ಶಕ್ತಿಗಳು ವ್ಯರ್ಥ ಪ್ರಲಾಪ ಮಾಡುತ್ತಲೇ ಇವೆ.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮಾತಿರಲಿ, ಭವಿಷ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಯುತ್ತದೆಯೇ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ತಲೆಕೆಡಿಸಿಕೊಳ್ಳಲಿ. ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎಂಬ ಮಾತನ್ನು ಸಚಿವ ಪ್ರಿಯಾಂಕ್ ಖರ್ಗೆಗೆ ನೆನಪಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.












Click it and Unblock the Notifications