ಮಾ. 16ರಂದು ಡಿಕೆ ರವಿ ಅವರು ಯಾರನ್ನೂ ಭೇಟಿ ಮಾಡಿಲ್ಲ
ಬೆಂಗಳೂರು, ಜೂ. 10 : ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ರವಿ ಅವರ ಆಪ್ತ ಸಹಾಯಕ ಮತ್ತು ಗನ್ ಮ್ಯಾನ್ ವಿಚಾರಣೆ ನಡೆಸಿದ್ದಾರೆ. ಡಿಕೆ ರವಿ ಅವರು ಕಚೇರಿಯಿಂದ ಮನೆಗೆ ಬಂದ ಮೇಲೆ ಸಾವನ್ನಪ್ಪಿದ್ದರು. ಆದ್ದರಿಂದ ಇಬ್ಬರ ಹೇಳಿಕೆಗಳು ತನಿಖೆಗೆ ಮುಖ್ಯವಾಗಿವೆ.
ಸಿಬಿಐ ಅಧಿಕಾರಿಗಳು ಡಿಕೆ ರವಿ ಅವರ ಆಪ್ತ ಸಹಾಯಕನ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ. ರವಿ ಅವರು ಸಾವನ್ನಪ್ಪುವ ದಿನ ಕಚೇರಿಯಲ್ಲಿ ಏನಾಯ್ತು? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಂದು ಕಚೇರಿಗೆ ಬಂದ ರವಿ ಅವರು ಕೆಲವು ಹೊತ್ತು ಇದ್ದು, ಅಲ್ಲಿಂದ ಮನಗೆ ಹೋದರು ಎಂದು ಆಪ್ತ ಸಹಾಯಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. [ಡಿಕೆ ರವಿ ಸಾವು: ಸಿಬಿಐ ತನಿಖೆಯ ಮೊದಲ ಪುಟ!]

ಯಾರನ್ನೂ ಭೇಟಿಯಾಗಿಲ್ಲ : 2015ರ ಮಾರ್ಚ್ 16ರಂದು ರವಿ ಅವರು ಕಚೇರಿಯಲ್ಲಿ ಯಾರನ್ನೂ ಭೇಟಿಯಾಗಿಲ್ಲ. ಅಂದು ಯಾರ ಭೇಟಿಗೂ ಸಮಯ ಸಹ ನಿಗದಿಯಾಗಿರಲಿಲ್ಲ. ಕಚೇರಿಗೆ ಬಂದ ಅವರು ಕೆಲವು ಕೆಲಸಗಳನ್ನು ಮುಗಿಸಿ ತಕ್ಷಣ ಮನೆಗೆ ಮರಳಿದರು ಎಂದು ಆಪ್ತ ಸಹಾಯಕ ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ. [ಎಲ್ಲಿಯ ಅಕ್ರಮ ಲಾಟರಿ ದಂಧೆ, ಎಲ್ಲಿಯ ಡಿಕೆ ರವಿ ಸಾವು?]
ರವಿ ಅವರ ಗನ್ ಮ್ಯಾನ್ ಅವರು ರವಿ ಅವರು ಸಾವನ್ನಪ್ಪುವ ದಿನ ಯಾರನ್ನು ಭೇಟಿಯಾಗಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ರವಿ ಅವರು ಕಾರಿನಲ್ಲಿ ಮನೆಗೆ ಹೋಗುವಾಗ ಅವರನ್ನು ಯಾರೂ ಹಿಂಬಾಲಿಸಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ. [ಡಿಕೆ ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]
ಸಿಬಿಐ ಅಧಿಕಾರಿಗಳು ಎಲ್ಲಾ ದೃಷ್ಟಿಕೋನಗಳಲ್ಲಿಯೂ ರವಿ ಅವರ ಸಾವಿನ ತನಿಖೆಯನ್ನು ನಡೆಸುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಗೆ ಬರುವ ಮುನ್ನ ರವಿ ಅವರು 2013ರ ಆಗಸ್ಟ್ 10ರಿಂದ 2014ರ ಅಕ್ಟೋಬರ್ 29ರ ತನಕ ಕೋಲಾರದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು.
ಸಿಬಿಐ ಅಧಿಕಾರಿಗಳು ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿ ಅವರೊಂದಿಗೆ ಕೆಲಸ ಮಾಡಿದ್ದ ಸಿಬ್ಬಂದಿಗಳನ್ನು ವಿಚಾರಣೆ ಮಾಡಿದ್ದಾರೆ. ಕೋಲಾರದಲ್ಲಿ ಮರಳು ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದ ರವಿ ಅವರಿಗೆ ಜೀವ ಬೆದರಿಕೆ ಇತ್ತೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ರವಿ ಅವರ ಸಾವಿಗೆ ವೈಯಕ್ತಿಕ ಕಾರಣವಿತ್ತೇ?, ಅವರಿಗೆ ಜೀವ ಬೆದರಿಕೆ ಇತ್ತೇ?, ಆಸ್ತಿ ವಿಚಾರದಲ್ಲಿ ಉಂಟಾದ ನಷ್ಟದಿಂದ ಅವರು ಆತ್ಮಹತ್ಯೆ ಮಾಡಿಕೊಂಡರೇ? ಎಂದು ಸಿಬಿಐ ಅಧಿಕಾರಿಗಳು ಮೂರು ಹಂತದಲ್ಲಿ ವಿಚಾರಣೆ ಮಾಡಿದ್ದಾರೆ. ಅಂದಹಾಗೆ ಇಂದು ಡಿಕೆ ರವಿ ಹುಟ್ಟು ಹಬ್ಬ.












Click it and Unblock the Notifications