ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು; ರಾಜೀನಾಮೆಗೆ ಸಿದ್ದ ಎಂದ ಚಲುವರಾಯಸ್ವಾಮಿ
ಮಂಡ್ಯ, ಜೂನ್ 07: ಮಂಡ್ಯ ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಸೋತರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದನ್ನ ಜೆಡಿಎಸ್ ಟ್ರೋಲ್ ಮಾಡಿಕೊಳ್ಳಲಿ. ಪಕ್ಷ ಕೇಳಿದ್ರೆ ರಾಜೀನಾಮೆ ಕೊಡ್ತಿನಿ, ಸೋಲಿನಿಂದ ನನಗೂ ಮುಜುಗರ ಆಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಇಷ್ಟು ಕೆಲಸ ಮಾಡಿದರೂ ಸೋಲಾದ್ರೆ ಮುಜುಗರ ಆಗಲ್ವಾ, ಸುಮಲತಾ ಅವರು ಬಹಳ ಬುದ್ಧಿವಂತರಿದ್ದಾರೆ ಅವರ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ, ಅವರ ಸಲಹೆಯನ್ನ ಕೇಳೋಣ ಎಂದರು. ಜೆಡಿಎಸ್ ಹಾಗೂ ಬಿಜೆಪಿಯವರು ಗೆಲುವಿನ ಹಬ್ಬ ಆಚರಣೆ ಮಾಡಲಿ, ನಾನು ಪ್ರತಿಕ್ರಿಯಿಸಲು ಹೋಗಲ್ಲ, ಕಾವೇರಿ ನೀರಿನ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಹೇಗೆ ಪ್ರಯತ್ನ ಮಾಡ್ತಾರೆ ನೋಡೋಣ, ಇನ್ನೂ ಗೆದ್ದು ಮೂರ್ನಾಲ್ಕು ದಿನಗಳಾಗಿಲ್ಲ ಎಂದರು.

ಈಗ ಗೆಲ್ಲಿಸಿರೋ ಎನ್‌ಡಿಎ ಅಭ್ಯರ್ಥಿ ಮೇಲೆ ಜಿಲ್ಲೆಯ ಜನರು ಬಹಳ ನಿರೀಕ್ಷೆ ಇಟ್ಟಿದ್ದರೇನೋ, ನಮ್ಮಲ್ಲಿ ಏನು ತಪ್ಪು ಕಂಡುಹಿಡಿದಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಒಂದು ಸೈಡ್ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಹೇಳಿದರು.
ಸೋಲಿನ ಪರಾಮರ್ಶೆ ಮಾಡಲು ಹೋಗಲ್ಲ. ಕಾಂಗ್ರೆಸ್ ಪರ ಮತ ಹಾಕದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಕೊಡಲ್ಲ ಎಂದು ಎಲ್ಲೂ ಹೇಳಿಲ್ಲ. ಒಕ್ಕಲಿಗ ಸಮುದಾಯ ನಮ್ಮ ಜೊತೆಗೆ ನಿಂತಿದ್ಯಾ ಇಲ್ಲವಾ ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು. ಚುನಾವಣೆಯಲ್ಲಿ ಸೋಲು ಎಲ್ಲರಿಗೂ ಆಗಿದೆ. 2019ರಲ್ಲಿ ಅವರದ್ದೇ ಸರ್ಕಾರ ಇದ್ದಾಗಲೂ ಅವರ ಮಗ ಸೋತಿಲ್ವಾ? ಅದೇ ರೀತಿ ಈಗ ನಾವು ಸೋತಿದ್ದೀವಿ ಎಂದರು.
ಮಂಡ್ಯ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಾನೂ ಸೇರಿದಂತೆ ಎಲ್ಲ ಶಾಸಕರು ಬಹಳ ನಿರೀಕ್ಷೆ ಇಟ್ಟಿದ್ದೋ, ಅದಕ್ಕೆ ಕಾರಣವೂ ಇತ್ತು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದ್ದು, ಜನರ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದರು. 2018ರ ಸೋಲಿನ ನಂತರ ನಾವು ಎಲ್ಲಾ ಚುನಾವಣೆಗಳಲ್ಲಿ ಗೆಲುವು ಕಂಡಿದ್ದೆವು. ಚುನಾವಣೆಗೆ ಸ್ಪಂದಿಸಿದ ಎಲ್ಲ ಕಾರ್ಯಕರ್ತರು, ಶಾಸಕರು, ಕಾಂಗ್ರೆಸ್ ಪರ ಲಕ್ಷ ಮತ ನೀಡಿದ 5 ಲಕ್ಷ ಮತದಾರರಿಗೂ ಕೃತಜ್ಞತೆಗಳು.
ಗ್ಯಾರಂಟಿ ಯೋಜನೆಗಳ ಮೂಲಕ ನಾವು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ನಮ್ಮ ಸರ್ಕಾರ ಬಂದ ನಂತರ ಕೃಷಿ ವಿವಿ ಸ್ಥಾಪನೆ, ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸಲು ಘೋಷಣೆ ಮಾಡಿದ್ದೆವು. ಹೀಗಾಗಿ ನಾವು ಚುನಾವಣೆಯಲ್ಲಿ ನಿರೀಕ್ಷೆ ಮಾಡಿದ್ದೆವು. ದೇಶದ ಒಟ್ಟಾರೆ ಫಲಿತಾಂಶ ತೆಗೆದುಕೊಂಡರೆ ನಮಗೆ ಆಶಾದಾಯಕವಾಗಿದೆ ಎಂದು ತಿಳಿಸಿದರು.
ಚುನಾವಣೆ ಎಂದ ಮೇಲೆ ಎಲ್ಲ ರೀತಿಯಲ್ಲೂ ಎದುರಿಸಬೇಕಾಗುತ್ತದೆ. ಜಿಲ್ಲೆಯ ಜನರ ತೀರ್ಪಿನ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಅವರ ತೀರ್ಪಿಗೆ ತಲೆ ಬಾಗಬೇಕು ಎಂದು ಮೊದಲೇ ಹೇಳಿದ್ದೀನಿ, ಆ ಬಗ್ಗೆ ವಿಮರ್ಶೆ ಮಾಡಲು ನನಗೆ ಆಸಕ್ತಿ ಇಲ್ಲ, ಒಂದು ಹಂತದಲ್ಲಿದ್ದರೆ ಮಾತ್ರ ವಿಮರ್ಶೆ ಮಾಡಬಹುದು, ವಿಮರ್ಶೆ ಮಾಡಕ್ಕಾಗದಷ್ಟು ವ್ಯತ್ಯಾಸವಾಗಿದೆ ಎಂದರು.












Click it and Unblock the Notifications