ಚನ್ನಪಟ್ಟಣ ಫಲಿತಾಂಶ ಬಂದ ಮೇಲೆ ಉತ್ತರ ಕೊಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು, ಅಕ್ಟೋಬರ್ 29: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನನ್ನ ಹಾಗೂ ನನ್ನ ತಂದೆ ದೇವೆಗೌಡರ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಅವಹೇಳನಕಾರಿ ಟೀಕೆಗಳಿಗೆ ನಾನು ಈಗ ಉತ್ತರ ಕೊಡುವುದಿಲ್ಲ. ಚುನಾವಣೆ ನಡೆದು ಫಲಿತಾಂಶ ಹೊರಬಂದ ಮೇಲೆ ಉತ್ತರಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಸಚಿವರು ಮಾತನಾಡಿದ ಅವರು, ಚುನಾವಣೆ ಬಂದ ಮೇಲೆ ನಮ್ಮ ಕುಟುಂಬದ ಮೇಲೆ ಕಾಂಗ್ರೆಸ್ ನಾಯಕರು ಅತ್ಯಂತ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಈ ದೇಶಕ್ಕೆ ಪ್ರಧಾನಿ ಆಗಿದ್ದ ದೇವೇಗೌಡರು ವೀಲ್ ಚೇರ್ ನಲ್ಲಿ, ಆಂಬ್ಯುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು ಹೀನಾಯವಾಗಿ ಟೀಕೆ ಮಾಡುತ್ತಿದ್ದಾರೆ. ಅವರ ಸಾವನ್ನು ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಎಲ್ಲಾ ಹೇಳಿಕೆಗಳನ್ನು ತೆಗೆದಿಟ್ಟುಕೊಳ್ಳುತ್ತೇನೆ. ಫಲಿತಾಂಶ ಬಂದ ನಂತರ ಮಾತನಾಡುತ್ತೇನೆ ಎಂದು ಅವರು ಕಿಡಿಕಾರಿದರು.

ನನ್ನ ಮೇಲೆಯೂ ಹಲವಾರು ಆಪಾದನೆಗಳನ್ನು ವೈಯಕ್ತಿಕವಾಗಿ ನೆಲೆಗಟ್ಟಿನಲ್ಲಿ ಮಾಡಿದ್ದಾರೆ. ಯಾವ ಟೀಕೆಗೂ ನಾನು ಉತ್ತರ ಕೊಡಲಾರೆ. ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತೇನೆ. 13ನೇ ತಾರೀಖು ಚುನಾವಣೆ ನಡೆಯುತ್ತದೆ, 23 ರಂದು ಫಲಿತಾಂಶ ಬರುತ್ತದೆ. ಆಮೇಲೆ ಈ ಎಲ್ಲಾ ಹೇಳಿಕೆಗಳಿಗೆ ಉತ್ತರ ಕೊಡುತ್ತೇನೆ ಎಂದು ಅವರು ಗುಡುಗಿದರು.
ದೇವೇಗೌಡ ಆರೋಗ್ಯದಿಂದ ಹಿಡಿದು ನಮ್ಮ ಪಕ್ಷದ ಹಲವಾರು ನಿರ್ಧಾರಗಳ ಬಗ್ಗೆ, ನನ್ನ ಬಗ್ಗೆ, ನಮ್ಮ ಕುಟುಂಬದ ಬಗ್ಗೆ ಕಾಂಗ್ರೆಸ್ ನಾಯಕರು ಹೇಯವಾಗಿ ಮಾತನಾಡುತ್ತಿದ್ದಾರೆ. ಇವರಿಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ. ಅವರು ಒಬ್ಬರೇ ಒಕ್ಕಲಿಗರಾ? ನಾವೂ ಒಕ್ಕಲಿಗರೇ ಎಂದು ಚರ್ಚೆ ಮಾಡುತ್ತಿದ್ದಾರೆ. ಎಲ್ಲವನ್ನೂ ನೋಟ್ ಮಾಡಿಕೊಂಡಿದ್ದೇನೆ. ಫಲಿತಾಂಶದ ನಂತರ ಎಲ್ಲದಕ್ಕೂ ಉತ್ತರ ಕೋಡ್ತೀನಿ ಎಂದು ಅವರು ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ, ಮೀಸಲಾತಿ ವಿಷಯಗಳ ಬಗ್ಗೆ ಮಾತಾಡುತ್ತಿದ್ದಾರೆ. ಕಾಂತರಾಜು, ಜಯಪ್ರಕಾಶ್ ಹೆಗಡೆ ವರದಿ ಇಟ್ಟುಕೊಂಡು ದಿನವೂ ಗಂಧದ ಕಡ್ಡಿ ಹಚ್ಚಿ ದೀಪ ಬೆಳಗುತ್ತಿದ್ದಾರೆಯೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಒಳ ಮೀಸಲಾತಿಯ ಬಗ್ಗೆ ಸರ್ಕಾರ ಆಯೋಗ ರಚನೆ ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಈ ಸರ್ಕಾರದಿಂದ ಜನರ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ದೊರೆಯುವುದಿಲ್ಲ. ಸಂಘ ಸಂಸ್ಥೆಗಳು ಒತ್ತಾಯ ಮಾಡುತ್ತಿವೆ. ಈ ಸರ್ಕಾರದಲ್ಲಿ, ಅದರಲ್ಲೂ ಸಿದ್ದರಾಮಯ್ಯ ಸರ್ಕಾರ ನಾಯಕತ್ವದಲ್ಲಿ ಜಾರಿಗೆ ಬರಲ್ಲ. ಮೀಸಲಾತಿ ಒಂದು ಭಾಗ.. ಇರಲಿ, ಕಾಂತರಾಜು ವರದಿ.. ಕಾಂತರಾಜು ವರದಿ ಎಂದು ಭಜನೆ ಮಾಡಿದ್ದರು ಇದೇ ಸಿದ್ದರಾಮಯ್ಯನವರು, ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ವರದಿ ಸ್ವೀಕಾರ ಮಾಡಿಲ್ಲ ಎಂದು ಜಾಗಟೆ ಹೊಡೆದರು. ಇವರು ಅಧಿಕಾರಕ್ಕೆ ಬಂದು ಎಷ್ಟು ವರ್ಷ ಆಯಿತು. ಒಂದೂವರೆ ವರ್ಷವಾಯಿತು. ಒಂದೂವರೆ ವರ್ಷದಿಂದ ವರದಿಗಳನ್ನು ಇಟ್ಟುಕೊಂಡು ಗಂಧದ ಕಡ್ಡಿ ಹಚ್ಚಿ ದಿನ ದೀಪ ಬೆಳಗ್ತಾ ಇದ್ದಾರಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಯಾತಕ್ಕೆ ಇವರು ವರದಿಗಳನ್ನು ಬಿಡುಗಡೆ ಮಾಡೋಕೆ ಆಗಿಲ್ಲ? ಕಾಂತರಾಜು ವರದಿ, ಅದರ ಜತೆಗೆ ಜಯಪ್ರಕಾಶ್ ಹೆಗಡೆ ಅವರು ಕೊಟ್ಟ ವರದಿ.., ಎರಡನ್ನೂ ಸ್ವೀಕಾರ ಮಾಡಿ ಎಷ್ಟು ದಿನ ಆಯಿತು? ಅದನ್ನು ಇಟ್ಟುಕೊಂಡು ಏನು ಮಾಡುತ್ತಿದ್ದೀರಿ? ಎರಡು ವರದಿಗಳನ್ನು ಕೊಟ್ಟವರು ಬಹಳ ದೊಡ್ಡ ಮೇಧಾವಿಗಳು ಅಲ್ಲವೇ? ಇನ್ನೂ ಯಾಕೆ ಬಿಡುಗಡೆ ಮಾಡಿಲ್ಲ? ನನ್ನ ಮೇಲೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ, ಈಗ ಅವರೇ ಎರಡೂ ವರದಿಗಳನ್ನು ತೆಗೆದುಕೊಂಡು ಇಟ್ಟುಕೊಂಡಿದ್ದಾರೆ.
ಇಗೋ ಕ್ಯಾಬಿನೆಟ್ ಗೆ ತರುತ್ತೇವೆ, ಅಗೋ ಕ್ಯಾಬಿನೆಟ್ ಗೆ ತರುತ್ತೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇನ್ನು ಉಪ ಸಮಿತಿ, ಆಯೋಗ ಎಂದು ಚರ್ಚೆ ನಡೆಯುತ್ತಿದೆ. ಎಷ್ಟು ದಿನ ಸಬೂಬು ಹೇಳಿಕೊಂಡು ತಿರುಗುತ್ತಿರಿ? ಉಪ ಚುನಾವಣೆ ಈಗ ಘೋಷಣೆ ಆಗಿದೆ, ಲೋಕಸಭೆ ಚುನಾವಣೆಗೆ ಮೊದಲೇ ವರದಿ ಸ್ವೀಕಾರ ಮಾಡಿದ್ದೀರಿ ಅಲ್ಲವೇ? ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications