ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಹೇಳಿದ್ದೇನು?
ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಕುಡಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಮೈಸೂರು,ಮಾರ್ಚ್21: ಜೆಡಿಎಸ್ ಭದ್ರಕೋಟೆಯವನ್ನ ಛಿದ್ರಗೊಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ತಯಾರಿ ನಡೆಸಿದ್ದು, ಈ ಬಾರಿ ಜೆಡಿಎಸ್ ಸ್ಥಾನಗಳನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಈ ಕುರಿತು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌ಗೆ ಉತ್ತಮವಾದ ವಾತಾವರಣ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಜನರು ಪಾಠ ಕಲಿಸಲಿದ್ದಾರೆ. ಯಾವುದೇ ಕಾರಣಕ್ಕೂ ಎರಡು ಕ್ಷೇತ್ರದಲ್ಲಿ ನಾನು ಎಲೆಕ್ಷನ್‌ಗೆ ನಿಲ್ಲಲ್ಲ. ಕೇವಲ ಚನ್ನಪಟ್ಟಣ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡ್ತೇನೆ ಅಂತ ಸ್ಪಷ್ಟಪಡಿಸಿದ್ರು.

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ ಎಂಟ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚಿತ್ರ ನಟ, ನಟಿಯರಿಗೆ ಕ್ಷೇತ್ರ ಬೇಕಿಲ್ಲ. ಸಹಜವಾಗಿ ಜನಪ್ರಿಯತೆ ಇರುತ್ತೆ. ನನ್ನ ಸಹೋದರಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಾರೆ ಅಂತಿದ್ದಾರೆ. ಮೂರಲ್ಲ, ಮೂವತ್ತು ಕ್ಷೇತ್ರದಲ್ಲಿ ಬೇಕಾದರೂ ಪ್ರಸ್ತಾಪ ಮಾಡಬಹುದು. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಜನರಿಗೆ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಬಗ್ಗೆ ಟಾಂಗ್ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅದು ಗ್ಯಾರಂಟಿ ಕಾರ್ಡ್ ಅಲ್ಲ ಡೂಪ್ಲಿಕೇಟ್ ಕಾರ್ಡ್ ಎಂದು ವ್ಯಂಗ್ಯವಾಡಿದರು. ಆ ಗ್ಯಾರಂಟಿ ಕಾರ್ಡ್ ಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಹಿ ಬೇರೆ ಹಾಕಿದ್ದಾರೆ. ಅವರ ಈ ಎಲ್ಲಾ ಯೋಜನೆಗಳಿಗೆ 25 ಸಾವಿರ ಕೋಟಿ ಬೇಕು. ಆ ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದರು.

ಪಂಚರತ್ನ ಯೋಜನೆ ಜಾರಿಗೆ 2.50 ಲಕ್ಷ ಕೋಟಿ ರೂ. ಹಣ ಬೇಕು. ಈ ಹಣ ಹೊಂದಿಸುವುದು ನನಗೆ ಕಷ್ಟವಿಲ್ಲ. ಸಾಲ ಮನ್ನಾಕ್ಕೆ 25 ಸಾವಿರ ಕೋಟಿ ರೂ. ಹೊಂದಿಸಿದ ದಾಖಲೆ ನನ್ನದು. ನನ್ನ ಗುರಿ, ಕನಸು ಸಾಕಾರಗೊಳಿಸಲು ಅವಕಾಶ ಇದೆ. ಆದರೆ, ಕಾಂಗ್ರೆಸ್ ಗ್ಯಾರಂಟಿ ಹಾಗಿಲ್ಲ, ಅವರು ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಆದರೂ ಕಾಂಗ್ರೆಸ್ ನಾಯಕರು ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಯುದ್ಧ ನಡೆಯುತ್ತಿದೆ. ಅವರಲ್ಲಿ ಅಭಿವೃದ್ಧಿ ವಿಷಯ ಇಲ್ಲ. ಪರಸ್ಪರ ಟೀಕೆ ಮಾಡಿಕೊಳ್ಳುವುದರಲ್ಲಿಯೇ ಅವರು ಕಾಲ ವೃಥಾ ಮಾಡುತ್ತಿದ್ದಾರೆ. ಇದಕ್ಕೆ ಹೊರತಾಗಿ ಅಭಿವೃದ್ಧಿ ವಿಷಯ ಇಟ್ಟುಕೊಂಡು ನಾವು ಜನರ ಬಳಿಗೆ ಹೋಗುತ್ತಿದ್ದೇವೆ. ನಾನು ದಿನಕ್ಕೆ 100 ಕಿ.ಮೀ. ಪ್ರವಾಸ ಮಾಡುತ್ತಿದ್ದೇನೆ. ನನ್ನ ಯೋಜನೆ, ಕಾರ್ಯಕ್ರಮಗಳಿಗೆ ಒಂದು ಅವಕಾಶ ಕೊಡಿ ಅಂತ ಜನರನ್ನು ಕೇಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಬಹುಮತದ ಸರಕಾರ ಬಾರದೆ ಇದ್ದರೂ ನಾನು ಎರಡು ಸಲ ಮುಖ್ಯಮಂತ್ರಿಯಾದೆ. 37 ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ ಭಾಗ್ಯಗಳನ್ನು ಮುಂದುವರಿಸಿದೆ. ಇದರ ನಡುವೆಯೂ ಸಾಲ ಮನ್ನಾ ಮಾಡಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆಗೆ ಫಲಾನುಭವಿಗಳನ್ನು ಕರೆದುಕೊಂಡು ಬರುತ್ತಿದ್ದಾರೆ. ಸರಕಾರಿ ಅಧಿಕಾರಿಗಳ ಮೂಲಕ ಜನರನ್ನು ಸಭೆಗಳಿಗೆ ಕರೆಸುತ್ತಿದ್ದಾರೆ. ಬಿಜೆಪಿಯವರು ಈಗಲೂ ರೈತರ ಸಾಲ ಮನ್ನಾ ಯೋಜನೆಗೆ 1800 ಕೋಟಿ ರೂ. ಕೊಟ್ಟಿಲ್ಲ. ಬದಲಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಡ್ಯುಪ್ಲಿಕೇಟ್ ಕಾರ್ಡ್. ಗೃಹ ಲಕ್ಷ್ಮಿ ಕಾರ್ಡ್‌ಗೆ 25 ಸಾವಿರ ಕೋಟಿ ರೂ. ಬೇಕು.
ಆದರೆ ನನ್ನ ಕಾರ್ಯಕ್ರಮ ಸರ್ಕಾರದ ಆದಾಯ ಹೆಚ್ಚಿಸುವ ಕಾರ್ಯಕ್ರಮ. ಒಂದು ಅವಧಿಯ ಸರಕಾರ ಕೊಡಿ ಅಂತ ಕೇಳುತ್ತಿದ್ದೇನೆ ಎಂದು ಅವರು ತಿಳಿಸಿದರು.
ಸರ್ಕಾರದ ಆಸ್ತಿಯನ್ನ ದ್ವಿಗುಣ ಮಾಡುವ ಯೋಜನೆ ನಮ್ಮದಾಗಿದೆ. ಗ್ಯಾರೆಂಟಿ ಕಾರ್ಡ್ ಬಗ್ಗೆ ಸುರ್ಜೆವಾಲ ಬಿಜೆಪಿ ಪಡೆಯುವ 40% ಹಣವನ್ನ ಹಾಕುತ್ತೇವೆ ಎನ್ನುತ್ತಾರೆ. 5 ವರ್ಷದ ಆಡಳಿತಕ್ಕೆ ನಮ್ಮ ಪಕ್ಷಕ್ಕೆ ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತೇನೆ. ಬಿಜೆಪಿ, ಕಾಂಗ್ರೆಸ್ ನವರು ಹೇಳುತ್ತಿರುವ ಅಂತೇ ಕಂತೆಗಳು ಮೇ ನಂತರ ಗೊತ್ತಾಗಲಿದೆ ಎಂದು ಕಿಡಿಕಾರಿದರು.












Click it and Unblock the Notifications