ಮೋದಿ ವಯಸ್ಸಿನಷ್ಟೇ ನನ್ನ ವಯಸ್ಸು; ಮೋದಿಗೆ ಟಿಕೆಟ್ ಕೊಟ್ರೆ ನಮ್ಗೂ ಟಿಕೆಟ್: ಪರೋಕ್ಷ ಬೇಡಿಕೆ ಇಟ್ಟ ಕರಡಿ ಸಂಗಣ್ಣ
ಕೊಪ್ಪಳ, ಜೂನ್ 17: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯ 13 ಜನ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಚರ್ಚೆ ಕಲಮ ಪಾಳಯದಲ್ಲಿ ಜೋರಾಗಿದ್ದು, ಹಲವು ಜನ ಹಿರಿಯ ಸಂಸದರು ಟಿಕೆಟ್ ಗಾಗಿ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ರೆ, ಇನ್ನೂ ಕೆಲವು ಸಂಸದರು ಪಕ್ಷದ ನಾಯಕರ ವಿರುದ್ದ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪ್ರಧಾನಿ ವಯಸ್ಸಿನಷ್ಟೇ ನಾವೂ ಇದ್ದೇವೆ, ಮೋದಿಗೆ ಟಿಕೆಟ್ ಕೊಟ್ರೆ ನಮ್ಗೂ ಟಿಕೆಟ್ ಕೊಡಿ ಎಂದು ಸಂಸದ ಕರಡಿ ಸಂಗಣ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ ಪಕ್ಷ ಟಿಕೆಟ್ ಕೊಟ್ಟರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಯಸ್ಸಿನ ಆಧಾರದ ಮೇಲೆ ಟಿಕೆಟ್ ಹಂಚಿಕೆ ವಿಚಾರ ಕೇವಲ ಊಹಾಪೋಹ. ರಾಜ್ಯದಲ್ಲಿ ಹನ್ನೆರಡು ಜನರಿಗೆ ಟಿಕೆಟ್ ಇಲ್ಲ ಎಂಬ ವದಂತಿ ಹಿನ್ನೆಲೆ, ಟಿಕೆಟ್ ಕೈ ತಪ್ಪುವ ಕುರಿತು ವರಿಷ್ಠರು ನಮ್ಮ ಜತೆ ಚರ್ಚೆ ಮಾಡಿಲ್ಲ. ಹಾಲಿ ಸಂಸದರಿಗೆ ಟಿಕೆಟ್ ಇಲ್ಲವೆಂದು ಹೇಳಿಲ್ಲ. ಸುಮ್ಮನೆ ಸುದ್ದಿ ಹರಿದಾಡುತ್ತಿದೆ ಎಂದು ಹೇಳಿದ್ದಾರೆ.
ಇನ್ನೂ ಟಿಕೆಟ್ ವಿಚಾರದ ಬಗ್ಗೆ ನಾವು ಏನೂ ಮಾತಾಡಲ್ಲ. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇವೆ. ಇಲ್ಲವೆ ಬೇರೆಯವರಿಗೆ ಟಿಕೆಟ್ ನೀಡಿದರೆ ಅವರಿಗೆ ಬೆಂಬಲಿಸುತ್ತೇವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಟಿಕೆಟ್ ಸಿಗುವ ನಂಬಿಕೆಯಿದೆ ಎಂದು ಸಂಗಣ್ಣ ಕರಡಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ವಯಸ್ಸಿನ ವಿಚಾರವಾಗಿ ಚಿತ್ರದುರ್ಗ ಎಂಎಲ್ಎ ತಿಪ್ಪಾರೆಡ್ಡಿಯವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ 93 ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಯಸ್ಸಿನಷ್ಟೇ ನಮ್ಮ ವಯಸ್ಸು. ಎಲ್ಲಾ ಸುಮ್ಮನೆ ಊಹಾಪೋಹಗಳು. ಹರಿದಾಡುವ ಸುದ್ದಿಗಳನ್ನು ನಂಬಲಾಗುವುದಿಲ್ಲ. ಇದ್ಯಾವುದು ಪಾರ್ಟಿ ನಿರ್ಧಾರಗಳಲ್ಲ. ನಮ್ಮ ರಾಜ್ಯದ ವರಿಷ್ಠರು ನಮಗೆಲ್ಲ ಕರೆ ಮಾಡಿದ್ದಾರೆ.
ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಟಿಕೆಟ್ ಸಿಗುವ ನಂಬಿಕೆಯಿದೆ. ಪಕ್ಷ ಚುನಾವಣೆಯಲ್ಲಿ ಏನೇ ನಿರ್ಧಾರ ತಗೆದುಕೊಂಡರೂ ಭದ್ದನಾಗಿರುತ್ತೇನೆ. ಮುಂದಿನದು ಹೇಳೋಕೆ ನಾನು ಜ್ಯೋತಿಷಿ ಅಲ್ಲ, ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡುತ್ತೇನೆ ಎಂದು ಸಂಸದ ಸಂಗಣ್ಣ ಹೇಳಿದ್ದಾರೆ.












Click it and Unblock the Notifications