ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿರುತ್ತೇನೆ: ಸಿಎಂ ಸಿದ್ದರಾಮಯ್ಯ
ವರುಣಾ, ಜೂನ್ 10: ಇದು ನನ್ನ ಕೊನೆಯ ಚುನಾವಣೆ. ಆದರೆ ನಾನು ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದ ಅವರು ಕ್ಷೇತ್ರದ ಮತದಾರರಿಗೆ ಹೋಳಿಗೆ ಊಟ ಹಾಕಿಸಿ ಧನ್ಯವಾದ ಹೇಳಿದರು.

ಬಳಿಕ ಮಾತನಾಡಿ, 2013 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ನುಡಿದಂತೆ ನಡೆದು ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ಎಲ್ಲಾ ವರ್ಗಗಳ ಪರವಾಗಿ ಕಲ್ಯಾಣ ಕಾರ್ಯಕ್ರಮ ರೂಪಿಸಿದ್ದೆ. ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾದ ಕಲ್ಯಾಣ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನಾಡಿಗೆ ನೀಡಲಿದೆ ಎಂದು ಹೇಳಿದರು.
ಭ್ರಷ್ಟಚಾರ, ದುರಾಡಳಿತ, ಅಭಿವೃದ್ಧಿಹೀನ ಮತ್ತು ಸಮಾಜವನ್ನು ಒಡೆಯುವ ದುಷ್ಟ ರಾಜಕಾರಣವನ್ನು ರಾಜ್ಯದ ಜನತೆ ಸೋಲಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ನಾಡಿನ ಜನತೆಗೆ ನಾನು ಕೃತಜ್ಞ. ಬಸವಾದಿ ಶರಣರು ನುಡಿದಂತೆ ನಡೆದಿದ್ದರು. ಅದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು, ನಾನು ಮೊದಲ ಬಾರಿ ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನುಡಿದಂತೆ ನಡೆದಿದ್ದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಕುರ್ಚಿ ಎಂದರೆ ಸುಖದ ಸುಪ್ಪತ್ತಿಗೆ ಅಲ್ಲ, ಜನರ ಬದುಕನ್ನು ಸುಧಾರಿಸಲು ಸಿಗುವ ಅವಕಾಶ ಎಂಬುದು ನನ್ನ ಭಾವನೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗುವುದಿಲ್ಲ, ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ನಾವು ಈಗ ಐದನ್ನೂ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಬಡವರ- ಮಧ್ಯಮ ವರ್ಗದವರ ಪರವಾದ ಯೋಜನೆ ಘೋಷಿಸಿದಾಗ ಪ್ರಧಾನ ಮಂತ್ರಿ ಮೋದಿಯವರು ಜನರಿಗೆ ಅನುಕೂಲ ಮಾಡುವ ನಮ್ಮ ಯೋಜನೆಗೆ ತಮ್ಮ ಸಹಕಾರ ನೀಡಬೇಕಿತ್ತು. ಆದರೆ ಮೋದಿ ಅವರಿಗೆ ಬಡವರ-ಮಧ್ಯಮ ವರ್ಗದವರ ಪ್ರಗತಿ, ಅಭಿವೃದ್ಧಿ ಬೇಕಾಗಿಲ್ಲ. ಅದಕ್ಕೇ ಬಿಜೆಪಿಯವರು ಜನರಲ್ಲಿ ತಮ್ಮ ಸಂಪ್ರದಾಯದಂತೆ ಸುಳ್ಳುಗಳನ್ನು ಎರಚಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಎಲ್ಲಾ ಮಹಿಳೆಯರಿಗೆ ಎಕ್ಸ್ ಪ್ರೆಸ್ ಸೇರಿದಂತೆ ಎಲ್ಲ ಬಸ್ಸುಗಳಲ್ಲಿ ಕರ್ನಾಟಕದೊಳಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ವಿಧಾನ ಸೌಧದಲ್ಲಿ ನನ್ನನ್ನು ಒಳಗೊಂಡಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.












Click it and Unblock the Notifications