ನಮ್ಮಣ್ಣ ಸಿಎಂ ಆಗಲಿ ಅನ್ನೋ ಆಸೆ, ಕುರ್ಚಿ ಬೇಕು ಅಂತ ಸಿದ್ದರಾಮಯ್ಯರನ್ನ ಎಳೆದು ಕೂರಿಸೋಕಾಗುತ್ತಾ?: ಡಿಕೆ ಸುರೇಶ್
ಬೆಂಗಳೂರು, ಮಾರ್ಚ್ 01: ನಮ್ಮಣ್ಣ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ. ಆದರೆ ಅದಕ್ಕೆ ಕಾಲ ಕೂಡಿ ಬರಬೇಕು. ನನಗೆ ಆ ಆಸೆ ಇದೆ ಎಂದು ಈಗಲೂ ಹೇಳುತ್ತೇನೆ. ನಾನು ನನ್ನ ಆಸೆ ಮುಚ್ಚಿಟ್ಟಿಲ್ಲ. ಅದಕ್ಕೂ ಕಾಲ ಬರಬೇಕು. ಈಗ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಕೂತಿದ್ದಾರೆ. ಅವರನ್ನು ಎಳೆದು ಇವರನ್ನು ಕೂರಿಸಬೇಕು. ಅದು ಹೇಗಾಗುತ್ತದೆ ಎಂಧು ಮಾಜಿ ಸಂಸದರಾದ ಡಿ ಕೆ ಸುರೇಶ್ ಅವರು ಹೇಳಿದರು.
ಈ ಕುರಿತು ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಮಾಜಿ ಸಂಸದ ಡಿ ಕೆ ಸುರೇಶ್ ಅವರು, ಸಿದ್ದರಾಮಯ್ಯ ಅವರು ಆ ಸ್ಥಾನದಲ್ಲಿ ಕೂತಿರುವಾಗ ಅವರ ಗೌರವ, ಘನತೆ, ಅವರ ಮೇಲೆ ಇರುವ ನಂಬಿಕೆ ಎಲ್ಲವನ್ನು ಚಿಂತನೆ ಮಾಡಬೇಕು. ಇದೆಲ್ಲವನ್ನು ಪಕ್ಷ ಮಾಡುತ್ತದೆ. ಡಿ.ಕೆ. ಶಿವಕುಮಾರ್ ಅವರು ಇರುವುದೇ ನಂಬಿಕೆ ಮೇಲೆ. ಎಲ್ಲರೂ ನಂಬಿಕೆ ಮೇಲೆ ಬದುಕಬೇಕು. ನಂಬಿಕೆ ಇಲ್ಲದೆ ಬದುಕಲು ಸಾಧ್ಯವೇ? ಎಲ್ಲರೂ ಮತ್ತೊಬ್ಬರನ್ನು ನಂಬಿಯೇ ಜೀವನ ಮಾಡಬೇಕು.

ಪಕ್ಷ ಶಿವಕುಮಾರ್ ಅವರನ್ನು ಡಿಸಿಎಂ ಮಾಡಿದೆ ಎಂದು ಹೇಳಿದಿರಿ, ಅಷ್ಟು ಸಾಕಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಶಿವಕುಮಾರ್ ಅವರು ಪಕ್ಷವನ್ನು ನಂಬಿದ್ದಾರೆ. ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಈಗ ಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಆ ಕಾಲ ಬರುತ್ತದೆಯೋ ಇಲ್ಲವೋ ನನಗೇನು ಗೊತ್ತು, ನಾನು ಹೇಗೆ ಹೇಳಲು ಸಾಧ್ಯ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಅವರ ಭೇಟಿ ವಿಚಾರವಾಗಿ ಮಾತನಾಡಿ, ರಾಮನಗರ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಭೇಟಿ ಮಾಡಿದ್ದೆ. ಸಿಎಂ ಜತೆ ಚರ್ಚಿಸಿ ಫೆಬ್ರವರಿ ಕೊನೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದರು. ಬಜೆಟ್ ಮುಗಿದ ನಂತರ ಮಾಡುವುದಾಗಿ ಹೇಳಿದ್ದಾರೆ. ನಾನು ಹೊಸದಾಗಿ ಅವರನ್ನು ಭೇಟಿ ಮಾಡಿಲ್ಲ. ಸುಮಾರು ಹತ್ತಾರು ಬಾರಿ ಭೇಟಿ ಮಾಡಿದ್ದೇನೆ. ಕ್ಷೇತ್ರದ ಕೆಲಸದ ವಿಚಾರವಾಗಿ ಎಲ್ಲರ ಜತೆಗೂ ಚರ್ಚೆ ಮಾಡುತ್ತೇನೆ.
ಪರಮೇಶ್ವರ್, ಮಹದೇವಪ್ಪ, ಎಂ.ಬಿ ಪಾಟೀಲ್, ಹೆಚ್.ಕೆ ಪಾಟೀಲ್, ಶಿವರಾಜ್ ತಂಗಡಗಿ, ಜಮೀರ್, ಕೃಷ್ಣ ಭೈರೇಗೌಡ ದಿನೇಶ್ ಗುಂಡೂರಾವ್, ರಹೀಮ್ ಖಾನ್, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಸೇರಿ ಎಲ್ಲರನ್ನು ಭೇಟಿ ಮಾಡುತ್ತೇನೆ. ನಾನು ಚುನಾವಣೆಯಲ್ಲಿ ಸೋತಿದ್ದರೂ ಕೆಲಸ ಕಾರ್ಯಕ್ಕಾಗಿ ಜನ ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಸ್ಥಳೀಯವಾಗಿ ಅವರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಇದ್ದಾಗ, ಮಂತ್ರಿಗಳ ಅವಶ್ಯಕತೆ ಬಿದ್ದಾಗ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಎಂದು ಕೇಳಿದಾಗ, "ಮಾಧ್ಯಮಗಳಿಗೆ ಇದೊಂದು ಸುದ್ದಿ. ವಿಶ್ಲೇಷಣೆ ಮಾಡುವವರಿಗೆ ಒಂದು ವಿಚಾರಕ್ಕೆ ಯಾವೆಲ್ಲಾ ಆಯಾಮ ನೀಡಬಹುದು ಅದನ್ನು ನೀಡುವುದು ಅವರ ಕೆಲಸ. ಆದರೆ ನಮ್ಮ ಗುರಿ ಸ್ಪಷ್ಟವಾಗಿದೆ" ಎಂದರು. ಎಲ್ಲಾ ಸಚಿವರಿಗೂ ನಿಮ್ಮ ಮೇಲೆ ವಿಶೇಷ ಕಾಳಜಿ ಇದೆ ಎಂದು ಕೇಳಿದಾಗ, "ನಾನು ಮೊದಲಿನಿಂದಲೂ ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ" ಎಂದರು.












Click it and Unblock the Notifications