Siddaramaiah: ನನ್ನ ಪತ್ನಿಯ ನಿರ್ಧಾರ, ನನಗೂ ಆಶ್ಚರ್ಯ ಉಂಟು ಮಾಡಿದೆ: ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 01: ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ.
ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು.

ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಪತ್ನಿ ಬರೆದ ಪತ್ರದಲ್ಲಿ ಏನಿದೆ?
ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದೆಂದು ನಿರ್ಧಾರಕ್ಕೆ ಬದ್ದಳಾಗಿ ಬದುಕಿದವಳು.
ನಾನೆಂದೂ, ಮನೆ, ಚಿನ್ನ, ಆಸ್ತಿ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ನೋಡಿ ಸಂತೋಷ ಮತ್ತು ಹೆಮ್ಮೆ ಪಟ್ಟವಳು.
ಹೀಗಿದ್ದರೂ, ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ. ನನ್ನ ಸ್ವಂತ ಸಹೋದರ ಅರಸಿನ-ಕುಂಕುಮ ಭಾಗವಾಗಿ ಕೊಟ್ಟ ಜಮೀನಿನ ಬಾಬ್ತು ಪಡೆದು ನಿವೇಶನಗಳು ಇಷ್ಟೊಂದು ರಾದ್ದಾಂತವಾಗುತ್ತದೆ.
ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ.
— Siddaramaiah (@siddaramaiah) September 30, 2024
ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ.
ಈ… pic.twitter.com/tk0C69rL3w
ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎಂದು ನಾನು ಊಹಿಸಿದವಳಲ್ಲ. ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು, ಯಾವುದೂ ಕೂಡಾ ನನ್ನ ಪತಿಯ ಗೌರವ, ಘನತೆ, ಮರ್ಯಾದೆ, ಅವರ ನೆಮ್ಮದಿಗಿಂತ ದೊಡ್ಡದಲ್ಲ.
ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಬಯಸದೇ ಇದ್ದ ನನಗೆ ಈ ನಿವೇಶನಗಳು ತೃಣಕ್ಕೆ ಸಮಾನ. ಈ ಹಿನ್ನಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ 14 ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ. ಈ ಬಗ್ಗೆ ನನ್ನ ಪತಿಯವರ ಅಭಿಪ್ರಾಯ ಏನಿದೆ ಎನ್ನುವುದು ನನಗೆ ತಿಳಿದಿಲ್ಲ. ನನ್ನ ಮಗನ ಬಳಿಯಾಗಲಿ, ನನ್ನ ಕುಟುಂಬದ ಇತರ ಸದಸ್ಯರ ಬಳಿಯಾಗಲಿ ಇದರ ಬಗ್ಗೆ ನಾನು ಚರ್ಚಿಸಿಲ್ಲ. ಇದು ನಾನು ನನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಕೈಗೊಂಡಿರುವ ತೀರ್ಮಾನ ಎಂದು ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications